ಬಿ.ಆರ್​.ಪಾಟೀಲ್ ಪತ್ರ ಜಟಾಪಟಿ; ರಾಜ್ಯದಲ್ಲಿ ಕಾಂಗ್ರೆಸ್​ ಒಡೆದ ಮನೆ ಎಂದ ಆರ್.ಅಶೋಕ್

ಕಲಬುರಗಿ, ನ.29: ಕಾಂಗ್ರೆಸ್​ನ ಹಿರಿಯ ನಾಯಕ, ಆಳಂದ ಕ್ಷೇತ್ರದ ಶಾಸಕ ಬಿ.ಆರ್​.ಪಾಟೀಲ್ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದು, ಸಚಿವ ಕೃಷ್ಣ ಭೈರೇಗೌಡ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇದು ಕೈ ಪಡೆಯಲ್ಲಿ ಶಾಸಕರು ಸಚಿವರ ಜಟಾಪಟಿ ಇನ್ನೂ ಆರದ ಬೆಂಕಿಯಾಗಿದೆ ಅನ್ನೋದಕ್ಕೆ ಸಾಕ್ಷಿ ನುಡೀತಿದೆ. ಮತ್ತೊಂದೆಡೆ ವಿರೋಧ ಪಕ್ಷದ ನಾಯಕರು ಕೂಡು ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್​ ಒಡೆದ ಮನೆಯಾಗಿದೆ ಎಂದು ​ವಿರೋಧ ವಿಪಕ್ಷ ನಾಯಕ ಆರ್.ಅಶೋಕ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಕಳೆದ ಅಧಿವೇಶನದಲ್ಲಿ KRIDL ಕಾಮಗಾರಿಗಳ ವಿಚಾರವಾಗಿ, ಲಂಚ ಪಡೆದು ಕಾಮಗಾರಿ ಮಾಡಿಸಿದ್ದೇನೆ ಅಂತಾ ನನ್ನ ವಿರುದ್ಧ ಆರೋಪ ಬಂದಿದೆ. ಕೃಷ್ಣಭೈರೇಗೌಡರು ಸದನದಲ್ಲಿ ಅಂದು ಆಡಿದ್ದ ಮಾತು ನನ್ನ ಮೇಲೆ ಅನುಮಾನ ಬರುವಂತೆ ಮಾಡಿದೆ. ಹೀಗಾಗಿ ಈ ಬಗ್ಗೆ ತನಿಖೆ ನಡೆಸಿ, ನನ್ನನ್ನು ಆರೋಪ ಮುಕ್ತ ಗೊಳಿಸಿ, ಇಲ್ದೆ ಇದ್ರೆ ಆರೋಪ ಹೊತ್ತು ಬೆಳಗಾವಿ ಅಧಿವೇಶನಕ್ಕೆ ಬರಲು ಆಗಲ್ಲ. ಒಂದ್ವೇಳೆ ಬಂದ್ರೆ ಆರೋಪ ಒಪ್ಪಿಕೊಂಡಂತೆ ಆಗುತ್ತೆ ಎಂದು ಸಿಎಂಗೆ ಶಾಸಕ ಬಿ.ಆರ್​.ಪಾಟೀಲ್ ಪತ್ರ ಬರೆದಿದ್ದಾರೆ. ಅಷ್ಟೇ ಅಲ್ಲ ಆರೋಪ ಸಾಬೀತಾದ್ರೆ ರಾಜೀನಾಮೆ ಕೊಡೋದಾಗಿ ಹೇಳಿದ್ದಾರೆ. ಆದರೆ ಇದಕ್ಕೆ ಸ್ಪಷ್ಟನೆ ನೀಡಿರುವ ಕೃಷ್ಣಭೈರೇಗೌಡ ಈ ವಿಚಾರವಾಗಿ ಸಿಎಂ ಅಭಿಪ್ರಾಯ ತೆಗೆದುಕೊಳ್ತಾರೆ. ನನ್ನ ಮಾತನ್ನ ಅವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಅಂತಾ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

