ಚಿನ್ನಕಂಡಾಕ್ಷಣ ಯಾರದ್ದಾದರೇನು ಎಂದು ತೆಗೆದುಕೊಂಡು ಹೋಗುವವರೇ ಹೆಚ್ಚು, ಅಂತಹ ಸಮಯದಲ್ಲಿ ಚಿನ್ನದುಂಗುರವನ್ನು ಮಾಲೀಕರಿಗೆ ಒಪ್ಪಿಸಿದ ಹೋಂಗಾರ್ಡ್ಸ್ ಪ್ರಾಮಾಣಿಕತೆಗೆ ಎಲ್ಲೆಡೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಹೊಸ ಶಾಖೆಯಲ್ಲಿ ಅಸೋಸಿಯೇಟ್ ಆಗಿ ಕೆಲಸ ಮಾಡುತ್ತಿರುವ ದಿವ್ಯಾ ಪ್ರಿಯದರ್ಶಿನಿ ಎಂಬುವವರು ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಮೆಟ್ರೋ ನಿಲ್ದಾಣದಿಂದ ಬೆನ್ನಿಗಾನಹಳ್ಳಿ ನಿಲ್ದಾಣಕ್ಕೆ ಮೆಟ್ರೋದಲ್ಲಿ ಪ್ರಯಾಣ ಬೆಳೆಸಿದ್ದರು.
ಅಲ್ಲಿಂದ ತಮ್ಮ ಬ್ಯಾಂಕ್ಗೆ ಹೋಗಿದ್ದಾರೆ, ಬೆನ್ನಿಗಾನಹಳ್ಳಿ ನಿಲ್ದಾಣದಿಂದ ಹೊರಡುವಾಗ ಉಂಗುರ ಇಲ್ಲದಿರುವುದು ಗೊತ್ತಾಗಿದೆ. ತಕ್ಷಣವೇ ಕಂಟ್ರೋಲ್ ರೂಂಗೆ ಕರೆ ಮಾಡಿ ಮಾಹಿತಿ ಕೊಟ್ಟಿದ್ದರು.
ಅಲ್ಲಿದ್ದ ಹೋಂಗಾರ್ಡ್ಸ್ ಚಿನ್ನದ ಉಂಗುರ ಸಿಕ್ಕದ ತಕ್ಷಣ ಅದನ್ನು ಸಹಾಯಕ ಸುರಕ್ಷತಾ ಅಧಿಕಾರಿಗೆ ಒಪ್ಪಿಸಿದ್ದಾರೆ. ಸೋಮವಾರ ಸಂಜೆ 6.45ರ ಸುಮಾರಿಗೆ ಬೆನ್ನಿಗಾನಹಳ್ಳಿ ಮೆಟ್ರೋ ನಿಲ್ದಾಣದ 2ನೇ ಪ್ಲಾಟ್ಫಾರ್ಮ್ನಲ್ಲಿ ರೈಲು ನಿಂತಾಗ ರೈಲಿನ ಲೇಡಿಸ್ ಕೋಚ್ ಬಳಿ ಉಂಗುರು ಬಿದ್ದಿತ್ತು.
ಆ ಉಂಗುರವನ್ನು ಗಮನಿಸಿದ ಹೋಂಗಾರ್ಡ್‌ಗಳಾದ ಶಿಲ್ಪಾ ಜಿ ಆರ್ ಮತ್ತು ಈಶ್ವರಮ್ಮ ಅವರು ಬಿಎಂಆರ್ಸಿಎಲ್ ಸಹಾಯಕ ಸುರಕ್ಷತಾ ಅಧಿಕಾರಿ ಕೆಎನ್ ರಾಜಣ್ಣ ಅವರಿಗೆ ಹಸ್ತಾಂತರಿಸಿದ್ದಾರೆ.
ಇದೀಗ ಆ ಉಂಗುರವನ್ನು ದಿವ್ಯಾ ಅವರಿಗೆ ನೀಡಲಾಗಿದೆ, ಹೋಂ ಗಾರ್ಡ್ಸ್ ಪ್ರಾಮಾಣಿಕತೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಉಂಗುರ ಸುಮಾರು 30 ಸಾವಿರ ರೂ.ನಷ್ಟು ಬೆಲೆಬಾಳುವಂಥದ್ದಾಗಿತ್ತು.