ಬೆಂಗಳೂರಲ್ಲಿ ಹಲವು ಸರ್ಕಾರಿ ಶಾಲೆಗಳ ಕಟ್ಟಡವು ಶಿಥಿಲಗೊಂಡಿದ್ದು, ಮಕ್ಕಳು ನಿತ್ಯ ಹೆದರುತ್ತಲೇ ಶಾಲೆಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ಬಡವರ ಮಕ್ಕಳು ಹೋಗುವ ಈ ಸರ್ಕಾರಿ ಶಾಲೆಯ ಪರಿಸ್ಥಿತಿ ತೀರಾ ಶೋಚನೀಯವಾಗಿದೆ. ಹೆಸರಿಗೆ ಮಾದರಿ ಸರ್ಕಾರಿ ಶಾಲೆ ಆದರೆ ಯಾವಾಗ ನೆಲ ಕಚ್ಚುತ್ತೋ ಎನ್ನುವ ಭಯದಲ್ಲಿ ಮಕ್ಕಳಿದ್ದಾರೆ.
ಬೆಳ್ಳಂದೂರಿನಲ್ಲಿರುವ ಈ ಸರ್ಕಾರಿ ಮಾದರಿ ಶಾಲೆ 95 ವರ್ಷಕ್ಕಿಂತಲೂ ಹಳೆಯದು. ಕಟ್ಟಡವೆಲ್ಲವೂ ಶಿಥಿಲಗೊಂಡಿದ್ದು, ಬೀಳುವ ಆತಂಕ ಎದುರಾಗಿದೆ. ಅಲ್ಲಲ್ಲಿ ಬಿರುಕು ಬಿಟ್ಟಿದೆ, ಸುಮಾರು 500 ಕ್ಕೂ ಹೆಚ್ಚು ಮಕ್ಕಳು ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಮಕ್ಕಳು ಕೂರಲು ಜಾಗವಿಲ್ಲದ ಕಾರಣ ಕಾರ್ ಶೆಡ್ನಲ್ಲಿ ಪಾಠ ಮಾಡಲಾಗುತ್ತಿದೆ, ಶಾಲೆಯ ಪಕ್ಕದಲ್ಲಿ ವಿದ್ಯುತ್ ಟ್ರಾನ್ಸ್ಫಾರ್ಮರ್ ಕೂಡ ಇದೆ. ದಯಮಾಡಿ ದೊಡ್ಡ ಮಟ್ಟದ ಅನಾಹುತವಾಗುವ ಮುನ್ನ ಶಾಲೆ ಕಟ್ಟಿಸಿಕೊಡಿ ಎನ್ನುತ್ತಿರುವ ಮಕ್ಕಳ ಪೋಷಕರು.
ಇಲ್ಲಿ ಓದುತ್ತಿರುವ ಮಕ್ಕಳಲ್ಲಿ ಕೂಲಿ ಕಾರ್ಮಿಕರೇ ಹೆಚ್ಚು, ಬಡವರ ಮಕ್ಕಳ ಜೀವಕ್ಕೆ ಬೆಲೆ ಇಲ್ವಾ ಎನ್ನುವ ಪ್ರಶ್ನೆ ಎದ್ದಿದೆ. ಹೀಗಾಗಿ ಬಿಬಿಎಂಪಿ ಅಧಿಕಾರಿಗಳು, ಶಿಕ್ಷಣ ಸಚಿವರು ಈ ಬಗ್ಗೆ ಗಮನಹರಿಸಿ ನೂತನ ಕಟ್ಟಡ ನಿರ್ಮಿಸಿ ಮಕ್ಕಳ ಜೀವ ಉಳಿಸಿ ಎಂಬುದು ನಮ್ಮ ಕಳಕಳಿಯ ಮನವಿ.
ಶಿವಾಜಿನಗರದಲ್ಲಿ ನರ್ಸರಿ ಶಾಲೆಯ ಕಟ್ಟಡ ಕುಸಿದಿತ್ತು
ಬೆಂಗಳೂರಿನ ಶಿವಾಜಿನಗರದಲ್ಲಿ ನರ್ಸರಿ ಶಾಲೆ ಕಟ್ಟಡವೊಂದು ಕುಸಿದುಬಿದ್ದಿತ್ತು. ಶಿವಾಜಿನಗರದ ಕುಕ್ಸ್ ರೋಡ್ ನ ಬಿ ಕ್ರಾಸ್ ನಲ್ಲಿರುವ ಬಿಬಿಎಂಪಿಯ ನರ್ಸರಿ ಶಾಲೆ ಇಂದು (ನವೆಂಬರ್ 27) ಬೆಳಗಿನ ಜಾವ ನಸುಕಿನ ಜಾವ ಬಿದ್ದಿದೆ. ಪರಿಣಾಮ ಕಟ್ಟಡ ಅವಶೇಷದಡಿ ವಾಹನಗಳು ಸಿಲುಕಿ ಸಂಪೂರ್ಣವಾಗಿ ಜಖಂ ಆಗಿತ್ತು, ಅದೃಷ್ಟವಶಾತ್ ಶಾಲೆಯಲ್ಲಿ ಮಕ್ಕಳು ಇಲ್ಲದ ವೇಳೆ ಕಟ್ಟಡ ಬಿದ್ದಿದೆ. ಇದರಿಂದ ಅನಾಹುತವೊಂದು ತಪ್ಪಿದಂತಾಗಿದೆ.
ಆದರೆ ಈ ಮಕ್ಕಳ ಅದೃಷ್ಟ ಚೆನ್ನಾಗಿತ್ತು ಯಾರಿಗೂ ಏನೂ ಅಪಾಯವಾಗಿಲ್ಲ. ಆದರೆ ಈ ಬೆಳ್ಳಂದೂರು ಶಾಲೆಯಲ್ಲಿ ತರಗತಿ ನಡೆಯುವಾಗಲೇ ಅನಾಹುತ ಸಂಭವಿಸಿದರೆ ಏನು ಗತಿ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ.