ಭಾರತದಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ 2023ಕ್ಕೆ ತೆರೆಬಿದ್ದಾಗಿದೆ. ಒಂದೂವರೆ ತಿಂಗಳ ಕಾಲ ರೋಹಿತ ಶರ್ಮಾ ತಂಡ ಅಮೋಘವಾಗಿ ಆಡಿ ಫೈನಲ್ಗೆ ತಲುಪಿತು. 10 ಪಂದ್ಯಗಳಲ್ಲಿ 10 ರಲ್ಲೂ ಗೆಲುವು ಸಾಧಿಸಿ ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಆದರೆ, ಫೈನಲ್ನಲ್ಲಿ ಆಗಿದ್ದೇ ಬೇರೆ. ಆರಂಭದಲ್ಲಿ ಟಾಸ್ ಸೋತ ಭಾರತ ನಂತರ ಬ್ಯಾಟಿಂಗ್-ಬೌಲಿಂಗ್ನಲ್ಲಿ ವೈಫಲ್ಯ ಅನುಭವಿಸಿ ಟ್ರೋಫಿ ಗೆಲ್ಲುವ ಆಸೆ ಕೈಚೆಲ್ಲಿತು. ಆಸ್ಟ್ರೇಲಿಯಾ ಗೆಲ್ಲುತ್ತಿದ್ದಂತೆ ಭಾರತೀಯ ಆಟಗಾರರು ಹಾಗೂ ಅಭಿಮಾನಿಗಳು ಬೇಸರಗೊಂಡರು. ಕೆಲ ಪ್ಲೇಯರ್ಸ್ ಕಣ್ಣೀರಿಟ್ಟ ಘಟನೆ ಕೂಡ ನಡೆಯಿತು. ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆಯೂ ಭಾರತೀಯರು ದುಃಖದಲ್ಲಿ ಮುಳುಗಿದ್ದರು. ನಾಯಕ ರೋಹಿತ್ ಶರ್ಮಾ ಹೆಚ್ಚು ಮಾತನಾಡಲಿಲ್ಲ. ಬಳಿಕ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಸ್ವೀಕರಿಸಲು ರವಿ ಶಾಸ್ತ್ರಿ, ವಿರಾಟ್ ಕೊಹ್ಲಿಯನ್ನು ಕರೆದರು. ಆದರೆ, ಕೊಹ್ಲಿ ಪ್ರಶಸ್ತಿ ಪಡೆದು ಮಾತನಾಡಲು ನಿರಾಕರಿಸಿದರು. ಕೊಹ್ಲಿಯ ಭಾವನೆಗೆ ಬೆಲೆಕೊಟ್ಟ ಶಾಸ್ತ್ರಿ ತೊಂದರೆಯಿಲ್ಲ ಎಂದು ಕೈಸನ್ನೆ ಮಾಡಿದರು. ಇದರ ವಿಡಿಯೋ ಸಾಮಾಜಿಕ ಜಾಳತಾಣಗಳಲ್ಲಿ ವೈರಲ್ ಆಗುತ್ತಿದೆ.