ಬೆಂಗಳೂರು, (ನವೆಂಬರ್ 28): ಸ್ಯಾಂಡಲ್‌ವುಡ್ ನಿರ್ಮಾಪಕ ಹಾಗೂ ನಟ ರಾಕ್‌ಲೈನ್ ವೆಂಕಟೇಶ್ ಅವರ ಸಹೋದರನ ಮನೆ ಕಳ್ಳತನ ಪ್ರಕರಣವನ್ನು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ಭೇದಿಸಿದ್ದು, ಕಳ್ಳತನ ಮಾಡಿದ್ದ ನೇಪಾಳಿ ಗ್ಯಾಂಗ್ ಅನ್ನು ಬಂಧಿಸಿದ್ದಾರೆ. ರಾಕ್‌ಲೈನ್ ವೆಂಕಟೇಶ್ ಅವರ ತಮ್ಮ ಭ್ರಮರೇಶ್ ಅವರು ಕುಟುಂಬ ಸಮೇತ ಕಳೆದ ತಿಂಗಳು ಯುರೋಪ್ಗೆ ಪ್ರವಾಸ ಹೋಗಿದ್ದ ವೇಳೆ ಮನೆ ಕಳ್ಳತನವಾಗಿತ್ತು. ಈ ಸಂಬಂಧ ಇದೀಗ ಪೊಲೀಸರು, 7 ಆರೋಪಿಗಳ ತಂಡವನ್ನು ಅರೆಸ್ಟ್ ಮಾಡಿದ್ದು, ಬಂಧಿತರಿಂದ ಸುಮಾರು ಮೂರು ಕೆ.ಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಒಂದಲ್ಲ ಎರಡಲ್ಲ 3 ತಿಂಗಳುಗಳ ಕಾಲ ಸ್ಕೆಚ್
ರಾಕ್‌ಲೈನ್ ವೆಂಕಟೇಶ್ ಅವರ ತಮ್ಮ ಭ್ರಮರೇಶ್ ಅವರ ಮನೆಗೆ ಕನ್ನ ಹಾಕಲು ಈ ನೇಪಾಳಿ ಗ್ಯಾಂಗ್ ಒಂದಲ್ಲ ಎರಡಲ್ಲ ಬರೋಬ್ಬರಿ ಮೂರು ತಿಂಗಳುಗಳ ಕಾಲ ಸ್ಕೆಚ್ ಹಾಕಿತ್ತು ಎಂದು ತಿಳಿದುಬಂದಿದೆ. ಭ್ರಮರೇಶ್ ಅವರ ನಿವಾಸದ ಪಕ್ಕದ ನಿರ್ಮಾಣ ಹಂತದ ಕಟ್ಟಡದಿಂದಲ್ಲಿ ಕುಳಿತುಕೊಂಡು ಮನೆ ದರೋಡೆಗೆ ಪ್ಲ್ಯಾನ್ ಮಾಡಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.
ಮೂರು ತಿಂಗಳನಿಂದ ಕಾದ ಈ ನೇಪಾಳಿ ಗ್ಯಾಂಗ್, ಭ್ರಮರೇಶ್ ಅವರು ಕುಟುಂಬ ಅಕ್ಟೋಬರ್ನಲ್ಲಿ ಯೂರೋಪ್ ಪ್ರವಾಸಕ್ಕೆ ಹೋಗುತ್ತಿದ್ದಂತೆಯೇ ಇತ್ತ ಮನೆಗೆ ಕನ್ನ ಹಾಕಿದ್ದು, ಸುಮಾರು 5 ಕೆಜಿ ಚಿನ್ನಾಭರಣ ದೋಚಿ ಪರಾರಿಯಾಗಿತ್ತು. ಇನ್ನು ಪ್ರವಾಸ ಮುಗಿಸಿಕೊಂಡು ಅಕ್ಟೋಬರ್ 30ರಂದು ವಾಪಸ್ ಮನೆಗೆ ಬಂದ ಬಳಿಕ ಕಳ್ಳತನವಾಗಿರುವುದು ಬೆಳಕಿಗೆ ಬಂದಿತ್ತು. ಕೂಡಲೇ ಭ್ರಮರೇಶ್ ಅವರು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪೊಲೀಸರು ನಿರಂತರ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.