ಮಳೆ ಅವಾಂತರಕ್ಕೆ ವ್ಯಾಪಾರಿಗಳಿಗೆ ನಷ್ಟ.! ಅರ್ಧ ಬೆಲೆಗೆ ಬಿಕರಿಯಾದ ವಸ್ತುಗಳು.! ಕಡಿಮೆ ಬೆಲೆಯ ವಸ್ತುಗಳನ್ನು ಕೊಂಡುಕೊಳ್ಳಲು ಮುಗಿಬಿದ್ದ ಗ್ರಾಹಕರು.!

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಸುರಿದ ಭಾರೀ ಮಳೆ ಜೀವಹಾನಿ ಜೊತೆಗೆ ಅಪಾರ ಆಸ್ತಿಪಾಸ್ತಿಗಳಿಗೂ ಹಾನಿ ಮಾಡಿದೆ. ಆದರೆ ಮಳೆಯಿಂದ ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿ ಲಕ್ಷಾಂತರ ರೂ ನಷ್ಟವಾಗಿದೆ. ಹೀಗಾಗಿ ವ್ಯಾಪಾರಸ್ಥರು ತಮ್ಮ ವಸ್ತುಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡುತಿದ್ದು ಜನ ಮುಗಿಬಿದ್ದು ಖರೀದಿಸುತಿದ್ದಾರೆ.

ಭಟ್ಕಳದಲ್ಲಿ ಅಬ್ಬರಿಸಿದ ಮಳೆಗೆ ವ್ಯಾಪಾರಿಗಳಿಗೆ ಅಪಾರ ನಷ್ಟ.! ಲಕ್ಷಾಂತರ ಮೌಲ್ಯದ ವಸ್ತುಗಳು ಹಾನಿ.!

ಭಟ್ಕಳದಲ್ಲಿ ಮಳೆಯ ಅವಾಂತರದಿಂದ ಸಾವುನೋವುಗಳು ಸಂಭವಿಸಿವೆ. ಮನೆಗಳಿಗೆ ನೀರು ನುಗ್ಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಇವುಗಳಿಗೆ ಸರ್ಕಾರ ಪರಿಹಾರವನ್ನೇನೋ ಕೊಡುತ್ತದೆ. ಆದರೆ ಅಂಗಡಿ ಮುಂಗಟ್ಟುಗಳಲ್ಲಿ ಆದ ಹಾನಿಗೆ ಸರ್ಕಾರದಿಂದ ಪರಿಹಾರ ಸಿಗುವುದಿಲ್ಲ. ಯಾರು ಇನ್ಸುರೆನ್ಸ್ ಮಾಡಿಸಿರುತ್ತಾರೋ ಅವರಿಗೆ ಮಾತ್ರ ಪರಿಹಾರ ಸಿಗುತ್ತದೆ. ಆದರೆ ಭಟ್ಕಳದಲ್ಲಿ ಬಹುತೇಕ ವಾಣಿಜ್ಯ ಮಳಿಗೆಗಳ ಮಾಲಕರು ಇನ್ಸುರೆನ್ಸ್ ಮಾಡಿಸಿಲ್ಲ. ಭಟ್ಕಳ ನಗರದ ಮುಖ್ಯ ರಸ್ತೆಯಲ್ಲಿರುವ 200 ಕ್ಕೂ ಹೆಚ್ಚು ಮಳಿಗೆಗಳಿಗೆ ನೀರು ನುಗ್ಗಿದ್ದು ಲಕ್ಷಾಂತರ ರುಪಾಯಿ ನಷ್ಟವಾಗಿದೆ.

ದುಬಾರಿ ವಸ್ತುಗಳನ್ನು ಅರ್ಧ ಬೆಲೆಗೆ ಮಾರಾಟಕ್ಕಿಟ್ಟ ವ್ಯಾಪಾರಿಗಳು.!

ಬಟ್ಟೆ, ಪಾತ್ರೆ, ಅಂಗಡಿಗಳು, ಬುಕ್ ಸ್ಟಾಲ್, ಮೊಬೈಲ್ ಷಾಪ್ ಹೀಗೆ ಹಲವು ಮಳಿಗೆಗಳಿಗೆ ನೀರು ನುಗ್ಗಿದ್ದರಿಂದ ಸಾಕಷ್ಟು ವಸ್ತುಗಳು ನೀರಿನಲ್ಲಿ ಮುಳಗಿ ನಷ್ಟವಾಗಿದೆ. ನೀರು ನುಗ್ಗಿ ಒದ್ದೆಯಾಗಿದ್ದರಿಂದ ಮತ್ತೆ ಅವುಗಳನ್ನು ಮಾರುವುದು ಸಹ ಕಷ್ಟ. ಹೀಗಾಗಿ ಭಟ್ಕಳ ನಗರದ ಮುಖ್ಯರಸ್ತೆಯಲ್ಲಿರುವ ಬಹುತೇಕ ಅಂಗಡಿಯವರು ತಮ್ಮ ವಸ್ತುಗಳನ್ನು ಅರ್ಧಕ್ಕಿಂತ ಕಮ್ಮಿ ಬೆಲೆಯಲ್ಲಿ ಮಾರಾಟ ಮಾಡಿದರು.

ಕಡಿಮೆ ಬೆಲೆಯ ವಸ್ತುಗಳನ್ನು ಕೊಂಡುಕೊಳ್ಳಲು ಮುಗಿಬಿದ್ದ ಗ್ರಾಹಕರು.!

ಭಟ್ಕಳ ನಗರದ ಮುಖ್ಯ ರಸ್ತೆಯಲ್ಲಿ ದುಬಾರಿ ವಸ್ತುಗಳು ಸಹ ಕಮ್ಮಿ ಬೆಲೆಗೆ ಮಾರಾಟ ಮಾಡುತ್ತಿರುವುದನ್ನು ತಿಳಿದ ಜನ ಮುಗಿಬಿದ್ದು ಕೊಂಡುಕೊಳ್ಳಲು ಮುಂದಾದರು. ಶಾಲಾ ಬ್ಯಾಗ್, ಎಲೆಕ್ಟ್ರಾನಿಕ್ಸ್ ವಸ್ತುಗಳು, ಪಾತ್ರೆಗಳು, ಬಟ್ಟೆಗಳು, ಚಪ್ಪಲಿಗಳು ಹೀಗೆ ಹಲವು ವಸ್ತುಗಳು ಅರ್ಧ ಬೆಲೆಗೆ ಬಿಕರಿಯಾದವು.

ನಮಗೂ ಪರಿಹಾರ ನೀಡಿ.!

ಮಳೆ ನೀರು ಮಳಿಗೆಗಳಿಗೆ ನುಗ್ಗಿ ವ್ಯಾಪಾರಿಗಳಿಗೆ ಸಾಕಷ್ಟು ನಷ್ಟ ತಂದೊಡ್ಡಿದೆ. ಲಕ್ಷಾಂತರ ರುಪಾಯಿ ಬಂಡವಾಳ ಹಾಕಿ ಮಳೆಯಲ್ಲಿ ಎಲ್ಲವನ್ನೂ ಕಳೆದುಕೊಂಡ ವ್ಯಾಪಾರಿಗಳು ಕೊನೆಗೆ ಆದ ನಷ್ಟದ ಅಲ್ಪ ಭಾಗವಾದರೂ ಸಿಗಲಿ ಎಂದು ವಸ್ತುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಮನೆಹಾನಿ ಪರಿಹಾರದ ಮಾದರಿಯಲ್ಲಿ ತಮಗೂ ಪರಿಹಾರ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.