ಬಿ.ಆರ್​.ಪಾಟೀಲ್​ ಬರೆದ ಪತ್ರದ ಬಗ್ಗೆ ಸಿಎಂ ನಿರ್ಣಯ ಮಾಡುತ್ತಾರೆ. ಸದನದಲ್ಲಿ ಏನು ಹೇಳಿದ್ದೇನೆ ಎಂಬುವುದರ ಬಗ್ಗೆ ಮಾಹಿತಿ ನೀಡುತ್ತೇನೆ. ಶಾಸಕ B.R​.ಪಾಟೀಲ್ ಹೇಳಿಕೆಗೆ ನಾನು ಯಾವುದೇ ಪ್ರತಿಕ್ರಿಯೆ ಕೊಡಲ್ಲ. ಈ ವಿಷಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನನ್ನು ಸಂಪರ್ಕಿಸಿಲ್ಲ. ಅಂತಿಮವಾಗಿ ಸಿಎಂ ಅವರೇ ಈ ಕುರಿತು ತೀರ್ಮಾನ ಮಾಡುತ್ತಾರೆ ಎಂದರು.

ಇವರು ಹೇಗಾದ್ರೂ ಕಿತ್ತಾಡಲಿ, ನಮಗೆ ರಾಜ್ಯದ ಜನರ ಹಿತ ಮುಖ್ಯ

ರಾಜ್ಯದಲ್ಲಿ ಕಾಂಗ್ರೆಸ್​ ಒಡೆದ ಮನೆಯಾಗಿದೆ ಎಂದು ​ಬೆಂಗಳೂರಿನಲ್ಲಿ ವಿರೋಧ ವಿಪಕ್ಷ ನಾಯಕ ಆರ್.ಅಶೋಕ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್​ನಲ್ಲಿ ಯಾವಾಗ ಬೆಂಕಿ ಹೊತ್ತಿ ಉರಿಯುತ್ತೋ ಗೊತ್ತಿಲ್ಲ. ಇವರು ಹೇಗಾದ್ರೂ ಕಿತ್ತಾಡಲಿ, ನಮಗೆ ರಾಜ್ಯದ ಜನರ ಹಿತ ಮುಖ್ಯ. ಬಿ.ಆರ್.ಪಾಟೀಲ್ ಕೊನೆ ಹಂತಕ್ಕೆ ಬಂದಿದ್ದಾರೆ ಅನ್ನೋದು ತಿಳಿದಿದೆ‌. ಬಿ.ಆರ್.ಪಾಟೀಲ್ ಸಿಎಂಗೆ ಬರೆದ ಪತ್ರದ ಬಗ್ಗೆ ಸದನದಲ್ಲಿ ಚರ್ಚೆ ಆಗುತ್ತೆ. ಇನ್ನೆರಡು ದಿನಗಳಲ್ಲಿ ಜೆಡಿಎಸ್-ಬಿಜೆಪಿ ಕೂತು ಸಭೆ ಮಾಡ್ತೇವೆ ಎಂದರು.

ರಾಜ್ಯದಲ್ಲಿ ಸರ್ಕಾರದ ವಿರುದ್ಧ ಕಾಂಗ್ರೆಸ್​ ಶಾಸಕರೇ ದಂಗೆ ಎದ್ದಿದ್ದಾರೆ. ನಾವು ಇದನ್ನು ಮೊದಲಿನಿಂದಲೂ ಹೇಳುತ್ತಲೇ ಬಂದಿದ್ದೇವೆ. ಆಳಂದ ಶಾಸಕ ಬಿ.ಆರ್.ಪಾಟೀಲ್ ಎರಡನೇ ಬಾರಿ ಪತ್ರ ಬರೆದಿದ್ದಾರೆ. ಬಿ.ಆರ್.ಪಾಟೀಲ್​ರಂಥ ಧೈರ್ಯವಂತರು ಮಾತ್ರ ಮಾತನಾಡಿದ್ದಾರೆ. ಉಳಿದ ಶಾಸಕರು ಹೆದರಿ ಕುಳಿತಿದ್ದಾರೆ, ಮಂತ್ರಿಗಳು ಹೆದರಿಸುತ್ತಿದ್ದಾರೆ. ಮಂತ್ರಿಗಳು ಮಾತ್ರವಲ್ಲ, ಅವರ ಪಿಎಗಳು ಕೂಡ ದಂಧೆ ಮಾಡ್ತಿದ್ದಾರೆ ಎಂದು ಆರ್, ಅಶೋಕ್ ಆರೋಪಿಸಿದ್ದಾರೆ.

