ಬೆಂಗಳೂರು, (ನವೆಂಬರ್ 28): ಕೇಂದ್ರ ಚುನಾವಣಾ ಆಯೋಗವು ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ನೋಟೀಸ್ ಜಾರಿ ಮಾಡಿದೆ. ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕ ಸರ್ಕಾರ ಮಾಡಿರುವ ಸಾಧನೆಗಳನ್ನು ಜಾಹೀರಾತು ನೀಡಿರುವುದನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿದ್ದು, ಚುನಾವಣಾ ಸಂದರ್ಭದಲ್ಲಿ ನೆರೆಯ ರಾಜ್ಯದಲ್ಲಿ ಜಾಹೀರಾತು ನೀಡುವುದು ಚುನಾವಣಾ ನಿಯಮಗಳ ಉಲ್ಲಂಘನೆಯಾಗುತ್ತದೆ ಎಂದು ಆಯೋಗ ಹೇಳಿದೆ. ಈ ಸಂಬಂಧ ಮಂಗಳವಾರ ಸಂಜೆ 5 ಗಂಟೆಯೊಳಗೆ ವಿವರಣೆ ನೀಡುವಂತೆ ಕರ್ನಾಟಕ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ನೀಡಿದೆ.
ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್, ಕರ್ನಾಟಕ ಸರ್ಕಾರದ ಜಾಹೀರಾತುಗಳನ್ನು ನೀಡಿತ್ತು. ಇದಕ್ಕೆ ಬಿಜೆಪಿ ದೂರು ನೀಡಿದ್ದರಿಂದ ಕೇಂದ್ರ ಚುನಾವಣೆ ಆಯೋಗ ಬ್ರೇಕ್ ಹಾಕಿತ್ತು.
ಕರ್ನಾಟಕ ಸರ್ಕಾರವು ಕಳೆದ ಕೆಲವು ದಿನಗಳಿಂದ ತೆಲಂಗಾಣದಲ್ಲಿ ಇಂಗ್ಲಿಷ್ ಮತ್ತು ಸ್ಥಳೀಯ ಮಾಧ್ಯಮಗಳಲ್ಲಿ ಜಾಹೀರಾತುಗಳನ್ನು ಪ್ರಕಟಿಸಿತ್ತು. ಈ ಮೂಲಕ ಕಾಂಗ್ರೆಸ್ ಜನತಾ ಪ್ರಾತಿನಿಧ್ಯ ಕಾಯ್ದೆ ಮತ್ತು ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಕೇಂದ್ರ ಸಚಿವ ಭೂಪೇಂದರ್ ಯಾದವ್, ಮಾಜಿ ಸಚಿವ ಪ್ರಕಾಶ್ ಜಾವಡೇಕರ್ ಮತ್ತು ಪಕ್ಷದ ಮುಖಂಡರಾದ ಸುಧಾಂಶು ತ್ರಿವೇದಿ ಮತ್ತು ಓಂ ಪಾಠಕ್ ಸೇರಿದಂತೆ ಬಿಜೆಪಿ ನಿಯೋಗ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಬಿಜೆಪಿ ದೂರಿನ ಬಳಿಕ ಚುನಾವಣಾ ಆಯೋಗ ಇದೀಗ ಕರ್ನಾಟಕ ಸರ್ಕಾರದ ಜಾಹಿರಾತುಗಳನ್ನು ತೆಲಂಗಾಣದಲ್ಲಿ ನಿಷೇಧಿಸಿದೆ. ಅಲ್ಲದೇ ಈ ಬಗ್ಗೆ ವಿವರಣೆ ನೀಡುವಂತೆ ನೋಟಿಸ್ ಜಾರಿ ಮಾಡಿದೆ.