ಹೆಂಡತಿಯನ್ನ ಕೊಲೆ ಮಾಡಿದ್ದ ರೌಡಿಯನ್ನು ಕೊನೆಗೂ ಹುಬ್ಬಳ್ಳಿ ಪೊಲೀಸರು ಮಾಸ್ಟರ್ ಪ್ಲ್ಯಾನ್ ಹಾಕಿ ಸಿನಿಮೀಯ ಶೈಲಿಯಲ್ಲಿ ಬಂಧಿಸಿದರು

ಆತ ನಟೋರಿಯಸ್ ರೌಡಿ, ಹಲವು ಪೊಲೀಸ್ ಠಾಣೆಗೆ ಬೇಕಾದಂತ ಕ್ರಿಮಿನಲ್. ಆತನ‌ ಮೇಲೆ ವಾರಂಟ್ ಜಾರಿಯಾಗಿತ್ತು. ಆದ್ರೂ ಕೋರ್ಟ್‌ಗೆ ಹಾಜರಾಗದೆ, ಪೊಲೀಸರ ಕಣ್ತಪ್ಪಿಸಿ ತಿರುಗಾಡುತ್ತಿದ್ದ. ಆ ನಟೋರಿಯಸ್ ರೌಡಿಯನ್ನ‌‌ ಕೊನೆಗೂ ಪೊಲೀಸರು ಮಾಸ್ಟರ್ ಪ್ಲ್ಯಾನ್ ಮಾಡಿ ಖೆಡ್ಡಾಕ್ಕೆ ಕೆಡವಿದ್ದಾರೆ ಸತೀಶ್ ಗೋನಾ… ಈತ ನಟೋರಿಯಸ್ ರೌಡಿ ಇತನ‌ ಮೇಲೆ ಹುಬ್ಬಳ್ಳಿಯ ಅನೇಕ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆಗೆ ಯತ್ನ, ಕಿಡ್ನಾಪ್​, ಬೆದರಿಕೆ, ವಸೂಲಿ ಸೇರಿದಂತೆ ಅನೇಕ ಪ್ರಕರಣಗಳು ಈತನ ಮೇಲಿವೆ. ಈ ಸತೀಶ್ ಗೋನಾ ಕಳೆದ ಎರಡೂ ವರ್ಷಗಳ ಹಿಂದೆ ತಾಳಿ ಕಟ್ಟಿದ ಹೆಂಡತಿಯನ್ನೇ ಬರ್ಬರವಾಗಿ ಕೊಲೆ ಮಾಡಿದ್ದ. ಪೆಟ್ರೋಲ್ ಸುರಿದು ಪತ್ನಿಯನ್ನೇ ಕೊಲೆ ಮಾಡಿ ಪರಾರಿಯಾಗಿದ್ದ.

ಅಲ್ಲಿಂದ ಇಲ್ಲಿಯವರೆಗೂ ಈತನ ಬಂಧನಕ್ಕೆ ಪೊಲೀಸರು ಬಲೆ ಬೀಸುತ್ತಲೆ ಇದ್ದರು. ಖಾಕಿ ಪಡೆ ಬೀಸಿದ ಬಲೆಗೆ ಬೀಳದೆ, ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗುತ್ತಾ ಇದ್ದ. ಈತನ ಮೇಲೆ ಕೋರ್ಟ್‌ ವಾರಂಟ್ ಸಹ ಜಾರಿ ಮಾಡಿತ್ತು. ಕೋರ್ಟ್‌ಗೂ ಈ ನಟೋರಿಯಸ್ ರೌಡಿ ಹಾಜರಾಗಿರಲಿಲ್ಲ. ಹೀಗಾಗಿ ಈತನನ್ನ ಹೇಗಾದ್ರೂ ಮಾಡಿ ಬಂಧಿಸಬೇಕೆಂದು ಪೊಲೀಸರು ತೀರ್ಮಾನ ಮಾಡ್ತಾರೆ. ಅದರಂತೆ ಮೊನ್ನೆ ಶನಿವಾರ ಅದಕ್ಕೆ ಸಮಯ ಕೂಡಿ ಬರುತ್ತದೆ.

