ಸ್ವಾತಂತ್ರ್ಯ ಸಂಗ್ರಾಮ ಭವನಕ್ಕಿಲ್ಲ ರಕ್ಷಣೆಯ ಗೋಡೆ; ಆತಂಕದಿಂದ ದೂರ ಸರಿದ ಆಡುವ ಮಕ್ಕಳು; ನಿರ್ಲಕ್ಷತನದ ಹೊಣೆಗಾರರು ಯಾರು?

ಅಂಕೋಲಾ: ಅಂಕೋಲಾ ತಾಲೂಕಿನಲ್ಲಿ ಸ್ವಾತಂತ್ರ್ಯ ಹೋರಾಟದ ನೆನಪಿಗೆ ಪಟ್ಟಣದ ಮುಖ್ಯ ಬಸ್ ನಿಲ್ದಾಣದ ಎದುರಿನಲ್ಲಿಯೇ ಸ್ವಾತಂತ್ರ್ಯ ಸಂಗ್ರಾಮ ಭವನವನ್ನು ನಿರ್ಮಿಸಲಾಗಿದೆ. ಅಲ್ಲಿಯೇ ಗಾಂಧಿ ಮೈದಾನವಿದ್ದು ಕಿರು ಉದ್ಯಾನವನವೊಂದನ್ನು ಹಾಗೂ ಇನ್ನೊಂದು ಅಂಚಿಗೆ ರೋಟರಿ ಕ್ಲಬ್ ಸಹಕಾರದಿಂದ ಮಕ್ಕಳ ಉದ್ಯಾನವನವೊಂದು ನಿರ್ಮಾಣವಾಗಿತ್ತು.
ಇದೀಗ ಸ್ವಾತಂತ್ರ್ಯ ಸಂಗ್ರಾಮ ಭವನದ ಆವರಣ ಗೋಡೆ ಈ ವರ್ಷದ ಮುಂಗಾರಿನ ಆರಂಭಿಕ ಹಂತದಲ್ಲಿ ಕುಸಿದು ಬಿದ್ದಿದ್ದು ಆಡಳಿತ ವೈಫಲ್ಯದಿಂದಾಗಿ ಇದುವರೆಗೆ ಪುನಃ ನಿರ್ಮಾಣವಾಗದ ಕಾರಣ ಅಂಚಿನಲ್ಲಿರುವ ಮಕ್ಕಳ ಉದ್ಯಾನವನಕ್ಕೆ ಕಂಟಕ ಎದುರಾಗಿದೆ. ಸ್ವಾತಂತ್ರ್ಯ ಸಂಗ್ರಾಮ ಭವನದ ಗತಿಯೇ ಈ ರೀತಿ ಆದರೆ ಜನಸಾಮಾನ್ಯರ ಗೋಳು ಕೇಳುವರು ಯಾರು? ಕರ್ನಾಟಕದ ಬಾರ್ಡೋಲಿಯಲ್ಲಿನ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ನೀಡುವವರಾರು? ಎಂಬ ಪ್ರಶ್ನೆ ಉದ್ಭವವಾಗಿದೆ.


ಈ ವರ್ಷ ತಾಲೂಕಿನಲ್ಲಿ ಮುಂಗಾರು ಬಿರುಸಿನಿಂದ ಅಬ್ಬರಿಸಿತ್ತು. ಪ್ರವಾಹದ ಮುನ್ಸೂಚನೆಯನ್ನು ನೀಡಿದ್ದೂ ಹಲವಡೆ ಮಳೆ ಹಾನಿಯೂ ಸಂಭವಿಸಿತ್ತು. ಅದರೊಂದಿಗ ಸ್ವಾತಂತ್ರ್ಯ ಸಂಗ್ರಾಮದ ಹಂಚಿನಲ್ಲಿರುವ ಮಕ್ಕಳ ಉದ್ಯಾವನಕ್ಕೆ ಹೊಂದಿಕೊಂಡಿರುವ ತಡೆಗೋಡೆಯು ಕುಸಿದು ಬಿದ್ದಿತ್ತು. ಆವರಣ ಗೋಡೆ ಕುಸಿದು ಬಿದ್ದಿರುವ ಸ್ಥಳವು ಅಂಕೋಲಾದ ಪಟ್ಟಣದ ಪ್ರಮುಖ ಮಾರ್ಗವಾಗಿರುವ ದಿನಕರ ದೇಸಾಯಿ ರಸ್ತೆಗೆ ಕೇವಲ ಎರಡು ಮೀಟರ್ ಅಂತರದಲ್ಲಿದೆ.