ಆಡಳಿತ ಶಾಸಕರ ಪರಿಸ್ಥಿತಿ ಹೀಗಾದರೆ ಜನರ ಪರಿಸ್ಥಿತಿ ಏನಾಗಬಹುದು?

ಸಿಎಂಗೆ ಆಳಂದ ಶಾಸಕ ಬಿ.ಆರ್.ಪಾಟೀಲ್ ಪತ್ರ ಬರೆದಿರುವ ವಿಚಾರ ಸಂಬಂಧ ಮೈಸೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಇದರಿಂದ ಅಪಘಾತ ಅಥವಾ ಹಿಟ್ ವಿಕೆಟ್ ಆಗಬಹುದು ಕಾದು ನೋಡಿ. ಇದು ಕೇವಲ B.R.ಪಾಟೀಲ್ ಸಮಸ್ಯೆಯಲ್ಲ, ಇಡೀ ವ್ಯವಸ್ಥೆಯ ಸಮಸ್ಯೆ. ಇದರಿಂದ ಸರ್ಕಾರಕ್ಕೆ ಕಂಟಕವಾಗುತ್ತಾ ಎಂಬುವುದನ್ನು ಕಾದು ನೋಡಿ. ಪಾಟೀಲ್​ ಪತ್ರದಿಂದ ಏನಾಗುತ್ತೆ ಅಂತಾ ಹೇಳಲು ನಾನು ಜ್ಯೋತಿಷಿ ಅಲ್ಲ. ಸಚಿವರಿಂದ ಮನನೊಂದು ಶಾಸಕ B.R.ಪಾಟೀಲ್ ಪತ್ರ ಬರೆದಿದ್ದಾರೆ. ಆಡಳಿತ ಶಾಸಕರ ಪರಿಸ್ಥಿತಿ ಹೀಗಾದರೆ ಜನರ ಪರಿಸ್ಥಿತಿ ಏನಾಗಬಹುದು? ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರದ ಬಗ್ಗೆ ಜನರಿಗೂ ಅನುಮಾನ ಮೂಡಿದೆ. ಅಭಿವೃದ್ಧಿ ಕೆಲಸಗಳನ್ನು ಅಕ್ರಮ ಎನ್ನುವ ಅನುಮಾನದಲ್ಲಿ ನೋಡಲಾಗ್ತಿದೆ. ಅಕ್ರಮ ಅನ್ನೋ ಅನುಮಾನದಲ್ಲಿ ನೋಡುವುದು ಸರ್ವೆ ಸಾಮಾನ್ಯವಾಗಿದೆ. ಸಿಎಂಗೆ ಪತ್ರ ಬರೆದು ಬಿ.ಆರ್.ಪಾಟೀಲ್ ತನಿಖೆಗೆ ಒತ್ತಾಯ ಮಾಡಿದ್ದಾರೆ. ಆದರೆ ಸದನಕ್ಕೆ ಬರಲ್ಲ ಅಂತಾ ಹೇಳಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಕಾಂಗ್ರೆಸ್ ಸರ್ಕಾರದಲ್ಲಿ ಶಾಸಕರಿಗೆ ಎಷ್ಟು ಬೆಲೆ ಇದೆ ಅಂತಾ ಗೊತ್ತಾಗ್ತಿದೆ. ಆಡಳಿತ ಪಕ್ಷ ಮುಂದೆ ಏನಾಗುತ್ತದೆ ಅನ್ನೋ ಚರ್ಚೆ ಆರಂಭವಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಚಿಂತನೆ ಮಾಡಬೇಕು ಎಂದು ಕುಮಾರಸ್ವಾಮಿ ಹೇಳಿದರು.