ವಿಶ್ವಕಪ್ ಸೋಲಿನ ನಂತರ ರೋಹಿತ್ ಪತ್ನಿಯ ಸಹೋದರನ ಜೊತೆ ಸಂಬಂಧ ಕೈಬಿಟ್ಟ ಕೊಹ್ಲಿ

ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ಏಕದಿನ ವಿಶ್ವಕಪ್ 2023 ಫೈನಲ್ ಪಂದ್ಯದಲ್ಲಿ ಮೂರನೇ ಬಾರಿಗೆ ವಿಶ್ವ ಚಾಂಪಿಯನ್ ಆಗುವ ಟೀಮ್ ಇಂಡಿಯಾದ ಕನಸು ಭಗ್ನಗೊಂಡಿತು. ಭಾರತ ಈ ಆಘಾತದಿಂದ ಹೊರಬಂದಿಲ್ಲ. ಇದರ ನಡುವೆ ಮಹತ್ವದ ಬೆಳವಣಿಗೆಗಳು ನಡೆಯುತ್ತಿದೆ. ವಿಶ್ವಕಪ್ ಸೋಲಿನ ನೋವಿನಲ್ಲಿರುವ ಟೀಮ್ ಇಂಡಿಯಾ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಕೊಹ್ಲಿ ಹತ್ತು ವರ್ಷಗಳ ನಂತರ ಬಂಟಿ ಸಜ್ದೇ ಒಡೆತನದ ಕಾರ್ನರ್‌ಸ್ಟೋನ್ ಸಂಸ್ಥೆಯಿಂದ ಬೇರ್ಪಟ್ಟಿದ್ದಾರೆ.

ಕಾರ್ನರ್‌ಸ್ಟೋನ್ ಸಂಸ್ಥೆ, ಕೊಹ್ಲಿಯ ಹಣಕಾಸಿನ ವ್ಯವಹಾರ, ಜಾಹೀರಾತು, ಕ್ರಿಕೆಟ್ ಮೈದಾನದ ಹೊರಗಿನ ಬ್ರ್ಯಾಂಡ್ ಕುರಿತ ಎಲ್ಲ ವ್ಯವಹಾರವನ್ನು ನೋಡಿಕೊಳ್ಳುತ್ತಿತ್ತು. ಆದರೀಗ ವಿರಾಟ್ ಕೊಹ್ಲಿ ಅವರು ಬಂಟಿ ಸಜ್ದೇ ಅವರ ಕಾರ್ನರ್‌ಸ್ಟೋನ್ ಕಂಪನಿ ಜೊತೆಗಿನ ಸಂಬಂಧವನ್ನು ಕೈಬಿಟ್ಟಿದ್ದಾರೆ. ಮೂಲಗಳ ಪ್ರಕಾರ, ಕೊಹ್ಲಿ ಸ್ವಂತ ಕಂಪನಿ ಆರಂಭಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ”ಕಾರ್ನರ್‌ಸ್ಟೋನ್‌ನೊಂದಿಗಿನ ಒಪ್ಪಂದವನ್ನು ಕೊಹ್ಲಿ ಕೊನೆಗೊಳಿಸಲು ನಿಜವಾದ ಕಾರಣ ಏನು ಎಂಬುದು ತಿಳಿದಿಲ್ಲ. ಆದರೆ, ಭಾರತೀಯ ಬ್ಯಾಟರ್ ಶೀಘ್ರದಲ್ಲೇ ತನ್ನ ಹೊಸ ಕಂಪನಿಯನ್ನು ಆರಂಭಿಸುವ ನಿರೀಕ್ಷೆಯಿದೆ,” ಎಂದು ಉದ್ಯಮದ ಮೂಲವೊಂದು ಕ್ರಿಕೆಟ್ ನೆಕ್ಸ್ಟ್‌ಗೆ ತಿಳಿಸಿದೆ.

ಯಾರು ಈ ಬಂಟಿ ಸಜ್ದೇ?:

ಕಾರ್ನರ್‌ಸ್ಟೋನ್ ಸಂಸ್ಥೆ ಬಂಟಿ ಸಜ್ದೇ ಒಡೆತನದ್ದಾಗಿದೆ. ಇವರು ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಸಜ್ದೇ ಸೋದರ ಸಂಬಂಧಿ. ಬಂಟಿಯವರ ಕಂಪನಿ ಕಾರ್ನರ್‌ಸ್ಟೋನ್ ಬಹಳ ಸಮಯದಿಂದ ಕೊಹ್ಲಿಯ ಎಲ್ಲ ವ್ಯವಹಾರವನ್ನು ನೋಡಿಕೊಳ್ಳುತ್ತಿತ್ತು. ಈ ಹಿಂದೆ ರೋಹಿತ್ ಕೂಡ ಈ ಕಂಪನಿಯಲ್ಲೇ ಇದ್ದರು. ವಿರಾಟ್ ಕೊಹ್ಲಿ ಮತ್ತು ಬಂಟಿ ಸಜ್ದೇ ಉತ್ತಮ ಸ್ನೇಹಿತರು. ದೊಡ್ಡ ಕ್ರಿಕೆಟ್ ಪಂದ್ಯವಳಿ ಇದ್ದಾಗ ಬಂಟಿ ಅಲ್ಲಿ ಹಾಜರಿರುತ್ತಿದ್ದರು. ಕೊಹ್ಲಿ ಮತ್ತು ಬಂಟಿ ನಡುವಿನ ಪಾಲುದಾರಿಕೆಯು ಮೂಲಕವೇ ಸ್ಪೋರ್ಟ್ಸ್ ಬ್ರ್ಯಾಂಡ್ ಪೂಮಾದೊಂದಿಗೆ 100-ಕೋಟಿ ಒಪ್ಪಂದ ನಡೆದಿತ್ತು

ಗಮನಿಸಬೇಕಾದ ಸಂಗತಿ ಎಂದರೆ, ಕಳೆದ ಕೆಲವು ವರ್ಷಗಳಲ್ಲಿ ಅನೇಕ ಕ್ರಿಕೆಟಿಗರು ಕಾರ್ನರ್‌ಸ್ಟೋನ್‌ನಿಂದ ಬೇರ್ಪಟ್ಟಿದ್ದಾರೆ. ಇದರಲ್ಲಿ ರೋಹಿತ್ ಶರ್ಮಾ, ಕೆಎಲ್ ರಾಹುಲ್, ಅಜಿಂಕ್ಯಾ ರಹಾನೆ, ಶುಭ್​ಮನ್ ಗಿಲ್ ಸೇರಿದಂತೆ ಅನೇಕರು ಇದ್ದಾರೆ. ಆದರೆ ವಿರಾಟ್ ಮತ್ತು ಕಾರ್ನರ್‌ಸ್ಟೋನ್ ನಡುವೆ ಉತ್ತಮ ಬಾಂಧವ್ಯವಿತ್ತು. ಆದರೆ ಈಗ ಈ ಸಂಬಂಧ ಕೂಡ ಕೊನೆಗೊಂಡಿದೆ ಎಂದು ಕ್ರಿಕೆಟ್ ನೆಕ್ಸ್ಟ್ ವರದಿ ಮಾಡಿದೆ. ಮೂಲಗಳ ಪ್ರಕಾರ, ಕಾರ್ನರ್‌ಸ್ಟೋನ್ ಪ್ರಸ್ತುತ ಸಾನಿಯಾ ಮಿರ್ಜಾ, ಪಿವಿ ಸಿಂಧು, ಕುಲ್ದೀಪ್ ಯಾದವ್, ಉಮೇಶ್ ಯಾದವ್ ಸೇರಿದಂತೆ ಕೆಲ ದೊಡ್ಡ ಆಟಗಾರರ ವ್ಯವಹಾರವನ್ನು ನೋಡಿಕೊಳ್ಳುತ್ತಿದೆ.