ನಟೋರಿಯಸ್ ರೌಡಿ ಸತೀಶ ಗೋನಾ ವ್ಯಕ್ತಿ ಓರ್ವನಿಗೆ ಪೋನ್ ಮಾಡಿ ನಿನ್ನ ಮರ್ಡರ್ ಮಾಡ್ತೇನಿ ಅಂತ ಅವಾಜ್ ಹಾಕಿರ್ತಾನೆ. ಸಾರ್ವಜನಿಕ ಸ್ಥಳದಲ್ಲಿಯೇ ಕೈಯಲ್ಲಿ ತಲ್ವಾರ ಹಿಡಿದು ಕೊಲೆ ಮಾಡಲು ಹೊಂಚು ಹಾಕುತ್ತಾ ಹುಬ್ಬಳ್ಳಿಯ ಗದಗ ರಸ್ತೆಯ ರೇಲ್ವೆ ಬ್ರಿಜ್ ಬಳಿ ಕಾಯುತ್ತಾ ಕುಳಿತಿದ್ದ. ಈ ಕುರಿತು ಶಹರ‌ ಠಾಣೆ ಪೊಲೀಸರಿಗೆ ಮಾಹಿತಿ ಬರುತ್ತದೆ.‌ ವಿಷಯ ತಿಳಿದ ಸಬ್ ಇನ್ಸ್ಪೆಕ್ಟರ್ ವಿನೋದ ದೊಡ್ಡಲಿಂಗಪ್ಪನವರ ಆ್ಯಂಡ್ ಟೀಮ್ ನಟೋರಿಯಸ್ ರೌಡಿ ಸತೀಶನನ್ನ ಸಿನಿಮೀಯ ರೀತಿಯಲ್ಲಿ ಅರೆಸ್ಟ್ ಮಾಡಿದಾರೆ. ಸಿನಿಮೀಯ ರೀತಿಯಲ್ಲಿ ಅರೆಸ್ಟ್ ಮಾಡುವ ದೃಶ್ಯ ಸಿಸಿಟಿವಿಯಲ್ಲಿಯೂ ಸೆರೆಯಾಗಿದೆ. ಅರೆಸ್ಟ್ ಮಾಡಿದ ಪೊಲೀಸರು ವಿಚಾರಣೆ ನಡೆಸಿ ಸಾಯಂಕಾಲ ಸ್ಥಳ ಮಹಜರು ಮಾಡಲು ಕರೆತಂದಿದ್ದಾರೆ. ಇದೇ ಸಮಯದಲ್ಲಿ ಪಿಎಸ್‌ಐ ಮೇಲೆ ಸೇಡು ತೀರಿಸಿಕೊಳ್ಳಲು ನಟೋರಿಯಸ್ ರೌಡಿ ಮುಂದಾಗಿದ್ದಾನೆ. ಇಲ್ಲಿಯವರೆಗೂ ನಾನು ಯಾರ ಕೈಗೂ ಸಿಕ್ಕಿರಲಿಲ್ಲ. ಇವನಿಂದ ನನ್ನ ಬಂಧನ ಆಗಿದೆ ಎಂದು ಕಲ್ಲಿನಿಂದ ಪಿಎಸ್‌ಐಗೆ ಹಲ್ಲೆ ಮಾಡಿದ್ದಾನೆ. ಇದರಿಂದಾಗಿ ಸತೀಶ್ ಗೋನಾ ಮೇಲೆ ಇನ್ಸ್ಪೆಕ್ಟರ್ ರಫೀಕ ತಹಶಿಲ್ದಾರ ಫೈರಿಂಗ್ ಮಾಡಿದ್ದಾರೆ.

