ವಿಶ್ವ ಸ್ತನ್ಯಪಾನ ದಿನಾಚರಣೆ ಕಾರ್ಯಕ್ರಮ

ಯಲ್ಲಾಪುರ: ತಾಲೂಕಿನ ಮಲವಳ್ಳಿಯ ಅಂಗನವಾಡಿ ಕೇಂದ್ರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ವಿಶ್ವ ಸ್ತನ್ಯಪಾನ ದಿನಾಚರಣೆ, ತೀವೃ ಅತಿಸಾರ ನಿಯಂತ್ರಣ ಮತ್ತು ರಾಷ್ಟ್ರೀಯ ಜಂತು ನಿವಾರಣಾ ಜಾಗೃತಿ ಕಾರ್ಯಕ್ರಮ ನಡೆಯಿತು.

ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುಚೇತಾ ಮದ್ಗುಣಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಗರ್ಭಿಣಿಯರು ಹಾಗೂ ಹಾಲುಣಿಸುವ ತಾಯಂದಿರು ಹುಟ್ಟಿನಿಂದ ಮಕ್ಕಳಿಗೆ ಹಾಲುಣಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಎಂದರು. ಬಳಿಕ ಸ್ತನ್ಯಪಾನದ ಮಹತ್ವ, ಜಂತು ಹುಳು ನಿಯಂತ್ರಿಸುವ ಮುಂಜಾಗೃತಾ ಕ್ರಮ, ಕೈತೊಳೆಯುವ ವಿಧಾನ ಹಾಗೂ ಅತಿಸಾರದಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ವಿವರಿಸಿದರು.

ಕಾರ್ಯಕ್ರಮದ ನಂತರ ಅಂಗನವಾಡಿ ಮಕ್ಕಳಿಗೆ ಝಿಂಕ್ ಗುಳಿಗೆ ಮತ್ತು ಓ.ಆರ್.ಎಸ್. ಪೊಟ್ಟಣವನ್ನು ವಿತರಿಸಲಾಯಿತು. ಆರೋಗ್ಯ ಇಲಾಖೆ ಸಿಬ್ಬಂದಿ ಮಹಾಲಕ್ಷ್ಮಿ ಪಟಗಾರ, ಎಸ್.ಚೈತ್ರ ಗೌಡ, ಆಶಾ ಕಾರ್ಯಕರ್ತೆಯರಾದ ಸ್ವಾತಿ ಹುಲಸ್ವಾರ್, ರೂಪಾ ಗೌಡ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.