ಟೀಂ ಇಂಡಿಯಾದ ಮಾಜಿ ವೇಗದ ಬೌಲರ್ ಎಸ್. ಶ್ರೀಶಾಂತ್ ವಿರುದ್ಧ ವಂಚನೆ ಆರೋಪದಡಿಯಲ್ಲಿ ಪ್ರಕರಣ ದಾಖಲಾಗಿದೆ. ತಮ್ಮ ಆಟಕ್ಕಿಂತ ಹೆಚ್ಚಾಗಿ ಅನೇಕ ವಿವಾದಗಳಿಂದ ಸಾಕಷ್ಟು ಚರ್ಚೆಗೆ ಒಳಗಾಗಿದ್ದ ಎಸ್. ಶ್ರೀಶಾಂತ್ ಇದೀಗ ಮತ್ತೊಮ್ಮೆ ಹೊಸ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಕೇರಳ ಪೊಲೀಸರು ಎಸ್. ಶ್ರೀಶಾಂತ್ ಮತ್ತು ಇತರ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲು ಮಾಡಿದ್ದಾರೆ. ಸಿಕ್ಕಿರುವ ಮಾಹಿತಿಯ ಪ್ರಕಾರ, ಕೇರಳದ ಕಣ್ಣೂರು ಜಿಲ್ಲೆಯ ವ್ಯಕ್ತಿಯೊಬ್ಬರು ಎಸ್.ಶ್ರೀಶಾಂತ್ ಮತ್ತು ಇತರ ಇಬ್ಬರ ವಿರುದ್ಧ ವಂಚನೆ ದೂರು ದಾಖಲಿಸಿದ್ದಾರೆ. ಇದೇ ದೂರಿನ ಆಧಾರದ ಮೇಲೆ ಪೊಲೀಸರು ಎಸ್. ಶ್ರೀಶಾಂತ್ ಮತ್ತು ಇತರ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಶ್ರೀಶಾಂತ್‌ನನ್ನು ಮೂರನೇ ಆರೋಪಿ ಎಂದು ಘೋಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಪ್ರಕರಣ?
ದೂರುದಾರ, ಕಣ್ಣೂರು ಜಿಲ್ಲೆಯ ಚುಂಡಾ ನಿವಾಸಿ ಸರೀಷ್ ಗೋಪಾಲನ್ ಎಂಬುವರು ಶ್ರೀಶಾಂತ್ ಮತ್ತು ಇತರ ಇಬ್ಬರ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. 25 ಏಪ್ರಿಲ್ 2019 ರಿಂದ ಇಲ್ಲಿಯವರೆಗೆ ಆರೋಪಿಗಳಾದ ರಾಜೀವ್ ಕುಮಾರ್ ಮತ್ತು ವೆಂಕಟೇಶ್ ಕಿಣಿ ಇಬ್ಬರೂ ನನ್ನಿಂದ ಒಟ್ಟು 18.70 ಲಕ್ಷ ರೂ.ಗಳನ್ನು ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ದೂರುದಾರರ ಹೇಳಿಕೆಯ ಪ್ರಕಾರ, ಆರೋಪಿಗಳಾದ ರಾಜೀವ್ ಮತ್ತು ವೆಂಕಟೇಶ್ ಅವರು ಕರ್ನಾಟಕದ ಕೊಲ್ಲೂರಿನಲ್ಲಿ ಕ್ರೀಡಾ ಸಂಬಂಧಿತ ಅಕಾಡೆಮಿ ತೆರೆಯುವುದಾಗಿ ಹೇಳಿಕೊಂಡಿದ್ದರು. ಇದಕ್ಕೆ ಭಾರತದ ಮಾಜಿ ವೇಗದ ಬೌಲರ್ ಎಸ್. ಶ್ರೀಶಾಂತ್ ಕೂಡ ಪಾಲುದಾರ ಎಂದು ಹೇಳಿದ್ದರು. ಹಾಗೆಯೇ ಈ ಅಕಾಡೆಮಿಯಲ್ಲಿ ನನ್ನನ್ನು ಪಾಲುದಾರನನ್ನಾಗಿ ಮಾಡಿಕೊಳ್ಳುವ ಭರವಸೆ ನೀಡಿದ್ದರು. ಹೀಗಾಗಿ ನಾನು ಹಣವನ್ನು ಹೂಡಿಕೆ ಮಾಡಿದ್ದೆ. ಆದರೆ ಅಕಾಡೆಮಿ ಹೆಸರಲ್ಲಿ ನನ್ನ ಬಳಿ ಹಣ ಸುಲಿಗೆ ಮಾಡಿದ್ದಾರೆ ಎಂಬುದು ನನಗೆ ಆ ನಂತರ ತಿಳಿಯಿತು. ಇದರಲ್ಲಿ ಶ್ರೀಶಾಂತ್ ಕೂಡ ಶಾಮೀಲಾಗಿದ್ದಾರೆ ಎಂದು ಸರೀಶ್ ಗೋಪಾಲನ್ ಆರೋಪಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ಶ್ರೀಶಾಂತ್‌ನನ್ನು ಆರೋಪಿ ಎಂದು ಘೋಷಿಸಿದ್ದಾರೆ.
