ಟೀಮ್ ಇಂಡಿಯಾಕ್ಕೆ ಬಂತು ಆನೆ ಬಲ: 4ನೇ ಟಿ20 ಮುನ್ನ ತಂಡ ಸೇರಿಕೊಂಡ ಸ್ಫೋಟಕ ಬ್ಯಾಟರ್

ಏಕದಿನ ವಿಶ್ವಕಪ್ ಮುಗಿದ ಬಳಿಕ ಭಾರತ ತಂಡ ಸದ್ಯ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಆಡುತ್ತಿದೆ. ಈಗಾಗಲೇ ಮೂರು ಪಂದ್ಯಗಳು ಮುಕ್ತಾಯಗೊಂಡಿದ್ದು, ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಮ್ ಇಂಡಿಯಾ 2-1 ಮುನ್ನಡೆ ಸಾಧಿಸಿದೆ. ಇನ್ನೆರಡು ಪಂದ್ಯ ಬಾಕಿ ಉಳಿದಿದ್ದು ರೋಚಕತೆ ಸೃಷ್ಟಿಸಿದೆ.

ಭಾರತ-ಆಸ್ಟ್ರೇಲಿಯಾ ನಾಲ್ಕನೇ ಟಿ20 ಪಂದ್ಯ ಡಿಸೆಂಬರ್ 1 ಶುಕ್ರವಾರದಂದು ರಾಯ್​ಪುರದ ಶಹೀದ್ ವೀರ್ ನಾರಾಯಣ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಇದಕ್ಕೂ ಮುನ್ನ ಭಾರತಕ್ಕೆ ಆನೆ ಬಲ ಬಂದಂತಾಗಿದೆ. ತಂಡಕ್ಕೆ ಸ್ಫೋಟಕ ಬ್ಯಾಟರ್ ಎಂಟ್ರಿ ಕೊಟ್ಟಿದ್ದಾರೆ.

ಏಕದಿನ ವಿಶ್ವಕಪ್ ಬಳಿಕ ಆಸೀಸ್ ವಿರುದ್ಧದ ಟಿ20 ಸರಣಿಯ ಮೊದಲ ಮೂರು ಪಂದ್ಯಗಳಿಂದ ವಿಶ್ರಾಂತಿ ಪಡೆದುಕೊಂಡಿದ್ದ ಶ್ರೇಯಸ್ ಅಯ್ಯರ್ ಇದೀಗ ನಾಲ್ಕು ಮತ್ತು ಐದನೇ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಸೇರಿಕೊಂಡಿದ್ದಾರೆ. ಅಮೋಘ ಲಯದಲ್ಲಿರುವ ಅಯ್ಯರ್ ಈ ಟಿ20 ಸರಣಿಯಲ್ಲಿ ಉಪನಾಯಕ ಕೂಡ ಆಗಿದ್ದಾರೆ.

ಶ್ರೇಯಸ್ ಅಯ್ಯರ್ ಅವರು ನಾಲ್ಕನೇ ಟಿ20ಪಂದ್ಯದಲ್ಲಿ ಪ್ಲೇಯಿಂಗ್ ಇಲೆವೆನ್ ನಲ್ಲಿ ಸ್ಥಾನ ಪಡೆಯುವುದು ಖಚಿತ. ಯಾವಾಗಲೂ ಮಧ್ಯಮ ಕ್ರಮಾಂಕದಲ್ಲಿ ಆಡುವ ಅಯ್ಯರ್​ಗೆ ಇಲ್ಲಿ ಯಾರು ಸ್ಥಾನ ಬಿಟ್ಟುಕೊಡುತ್ತಾರೆ ಎಂಬುದು ನೋಡಬೇಕು. ಮೇಲ್ನೋಟಕ್ಕೆ ತಿಲಕ್ ವರ್ಮಾ ಬದಲಿಗೆ ಅಯ್ಯರ್ ಅವರನ್ನು ಪ್ಲೇಯಿಂಗ್ ಇಲೆವೆನ್‌ನಲ್ಲಿ ಸೇರಿಸಿಕೊಳ್ಳುವ ಸಂಭವವಿದೆ.

ರಿಂಕು ಸಿಂಗ್ ಅವರು ಹೊಸ ಫಿನಿಶರ್ ಆಗಿ ಹೊರಹೊಮ್ಮಿದ್ದಾರೆ. ಮತ್ತು ಅವರ ಸ್ಥಾನದಲ್ಲಿ ಭಾರತ ತಂಡವು ಯಾವುದೇ ಬದಲಾವಣೆಗಳನ್ನು ಮಾಡುವಂತೆ ತೋರುತ್ತಿಲ್ಲ. ಒಂದು ವೇಳೆ ಅಯ್ಯರ್ ಅವರನ್ನು ಟಾಪ್-4ರಲ್ಲಿ ಬ್ಯಾಟಿಂಗ್ ಮಾಡಲು ಬಯಸಿದರೆ, ಟಾಪ್-3 ರಲ್ಲಿರುವ ಒಬ್ಬ ಬ್ಯಾಟ್ಸ್‌ಮನ್‌ಗೆ ವಿಶ್ರಾಂತಿ ನೀಡಬಹುದು.

ಈ ಸರಣಿಯಲ್ಲಿ ರುತುರಾಜ್ ಗಾಯಕ್ವಾಡ್ ಮತ್ತು ಯಶಸ್ವಿ ಜೈಸ್ವಾಲ್ ಭಾರತಕ್ಕೆ ಆರಂಭಿಕರಾಗಿದ್ದಾರೆ. ಇಶಾನ್ ಕಿಶನ್ ಮೂರನೇ ಕ್ರಮಾಂಕದಲ್ಲಿ ಆಡುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ರುತುರಾಜ್ ಶತಕ ಸಿಡಿಸಿದ್ದರು. ಕಿಶನ್ ಸರಣಿಯಲ್ಲಿ 2 ಅದ್ಭುತ ಅರ್ಧಶತಕಗಳನ್ನು ಗಳಿಸಿದ್ದಾರೆ. ಯಶಸ್ವಿಯೂ ಅರ್ಧಶತಕ ಗಳಿಸಿದ್ದರು.

ಗಾಯಕ್ವಾಡ್-ಯಶಸ್ವಿ-ಕಿಶನ್ ಈ ಮೂವರು ಆಟಗಾರರು ಮುಂದಿನ ಟಿ20 ವಿಶ್ವಕಪ್‌ ದೃಷ್ಟಿಯಿಂದ ಟೀಮ್ ಇಂಡಿಯಾಗೆ ಪ್ರಮುಖರಾಗಿದ್ದಾರೆ. ಇವರನ್ನು ಕೈಬಿಡುವುದು ಅನುಮಾನ. ಹೀಗಾಗಿ ಅಯ್ಯರ್ ತಿಲಕ್ ವರ್ಮಾ ಜಾಗದಲ್ಲಿ ಆಡುವುದು ಬಹುತೇಕ ಖಚಿತವಾಗಿದೆ. ಅಂತೆಯೆ ದೀಪಕ್ ಚಹರ್ ಕೂಡ ತಂಡ ಸೇರಿದ್ದು, ಆಡುವ ಬಳಗದಲ್ಲಿ ಕಾಣಿಸಿಕೊಳ್ಳುತ್ತಾರ ನೋಡಬೇಕು