ನಟೋರಿಯಸ್ ರೌಡಿ ಹಲ್ಲೆಯಿಂದ ಕೂದಲೆಳೆಯ ಅಂತರದಲ್ಲಿ ಪಿಎಸ್‌ಐ ವಿನೋದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಾರಣಾಂತಿಕವಾಗಿ ಹಲ್ಲೆಗೊಳಗಾದ ಪಿಎಸ್‌ಐ‌ಗೆ ಕಿಮ್ಸ್‌ನಲ್ಲಿ ಚಿಕಿತ್ಸೆ ಮುಂದುವರಿದಿದೆ. ಆರೋಪಿ ಮೇಲೆ ಐದು ಪ್ರಕರಣಗಳಿವೆ, ಈತ ನಟೋರಿಯಸ್ ರೌಡಿ ಶೀಟರ್. ಆರೋಪಿ ಬಂಧನಕ್ಕೆ ಕೋರ್ಟ್ ವಾರೆಂಟ್ ಇತ್ತು. ಎರಡು ವರ್ಷಗಳಿಂದ ಆರೋಪಿ ಸತೀಶ್ ಗೋನಾ ತಲೆ ಮರೆಸಿಕೊಂಡಿದ್ದ.

ಪುಡಿ ರೌಡಿ, ನಟೋರಿಯಸ್ ರೌಡಿಗಳ ಮೇಲೆ ಪೊಲೀಸರು ಬಿಗಿ ಹಿಡಿತ ಇಟ್ಟಿದ್ದರು. ವಾರೆಂಟ್ ಕಾರ್ಯಗತ ಮಾಡಲು ಪೊಲೀಸರು ಹೋಗಿರ್ತಾರೆ. ಆಗ ಅಲ್ಲಿ ತಲ್ವಾರ್ ಸಿಗುತ್ತೆ ಅದನ್ನ ಠಾಣೆಗೆ ತಂದು ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ರಾತ್ರಿ 9 ಗಂಟೆ ಸುಮಾರಿಗೆ ಸ್ಥಳ ಮಹಜರು ಮಾಡೋಕೆ ಪೊಲೀಸರು ತೆರಳಿದ್ದರು. ಹುಬ್ಬಳ್ಳಿಯ ಟೌನ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ತಂಡ ತೆರಳಿತ್ತು. ಪಿಎಸ್ಐ ವಿನೋದ ಮೇಲೆ ಆರೋಪಿ ಕಲ್ಲಿನಿಂದ ದಾಳಿ ಮಾಡಿದ್ದಾನೆ‌. ಈ ವೇಳೆ ಇನ್ಸ್ಪೆಕ್ಟರ್ ರಫೀಕ್ ತಹಶೀಲ್ದಾರ್ ಮೂರು ಸುತ್ತಿನ ಗುಂಡು ಹಾರಿಸಿದ್ದಾರೆ. ಗಾಳಿಯಲ್ಲಿ ಎರಡು ಹಾರಿಸಿ, ಒಂದು ಗುಂಡು ಕಾಲಿಗೆ ಹಾರಿಸಿದ್ದಾರೆ. ಘಟನೆ ಹಿನ್ನೆಲೆ ಕಿಮ್ಸ್ ಆಸ್ಪತ್ರೆಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಭೇಟಿ ನೀಡಿ PSI ವಿನೋದ ಅವರ ಆರೋಗ್ಯ ವಿಚಾರಣೆ ಮಾಡಿದ್ದಾರೆ.

ಕಳೆದ ಹದಿನೈದು ದಿನಗಳಿಂದ ಅವಳಿನಗರದಲ್ಲಿ ಪೊಲೀಸರು ಖಡಕ್ ಕಾರ್ಯಾಚರಣೆ ಮಾಡುತ್ತಿದ್ದಾರೆ. ರೌಡಿಗಳು ಮತ್ತು ಪುಡಿ ರೌಡಿಗಳಿಗೆ ಬಿಸಿ ಮುಟ್ಟಿಸುವ ಕೆಲಸ‌ ಮಾಡುತ್ತಿದ್ದಾರೆ. ಈ ನಡುವೆ ನಟೋರಿಯಸ್ ರೌಡಿ ಕಾಲಿಗೆ ಪೊಲೀಸರು ಗುಂಡೇಟು ಹಾಕಿದ್ದಾರೆ. ಇದು ಸಣ್ಣಪುಟ್ಟ ವಿಷಗಳಿಗೆ ಬಾಲ ಬಿಚ್ಚುವ ರೌಡಿಗಳಿಗೆ ಎಚ್ಚರಿಕೆ ಗಂಟೆಯಾಗಿದೆ.