ಕಳ್ಳಾಟ ಆಡಿ ಬ್ಯಾನ್ ಆಗಿದ್ದ ಶ್ರೀಶಾಂತ್
ಎಸ್. ಶ್ರೀಶಾಂತ್ ವಿವಾದಕ್ಕೆ ಸಿಲುಕಿರುವುದು ಇದೇ ಮೊದಲಲ್ಲ. 2013 ರಲ್ಲಿ ನಡೆದ ಐಪಿಎಲ್ನಲ್ಲಿ ಸ್ಪಾಟ್ ಫಿಕ್ಸಿಂಗ್ ಆರೋಪದಡಿ ಎಸ್. ಶ್ರೀಶಾಂತ್‌ಗೆ ಆಜೀವ ನಿಷೇಧ ಹೇರಲಾಗಿತ್ತು. ಆದರೆ 2020 ರಲ್ಲಿ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅವರ ನಿಷೇಧವನ್ನು ಏಳು ವರ್ಷಕ್ಕೆ ಇಳಿಸಿತ್ತು. ಇದಾದ ಬಳಿಕ ಶ್ರೀಶಾಂತ್ ಕೇರಳ ಪರ ದೇಶೀಯ ಕ್ರಿಕೆಟ್‌ನಲ್ಲಿ ಪುನರಾಗಮನ ಮಾಡಿದ್ದರು. ಪ್ರಸ್ತುತ ಶ್ರೀಶಾಂತ್ ಲೆಜೆಂಡ್ಸ್ ಲೀಗ್ ಕ್ರಿಕೆಟ್ (LLC) 2023 ರಲ್ಲಿ ಭಾಗವಹಿಸುತ್ತಿದ್ದಾರೆ.
ಅಂತಾರಾಷ್ಟ್ರೀಯ ವೃತ್ತಿ ಬದುಕು
ಇನ್ನು ಶ್ರೀಶಾಂತ್ ಅವರ ಕ್ರಿಕೆಟ್ ವೃತ್ತಿ ಬದುಕಿನ ಬಗ್ಗೆ ಹೇಳುವುದಾದರೆ, 2007ರ ಟಿ20 ಮತ್ತು 2011ರ ಏಕದಿನ ವಿಶ್ವಕಪ್‌ನಲ್ಲಿ ವಿಜಯಿಯಾದ ಭಾರತ ತಂಡದ ಭಾಗವಾಗಿದ್ದರು. 2007ರ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಶ್ರೀಶಾಂತ್ ಮಿಸ್ಬಾ ಉಲ್ ಹಕ್ ಕ್ಯಾಚ್ ಹಿಡಿದಿದ್ದನ್ನು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಇಂದಿಗೂ ಮರೆತಿಲ್ಲ. ಶ್ರೀಶಾಂತ್ ಭಾರತದ ಪರ 27 ಟೆಸ್ಟ್, 53 ಏಕದಿನ ಮತ್ತು 10 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು ಇದರಲ್ಲಿ ಅವರು ಒಟ್ಟು 169 ವಿಕೆಟ್ ಪಡೆದಿದ್ದಾರೆ.
ಶ್ರೀಶಾಂತ್ ಐಪಿಎಲ್ ದಾಖಲೆ
ಎಸ್ ಶ್ರೀಶಾಂತ್ ಐಪಿಎಲ್ನಲ್ಲೂ ಕಾಣಿಸಿಕೊಂಡಿದ್ದು, ಅವರು ಕಿಂಗ್ಸ್ ಇಲೆವೆನ್ ಪಂಜಾಬ್ (ಈಗ ಪಂಜಾಬ್ ಕಿಂಗ್ಸ್) ಪರ ಐಪಿಎಲ್ ಪಾದಾರ್ಪಣೆ ಮಾಡಿದರು. ಇದರ ನಂತರ ಅವರು ಕೊಚ್ಚಿ ಟಸ್ಕರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಪರವೂ ಆಡಿದ್ದರು. ಶ್ರೀಶಾಂತ್ 44 ಐಪಿಎಲ್ ಪಂದ್ಯಗಳಲ್ಲಿ 29.9 ಸರಾಸರಿಯಲ್ಲಿ 40 ವಿಕೆಟ್ ಪಡೆದಿದ್ದಾರೆ.