ಐಸಿಸಿ ಏಕದಿನ ವಿಶ್ವಕಪ್‌ನ ಮುಕ್ತಾಯದ ನಂತರ, ಈಗ ಟಿ20 ವಿಶ್ವಕಪ್ 2024 ರ ಕಡೆಗೆ ಎಲ್ಲ ತಂಡಗಳು ಗಮನ ಹರಿಸಿದೆ. ಇದರ ಮೊದಲ ಹೆಜ್ಜೆಯಾಗಿ ಭಾರತ ತಂಡವು ಈಗಾಗಲೇ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಆಡುತ್ತಿದೆ. ಇದಾದ ಬಳಿಕ ಟೀಮ್ ಇಂಡಿಯಾವು ದಕ್ಷಿಣ ಆಫ್ರಿಕಾ ಪ್ರವಾಸ ಬೆಳೆಸಲಿದೆ. ಇಲ್ಲಿ ಭಾರತವು ಮೂರು ಪಂದ್ಯಗಳ ಟಿ20-ಏಕದಿನ ಸರಣಿ ಮತ್ತು ಎರಡು ಟೆಸ್ಟ್ ಆಡಲಿದೆ.
ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿ ಇಂದು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇದೇವೇಳೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮತ್ತು ಆಯ್ಕೆ ಸಮಿತಿಯು ಮುಂದಿನ ವರ್ಷ ಜೂನ್‌ನಲ್ಲಿ ಅಮೆರಿಕದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಬಗ್ಗೆ ಚರ್ಚಿಸಲು ದೆಹಲಿಯಲ್ಲಿ ಸಭೆ ಸೇರುವ ಸಾಧ್ಯತೆಯಿದೆ.
ಇದರ ನಡುವೆ ಭಾರತ ಟಿ20 ತಂಡಕ್ಕೆ ನಾಯಕ ಯಾರು?, ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಯಾರು ಮುನ್ನಡೆಸಲಿದ್ದಾರೆ ಎಂಬ ಪ್ರಶ್ನೆ ಎದ್ದಿದೆ. ಹಾರ್ದಿಕ್ ಇಂಜುರಿಯಿಂದ ಗುಣಮುಖರಾಗದ ಕಾರಣ ರೋಹಿತ್ ಶರ್ಮಾ ಅವರನ್ನು ಕರೆತರುವ ಬಗ್ಗೆ ಬಿಸಿಸಿಐ ಚರ್ಚಿಸುತ್ತಿದೆ.
ಏಕದಿನ ವಿಶ್ವಕಪ್ನಲ್ಲಿ ರೋಹಿತ್ ತಂಡವನ್ನು ಮುನ್ನಡೆಸಿದ ರೀತಿ ಕಂಡು ಬಿಸಿಸಿಐ ಖಷಿ ಆಗಿದೆ. ಸದ್ಯ ಪಿಟಿಐ ವರದಿಯ ಪ್ರಕಾರ, ಬಿಸಿಸಿಐ ರೋಹಿತ್ ಅವರನ್ನು ಟಿ20 ನಾಯಕನಾಗಿ ಹಿಂತಿರುಗಿಸಲು ಬಯಸುತ್ತಿದೆ. ಹಿಟ್ಮ್ಯಾನ್ ಮನವೊಲಿಸಲು ಬಿಸಿಸಿಐ ಮುಂದಾಗಿದೆ. ಸದ್ಯಕ್ಕೆ, ಸೂರ್ಯ ಮತ್ತು ರೋಹಿತ್ ಎರಡು ಹೆಸರುಗಳಿವೆ.
ಆಫ್ರಿಕಾ ವಿರುದ್ಧದ ಪ್ರವಾಸ ಮೂಲಕ ರೋಹಿತ್ ಏಕದಿನ ಮತ್ತು ಟೆಸ್ಟ್‌ಗಳಲ್ಲಿ ಪೂರ್ಣ ಸಮಯದ ನಾಯಕನಾಗಿ ಮರಳಲಿದ್ದಾರೆ. ಆದರೆ, ಆಫ್ರಿಕಾ ಪ್ರವಾಸದ ವೈಟ್ ಬಾಲ್ ಕ್ರಿಕೆಟ್ನಿಂದ ವಿರಾಟ್ ಕೊಹ್ಲಿ ಹಿಂದೆ ಸರಿದಿದ್ದಾರೆ ಎಂದು ವರದಿಯಾಗಿದೆ. ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ ಕೂಡ ಟೆಸ್ಟ್ ಸರಣಿಯಲ್ಲಿ ಆಡಲಿದ್ದಾರೆ.
ಭಾರತದ ದ. ಆಫ್ರಿಕಾ ಪ್ರವಾಸವು T20I ಪಂದ್ಯದೊಂದಿಗೆ ಪ್ರಾರಂಭವಾಗುತ್ತದೆ. ಮೊದಲ ಪಂದ್ಯ ಡಿಸೆಂಬರ್ 10 ರಂದು ಡರ್ಬನ್‌ನಲ್ಲಿ ನಡೆಯಲಿದೆ. ಡಿಸೆಂಬರ್ 12 ರಂದು ಗ್ಕೆಬರ್ಹಾದಲ್ಲಿ ಎರಡನೇ ಮತ್ತು ಜೋಹಾನ್ಸ್‌ಬರ್ಗ್‌ನಲ್ಲಿ ಮೂರನೇ ಟಿ20 ಪಂದ್ಯ ಆಯೋಜಿಸಲಾಗಿದೆ.
ಡಿಸೆಂಬರ್ 17 ರಂದು ಜೊಹಾನ್ಸ್ಬರ್ಗ್ನಲ್ಲಿ ಮೊದಲ ಏಕದಿನ ಪಂದ್ಯ, ಎರಡನೇ-ಮೂರನೇ ಪಂದ್ಯ ಗ್ಕೆಬರ್ಹಾದಲ್ಲಿ ಮತ್ತು ಪಾರ್ಲ್‌ನಲ್ಲಿ ನಡೆಯಲಿದೆ. ಡಿಸೆಂಬರ್ 26 ರಿಂದ 30 ರವರೆಗೆ ಸೆಂಚುರಿಯನ್ ನಲ್ಲಿ ಮತ್ತು ಜನವರಿ 3 ರಿಂದ 7 ರವರೆಗೆ ಕೇಪ್ ಟೌನ್ ನಲ್ಲಿ ಟೆಸ್ಟ್ ಪಂದ್ಯಗಳನ್ನು ಆಯೋಜಿಸಲಾಗಿದೆ.