ಡೀಸಲ್ ಇಲ್ಲದೇ ಅರ್ಧ ದಾರಿಯಲ್ಲೇ ನಿಂತ ಬಸ್! ಡೀಸಲ್ ಹಾಕಿಸದಷ್ಟು ಲಾಸ್ ಮಾಡಿಕೊಂಡಿದೆಯಾ KSRTC?

ಐದು ಗ್ಯಾರಂಟಿಗಳೊಲ್ಲೊಂದಾದ ಶಕ್ತಿ ಗ್ಯಾರಂಟಿ ಸ್ಕೀಮ್ ರಾಜ್ಯಕ್ಕೆ ದಯಪಾಲಿಸಿ ವಿರೋಧ ಪಕ್ಷವನ್ನು ಬ್ಯಾಕ್ ಫುಟ್ ಗೆ ತಳ್ಳಿರುವ ಸಿದ್ದರಾಮಯ್ಯ ಸಾರಥ್ಯದ ರಾಜ್ಯ ಕಾಂಗ್ರೆಸ್​​ ಸರಕಾರ, ತನ್ನ ಬಸ್ಸುಗಳಿಗೆ ಡೀಸಲ್ ಹಾಕಿಸದಷ್ಟು ಲಾಸ್ ಮಾಡಿಕೊಂಡಿದೆಯಾ ? ಇಂಥಾದೊಂದು ಅನುಮಾನ ಪ್ರಯಾಣಿಕರಲ್ಲಿ ಮೂಡಿದೆ, ರಾಮನಗರದ ಬಸ್ಸೊಂದು ಡೀಸಲ್ ಇಲ್ಲದೇ ಅರ್ಧ ದಾರಿಯಲ್ಲಿಯೇ ನಿಂತಿರುವ ಘಟನೆ ಇದಕ್ಕೆ ಸಾಕ್ಷಿ ಎಂಬಂತಿದೆ!

ರಾಮನಗರದಿಂದ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಕೆಎಸ್ ಆರ್ ಟಿ ಸಿ ಬಸ್ ಮಂಚನಬೆಲೆ ದಾಟಿ ವಾಪಸ್ ಬರುವ ಮುನ್ನವೇ ಅರ್ಧ ದಾರಿಯಲ್ಲಿ ಕೈ ಕೊಟ್ಟಿದೆ. ಬಸ್ಸೇನಾದ್ರೂ ಕೆಟ್ಟು ಹೋಯ್ತಾ ಅಂತ ಪ್ರಯಾಣಿಕರು ಕೇಳಿದಕ್ಕೆ ಡೀಸಲ್ ಟ್ಯಾಂಕ್​​ ಫುಲ್​ ಖಾಲಿ ಅಗಿದೆ ಅಂತಾ ಚಾಲಕ ಮತ್ತು ನಿರ್ವಾಹಕ ಉತ್ತರ ಕೊಟ್ಟಿದ್ದಾರೆ! ಕೆ ಎ f 1662‌ ನಂಬರಿನ ಬಸ್, ಡೀಸಲ್ ಖಾಲಿಯಾದ ಕಾರಣ ಜನ‌ ಇನ್ನೊಂದು ಬಸ್ ಹತ್ತಿ ಹೋಗಿದ್ದಾರೆ. ಆದರೆ ಒಂದು ಕಡೆ ಆರು ತಿಂಗಳ ಶಕ್ತಿ ಯೋಜನೆಯಿಂದಾಗಿ ಸರಕಾರ ಫುಲ್​ ಖುಷ್ ಯಲ್ಲಿದ್ದರೆ, ಮತ್ತೊಂದೆಡೆ ಡೀಸಲ್ ಇಲ್ಲದೆ ಬಸ್ ಸಿಬ್ಬಂದಿ ಪರದಾಡುತ್ತಿದ್ದಾರೆ ಎಂಬ ಅಂಶ ಬೆಳಕಿಗೆ ಬರ್ತಿದೆ

ಇನ್ನು ಈ ಬಗ್ಗೆ ಡಿಪೋ ಮ್ಯಾನೆಜರ್ ಪ್ರದೀಪ್ ರವರಿಗೆ ಕರೆ ಮಾಡಿ ಕೇಳಿದಕ್ಕೆ ವಿಚಾರ ಗೊತ್ತಿಲ್ಲ, ಡೀಸಲ್ ಖಾಲಿಯಾಗಿರಬೇಕು, ಚೆಕ್ ಮಾಡ್ತೇನೆ,‌ ನಾನು ಹೊರಗಡೆ ಬಂದಿದ್ದೇನೆ ಎಂಬುದಾಗಿ ಉಡಾಫೆ ಉತ್ತರ ನೀಡಿದ್ದಾರೆ.‌ ಚಾಲಕನ ನಿರ್ಲಕ್ಷ್ಯ ದಿಂದ ಡೀಸಲ್ ಹಾಕಿಸಿಕೊಂಡಿಲ್ಲವೋ ಅಥವಾ ಡೀಸಲ್ ಇರಲಿಲ್ಲವೋ ಎಂಬುದಕ್ಕೆ ಸಮರ್ಪಕ ಉತ್ತರ ನೀಡೋದಕ್ಕೆ ಯಾರೂ ಮುಂದೆ ಬಂದಿಲ್ಲ, ಇನ್ನು ಇದಕ್ಕೆ ಪುಷ್ಟಿ ನೀಡುವಂತೆ ರಾಮನಗರದ ಬಸ್ ಡಿಪೋದಲ್ಲಿ ಏಳೆಂಟು ಬಸ್ ಗಳು ಡೀಸಲ್ ಇಲ್ಲದೇ ಆಪರೇಟ್ ಆಗ್ತಾ ಇಲ್ಲ, ಜನರಿಗೆ ಸಾರಿಗೆ ಸೇವೆ ನೀಡ್ತಾ ಇಲ್ಲ ಎಂಬ ಆರೋಪವೂ ಕೇಳಿ ಬಂದಿದೆ. ಎಲ್ಲಾ ಬಸ್ಸು ಗಳು ಬಹಳಷ್ಟು ರಷ್‌ನಿಂದ ಕೂಡಿದ್ದು ಹಲವು ಬಸ್ಸುಗಳು ತಮ್ಮ ಊರಿನ ಕಡೆ ಟ್ರಿಪ್ ಗೆ ಬರ್ತಾ ಇಲ್ಲ ಎಂಬ ಆಕ್ರೋಶವನ್ನು ಪ್ರಯಾಣಿಕರು ಹಾಕ್ತಾ ಇದ್ದಾರೆ.

ಇನ್ನು ಶಕ್ತಿ ಯೋಜನೆಯಡಿ ನೂರು ಕೋಟಿ ಮಹಿಳೆಯರನ್ನು ಉಚಿತವಾಗಿ ರಾಜ್ಯವೆಲ್ಲ ಸುತ್ತಾಡಿಸಿದ ಕೀರ್ತಿ ಒಂದೆಡೆಯಾದ್ರೆ, ಇಲಾಖೆಯ ಬೊಕ್ಕಸದಲ್ಲಿ ಡೀಸಲ್ ಗೂ ಕಾಸಿಲ್ಲವಾ ಎಂಬ ಪ್ರಶ್ನೆ ಬಲವಾಗಿ ಮೂಡುತ್ತಿದೆ. ಈ ವಿಚಾರಕ್ಕೆ ಸರ್ಕಾರ ಹಾಗೂ ಸಾರಿಗೆ ಇಲಾಖೆ ಏನು ಉತ್ತರ ಕೊಡಲಿದೆ ಕಾದು ನೋಡಬೇಕು.