ಛತ್ತೀಸ್​ಗಢ: ಕಬ್ಬಿಣದ ಅದಿರು ಗಣಿಯಲ್ಲಿ ಐಇಡಿ ಸ್ಫೋಟ, ಓರ್ವ ಕಾರ್ಮಿಕ ಸಾವು, ಮತ್ತೊಬ್ಬರಿಗೆ ಗಾಯ

ಕಬ್ಬಿಣದ ಅದಿರು ಗಣಿ ಪ್ರದೇಶದಲ್ಲಿ ಶುಕ್ರವಾರ ನಕ್ಸಲೀಯರು ಅಳವಡಿಸಿದ್ದ ಸುಧಾರಿತ ಸ್ಫೋಟಕ(ಐಇಡಿ) ಸ್ಫೋಟಗೊಂಡಾಗ 21 ವರ್ಷದ ಕಾರ್ಮಿಕ ಸಾವನ್ನಪ್ಪಿದ್ದಾರೆ ಮತ್ತು ಇನ್ನೊಬ್ಬರು ಗಾಯಗೊಂಡಿರುವ ಘಟನೆ ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯಲ್ಲಿ ನಡೆದಿದೆ. ಸ್ಫೋಟದ ನಂತರ ಒಬ್ಬ ಕಾರ್ಮಿಕ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಯ್‌ಪುರದಿಂದ ಸುಮಾರು 350 ಕಿಮೀ ದೂರದಲ್ಲಿರುವ ಆಮ್‌ಡೈ ಘಾಟಿ ಕಬ್ಬಿಣದ ಅದಿರು ಗಣಿಗಾರಿಕೆಗೆ ಮೂವರು ಕಾರ್ಮಿಕರು ಹೋಗುತ್ತಿದ್ದಾಗ ಬೆಳಗ್ಗೆ 7.30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಯಸ್ವಾಲ್ ನೆಕೋ ಇಂಡಸ್ಟ್ರೀಸ್ ಲಿಮಿಟೆಡ್ (ಜೆಎನ್‌ಐಎಲ್) ಗೆ ಆಮ್ದೈ ಘಾಟಿಯಲ್ಲಿ ಕಬ್ಬಿಣದ ಅದಿರು ಗಣಿ ಮಂಜೂರು ಮಾಡಲಾಗಿದ್ದು, ನಕ್ಸಲೀಯರು ಈ ಯೋಜನೆಯನ್ನು ದೀರ್ಘಕಾಲದಿಂದ ವಿರೋಧಿಸುತ್ತಿದ್ದಾರೆ. ಕಾರ್ಮಿಕರು IED ಸಂಪರ್ಕಕ್ಕೆ ಬಂದೊಡನೆ ಸ್ಫೋಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ರಿತೇಶ್ ಗಗಡಾ ಎಂದು ಗುರುತಿಸಲಾಗಿದ್ದು, ಗಾಯಗೊಂಡವರನ್ನು ಉಮೇಶ್ ರಾಣಾ ಎಂಬುದು ತಿಳಿದುಬಂದಿದೆ, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಘಟನೆಯ ಸಂದರ್ಭದಲ್ಲಿ ಕಾರ್ಮಿಕರ ಜೊತೆಗಿದ್ದ ಶ್ರವಣ ಗಗಡಾ (24) ನಾಪತ್ತೆಯಾದ ಕಾರ್ಮಿಕನಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.