ಕಾಶಿಯಾತ್ರೆ ಯೋಜನೆಯಡಿ ಏಕಕಾಲಕ್ಕೆ 400 ಭಕ್ತಾಧಿಗಳಿಂದ ತೀರ್ಥಯಾತ್ರೆ: ದಿವ್ಯ ದರ್ಶನ ಸಿಗಲಿ ಎಂದು ಶುಭ ಹಾರೈಸಿದ ಪ್ರಲ್ಹಾದ ಜೋಶಿ

ಹುಬ್ಬಳ್ಳಿ, ನ.29: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಕಾಶಿ ಯಾತ್ರೆ ಯೋಜನೆಯಡಿಯಲ್ಲಿಇಂದು ಕಾಶಿ ವಿಶ್ವನಾಥ ಸನ್ನಿಧಾನಕ್ಕೆ‌ ಧಾರವಾಡದ ಶ್ರೀ ಬಸವೇಶ್ವರ ಅರ್ಬನ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ 400 ಜನ ಭಕ್ತಾಧಿಗಳು ಕಾಶಿಯಾತ್ರೆ ಕೈಗೊಂಡಿದ್ದಾರೆ. ಈ ವೇಳೆ ಸಂಸದ ಪ್ರಲ್ಹಾದ ಜೋಶಿಯವರ ಬೆಂಬಲಿಗರು ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಈ ಎಲ್ಲಾ 400 ಭಕ್ತರನ್ನು ವಿಶೇಷವಾಗಿ ಸತ್ಕರಿಸಿ, ಸಿಹಿ ನೀಡಿ ಬೀಳ್ಕೊಟ್ಟಿದ್ದು ವಿಶೇಷ‌ವಾಗಿತ್ತು.

ಈ ಶುಭ ಸಂದರ್ಭವನ್ನು ತಮ್ಮ ಸಾಮಾಜಿಕ ಜಾಲತಾಣಗಳ ಪುಟದಲ್ಲಿ ಚಿತ್ರ ಸಹಿತ ಹಂಚಿಕೊಂಡಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು, “ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿಯ ಯೋಚನೆ ದೇಶಾದ್ಯಂತ ಯಾವ ರೀತಿ ಸಂಚಲನ ಸೃಷ್ಟಿಸುತ್ತಿದೆ ಎಂಬುದಕ್ಕೆ ಕಾಶಿ ಕ್ಷೇತ್ರವೇ ಸಾಕ್ಷಿ. ಕಾಶಿಯನ್ನು ಪುನರುತ್ಥಾನ ಮಾಡುವ ಮೂಲಕ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯೂ ಹೆಚ್ಚುತ್ತಿದೆ. ಇಂದು ಧಾರವಾಡದಿಂದ ಕಾಶಿಗೆ ಹೊರಟವರಲ್ಲಿ ಹಿರಿಯರು ಮಹಿಳೆಯರು ಅತೀ ಹೆಚ್ಚು ಕಂಡುಬಂದಿದ್ದು ವಿಶೇಷವಾಗಿತ್ತು. ಎಲ್ಲಾ ಭಕ್ತಾದಿಗಳ ಪಯಣ ಸುಖಕರವಾಗಿರಲಿ, ಎಲ್ಲರಿಗೂ ಶ್ರೀ ಭವ್ಯ ಕಾಶಿಯ ದಿವ್ಯ ದರ್ಶನ ಸಿಗಲಿ ಎಂದು ಹಾರೈಸುತ್ತೇನೆ” ಎಂದಿದ್ದಾರೆ.