ಶ್ರೀಲಂಕಾ ವಿರುದ್ಧ ಏಕದಿನ, ಟಿ20 ಸರಣಿ ಆಡಲಿದೆ ಭಾರತ; ಯಾವಾಗ ಗೊತ್ತಾ?

ಭಾರತ ತಂಡ ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯನ್ನು ಆಡುತ್ತಿದೆ. ಇದಾದ ಬಳಿಕ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಲಿದೆ. ಅಲ್ಲಿ ಭಾರತ ಮೂರು ಏಕದಿನ, ಮೂರು ಟಿ20 ಮತ್ತು 2 ಟೆಸ್ಟ್ ಪಂದ್ಯಗಳನ್ನು ಆಡಬೇಕಾಗಿದೆ. ನಂತರ ಭಾರತ ತಂಡ ಅಫ್ಘಾನಿಸ್ತಾನ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಫೆಬ್ರವರಿ ಮತ್ತು ಮಾರ್ಚ್​ನಲ್ಲಿ ಟೀಂ ಇಂಡಿಯಾ, ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲಿದೆ. ಇದಾದ ನಂತರ ಎಲ್ಲಾ ಆಟಗಾರರು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಭಾಗವಹಿಸಲಿದ್ದಾರೆ. ನಂತರ ತಂಡವು 2024 ರ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಲಿದೆ. ಟಿ20 ವಿಶ್ವಕಪ್ ಬಳಿಕ ಟೀಂ ಇಂಡಿಯಾ ನೆರೆಯ ರಾಷ್ಟ್ರದೊಂದಿಗೆ ಸರಣಿ ಆಡಲಿದೆ. ಈ ಬಗ್ಗೆ ಲಂಕಾ ಕ್ರಿಕೆಟ್ ಮಂಡಳಿ ಮಾಹಿತಿ ನೀಡಿದೆ.

ಏಕದಿನ ಹಾಗೂ ಟಿ20 ಸರಣಿ

ಶ್ರೀಲಂಕಾ ಕ್ರಿಕೆಟ್ ಮಂಡಳಿಯು 2024 ರ ತನ್ನ ತಂಡದ ಅಂತರಾಷ್ಟ್ರೀಯ ಕ್ಯಾಲೆಂಡರ್ ಅನ್ನು ಪ್ರಕಟಿಸಿದ್ದು, ಇದರಲ್ಲಿ ವೆಸ್ಟ್ ಇಂಡೀಸ್ ಮತ್ತು ಅಮೆರಿಕಾದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ನಂತರ ಶ್ರೀಲಂಕಾ ತಂಡವು,  ಭಾರತದ ವಿರುದ್ಧ ಸರಣಿಯನ್ನು ಆಡಲಿದೆ. ಟಿ20 ವಿಶ್ವಕಪ್ ನಂತರ ಟೀಂ ಇಂಡಿಯಾ, ಶ್ರೀಲಂಕಾ ಪ್ರವಾಸ ಮಾಡಲಿದ್ದು. ಅಲ್ಲಿ ಮೂರು ಏಕದಿನ ಹಾಗೂ ಮೂರು ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ. ಆದರೆ ಈ ಪಂದ್ಯಗಳ ದಿನಾಂಕವನ್ನು ಇನ್ನೂ ಪ್ರಕಟಿಸಲಾಗಿಲ್ಲ.

ಮುಂದಿನ ವರ್ಷದ ಲಂಕಾ ವೇಳಾಪಟ್ಟಿ ಹೀಗಿದೆ

ಶ್ರೀಲಂಕಾ ಕ್ರಿಕೆಟ್ ತಂಡವು ಮುಂದಿನ ವರ್ಷ ಜಿಂಬಾಬ್ವೆ, ಅಫ್ಘಾನಿಸ್ತಾನ, ಭಾರತ, ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳಿಗೆ ಆತಿಥ್ಯ ವಹಿಸಲಿದೆ. ಮುಂದಿನ ವರ್ಷ ನ್ಯೂಜಿಲೆಂಡ್ ತಂಡ ಎರಡು ಬಾರಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಹಾಗೆಯೇ ಮುಂದಿನ ವರ್ಷ, ಶ್ರೀಲಂಕಾ ಕ್ರಿಕೆಟ್ ತಂಡವು ಬಾಂಗ್ಲಾದೇಶ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನು, ಇಂಗ್ಲೆಂಡ್ ವಿರುದ್ಧ ಮೂರು ಟೆಸ್ಟ್ ಪಂದ್ಯಗಳನ್ನು ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಮುಂದಿನ ವರ್ಷ, ಶ್ರೀಲಂಕಾ ತಂಡವು ಒಟ್ಟು 10 ಟೆಸ್ಟ್‌, 21 ಏಕದಿನ ಮತ್ತು 18 ಟಿ20 ಪಂದ್ಯಗಳನ್ನು (ಟಿ20 ವಿಶ್ವಕಪ್ ಪಂದ್ಯಗಳು ಒಳಗೊಂಡಿಲ್ಲ) ಆಡಲಿದೆ.