ಮಹಾರಾಷ್ಟ್ರ: ಸಿಡಿಲು ಬಡಿದು ಕಟ್ಟಡಕ್ಕೆ ಹೊತ್ತಿಕೊಂಡ ಬೆಂಕಿ, ಪಾಲ್ಘಡದಲ್ಲಿ ಓರ್ವ ಸಾವು

ಮಹಾರಾಷ್ಟ್ರದಲ್ಲಿ ಸಿಡಿಲು, ಗುಡುಗು ಸಹಿತ ಮಳೆಯಾಗುತ್ತಿದೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಟ್ಟಡವೊಂದು ಭಾನುವಾರ ಬೆಳಗ್ಗೆ ಸಿಡಿಲು ಬಡಿದು ಬೆಂಕಿ ಹೊತ್ತಿಕೊಂಡಿದ್ದು, ಥಾಣೆ ಮತ್ತು ನೆರೆಯ ಪಾಲ್ಘಡ ಜಿಲ್ಲೆಯ ಹಲವು ಭಾಗಗಳಲ್ಲಿ ಮುಂಜಾನೆ ಭಾರಿ ಮಳೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಥಾಣೆಯ ಭಿವಂಡಿ ಪಟ್ಟಣದ ಕಲ್ಹೇರ್ ಪ್ರದೇಶದ ದುರ್ಗೇಶ್ ಪಾರ್ಕ್ ಪ್ರದೇಶದಲ್ಲಿರುವ ಕಟ್ಟಡದ ಪ್ಲಾಸ್ಟಿಕ್ ಮೇಲ್ಛಾವಣಿಯಲ್ಲಿ ಬೆಳಗ್ಗೆ 6:45 ರ ಸುಮಾರಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಭಿವಂಡಿ ನಿಜಾಂಪುರ್ ಮುನ್ಸಿಪಲ್ ಕಾರ್ಪೊರೇಶನ್‌ನ ವಿಪತ್ತು ನಿರ್ವಹಣಾ ಕೋಶದ ಅಧಿಕಾರಿ ಸಖೀಬ್ ಖರ್ಬೆ ತಿಳಿಸಿದ್ದಾರೆ.

ಘಟನೆಯಲ್ಲಿ ಯಾವುದೇ ವ್ಯಕ್ತಿ ಗಾಯಗೊಂಡಿಲ್ಲ, ಬೆಂಕಿಯಿಂದ ಕಟ್ಟಡದ ಪ್ಲಾಸ್ಟಿಕ್ ಛಾವಣಿಗೆ ಹಾನಿಯಾಗಿದೆ ಎಂದು ಅವರು ಹೇಳಿದರು. ಮಾಹಿತಿ ಪಡೆದ ನಂತರ ಅಗ್ನಿಶಾಮಕ ವಾಹನ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಲಾಗಿದೆ ಎಂದು ಅವರು ಹೇಳಿದರು. ಪಾಲ್ಘರ್‌ನಲ್ಲಿ, ಮಳೆಯ ನಂತರ ಕೆಲವು ಮೋಟಾರ್‌ಬೈಕ್ ಅಪಘಾತಗಳು ವರದಿಯಾಗಿವೆ.

ಅಂತಹ ಒಂದು ಘಟನೆಯಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಪಾಲ್ಘಡ ಜಿಲ್ಲೆಯ ಗ್ರಾಮೀಣ ನಿಯಂತ್ರಣ ಕೊಠಡಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜಸ್ಥಾನ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ಕೆಲವು ಭಾಗಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದ್ದು ಇಂದು ಭಾರಿ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ನವೆಂಬರ್ 26 ರಂದು ಪೂರ್ವ ರಾಜಸ್ಥಾನದಲ್ಲಿ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.