ಅಲ್ಲಿಯವರೆಗೆ ಮಾನಸಿಕ ಒತ್ತಡವನ್ನು ಮರೆಯಲು ಮತ್ತು ತಮ್ಮ ಮಕ್ಕಳಿಗೆ ಮೋಜಿನ ಆಟಗಳನ್ನು ಆಡುವಂತೆ ತೊಡಗಿಸಿಕೊಳ್ಳಲು ಹಲವು ಪೋಷಕರು ಇಲ್ಲಿಗೆ ಭೇಟಿ ನೀಡುತ್ತಿದ್ದರು. ಕಳೆದ ಕೆಲವು ದಶಕಗಳ ಹಿಂದೆ ರೋಟರಿ ಕ್ಲಬ್ ವತಿಯಿಂದ ಸ್ವಾತಂತ್ರ್ಯ ಸಂಗ್ರಾಮ ಭವನದ ಈ ಭಾಗದಲ್ಲಿ ಸುಸಜ್ಜಿತವಾದ ಮಕ್ಕಳ ಉದ್ಯಾನವನ ನಿರ್ಮಾಣವಾಗಿತ್ತು. ಪಟ್ಟಣದ ವ್ಯಾಪ್ತಿಯಲ್ಲಿ ಇರುವ ಏಕೈಕ ಮಕ್ಕಳ ಉದ್ಯಾನವನ ಎಂದು ಪ್ರಚಲಿತವಾಗಿತ್ತು. ದಿನ ಕಳೆದಂತೆ ನಿರ್ವಹಣೆಯ ಸಮಸ್ಯೆಯ ಕಾರಣ ಇಲ್ಲಿನ ಆಟೋಪಕರಣಗಳಿಗೆ ತುಕ್ಕು ಹಿಡಿದು ಕೆಲವು ಕೆಟ್ಟು ನಿಂತಿದ್ದವು. ಇನ್ನು ಕೆಲವು ಸಲಕರಣೆಗಳು ಬಳಕೆ ಮಾಡಲಾಗದ ಹಂತವನ್ನು ತಲುಪಿದ್ದವು. ಆದಾಗಿಯೂ ಏಕೈಕ ಉದ್ಯಾನವನವಾಗಿರುವ ಕಾರಣ ಪೋಷಕರು ಇಲ್ಲಿಗೆ ಮಕ್ಕಳನ್ನು ಕರೆ ತರುತ್ತಿದ್ದರು. ಕಳೆದ ನಾಲ್ಕು ತಿಂಗಳ ಹಿಂದೆ ಉದ್ಯಾನವನದ ಆವರಣ ಗೋಡೆ ಕುಸಿತವಾಗಿದೆ.

ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷದಿಂದ ಅಥವಾ ಆಡಳಿತಾತ್ಮಕ ಕಾರಣಗಳಿಂದ ಕೇವಲ ನಾಲ್ಕರಿಂದ ಐದು ಮೀಟರ್ ಆವರಣ ಗೋಡೆ ಕುಸಿತವಾಗಿದ್ದರೂ ಇದುವರೆಗೆ ಪುನಃ ನಿರ್ಮಾಣಗೊಂಡಿಲ್ಲ. ಈ ಬಗ್ಗೆ ತಾಲೂಕಿನ ಸಾಮಾಜಿಕ ಹೋರಾಟಗಾರರು ಸಂಘಟನೆಗಳ ಪ್ರಮುಖರು ಮತ್ತು ಮಕ್ಕಳ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಸಾಮಾಜಿಕ ಕಾರ್ಯಕರ್ತ ಉಮೇಶ್ ನಾಯ್ಕ, ಪುರಸಭೆಯ ನಿರ್ಲಕ್ಷದಿಂದಾಗಿ ಮಕ್ಕಳ ಉದ್ಯಾನವನದ ಆವರಣ ಗೋಡೆ ಪುನಃ ನಿರ್ಮಾಣವಾಗಿಲ್ಲ. ಈ ಬಗ್ಗೆ ಕೇಳಿದರೆ ಇಲ್ಲಸಲ್ಲದ ನೆಪಗಳನ್ನು ಹೇಳಲಾಗುತ್ತಿದೆ. ಮೇಲಾಧಿಕಾರಿಗಳು ಈ ಬಗ್ಗೆ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಈ ಬಗ್ಗೆ ಪುರಸಭೆಯ ಮುಖ್ಯ ಅಧಿಕಾರಿಯವರನ್ನು ಹಲವು ಬಾರಿ ದೂರವಾಣಿಯ ಮೂಲಕ ಸಂಪರ್ಕಿಸಲಾಯಿತಾದರೂ ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ.