2023ರ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್‌ಗಳ ಸೋಲನ್ನು ಎದುರಿಸಬೇಕಾಯಿತು. ಆದರೆ ಅಂತಿಮ ಪಂದ್ಯದಲ್ಲಿ ಸೋತ ನಂತರವೂ ಭಾರತದ ವಿಕೆಟ್ ಕೀಪರ್ ಕೆಎಲ್ ರಾಹುಲ್ ಈ ವಿಶ್ವಕಪ್‌ನಲ್ಲಿ ಅಮೋಘ ಸಾಧನೆ ಮಾಡಿದರು.
ಇಂಜುರಿಯಿಂದ ಚೇತರಿಸಿಕೊಂಡು ಬಹಳ ದಿನಗಳ ನಂತರ 2023 ರ ಏಷ್ಯಾಕಪ್ ಮೂಲಕ ತಂಡಕ್ಕೆ ಪುನರಾಗಮನ ಮಾಡಿದ ರಾಹುಲ್, ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಅದ್ಭುತ ಶತಕ ಸಿಡಿಸಿ ಮಿಂಚಿದರು. ಇದರ ಜೊತೆಗೆ ಇಡೀ ಏಷ್ಯಾಕಪ್ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದರು..
ಇದರ ನಂತರ ಏಕದಿನ ವಿಶ್ವಕಪ್‌ನಲ್ಲೂ ಅದೇ ಫಾರ್ಮ್ ಮುಂದುವರೆಸಿದ ರಾಹುಲ್, ಆಸ್ಟ್ರೇಲಿಯಾ ವಿರುದ್ಧದ ಗುಂಪು ಹಂತದ ಪಂದ್ಯದಲ್ಲಿ 97 ರನ್ಗಳ ಇನ್ನಿಂಗ್ಸ್ ಆಡಿ ಟೀಂ ಇಂಡಿಯಾವನ್ನು ಗೆಲುವಿನ ದಡ ಸೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.
ಇದಾದ ಬಳಿಕ ರಾಹುಲ್ ನೆದರ್ಲೆಂಡ್ ವಿರುದ್ಧ ಶತಕ ಸಿಡಿಸಿದರು. ಪ್ರಸಕ್ತ ವಿಶ್ವಕಪ್‌ನ 11 ಪಂದ್ಯಗಳಲ್ಲಿ ಅವರು ಬರೋಬ್ಬರಿ 452 ರನ್ ಗಳಿಸಿದ್ದಾರೆ. ಈ ಮೂಲಕ ಏಕದಿನ ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮೊದಲ ಭಾರತೀಯ ವಿಕೆಟ್‌ಕೀಪರ್ ಎನಿಸಿಕೊಂಡಿದ್ದಾರೆ.
ಇದಲ್ಲದೆ ಈ ವಿಶ್ವಕಪ್‌ನಲ್ಲಿ ಭಾರತದ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ ರಾಹುಲ್, ಈ ಅವಧಿಯಲ್ಲಿ ವಿಕೆಟ್ ಹಿಂದೆ 17 ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಏಕದಿನ ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಉರುಳಿಸಿದ ಭಾರತೀಯ ವಿಕೆಟ್‌ಕೀಪರ್ ಎನಿಸಿಕೊಂಡಿದ್ದಾರೆ.
ರಾಹುಲ್ಗೂ ಮುನ್ನ ಈ ದಾಖಲೆ ಟೀಂ ಇಂಡಿಯಾದ ಹಾಲಿ ಕೋಚ್ ರಾಹುಲ್ ದ್ರಾವಿಡ್ ಅವರ ಹೆಸರಿನಲ್ಲಿತ್ತು. 2003ರ ಏಕದಿನ ವಿಶ್ವಕಪ್‌ನಲ್ಲಿ ದ್ರಾವಿಡ್ ವಿಕೆಟ್ ಕೀಪರ್ ಆಗಿ 16 ವಿಕೆಟ್ ಕಬಳಿಸಿದ್ದರು.