ಹಾಸನ, ನ.16: ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ಉತ್ಸವ ನಿನ್ನೆ(ನ.15) ತೆರೆ ಕಂಡಿದೆ. ನ.2 ರಿಂದ ಶುರುವಾಗಿ ಬರೊಬ್ಬರಿ 14 ದಿನಗಳವರೆಗೆ ನಡೆಯುವ ಉತ್ಸವದಲ್ಲಿ ಈ ಬಾರಿ ದಾಖಲೆ ಪ್ರಮಾಣದಲ್ಲಿ ಭಕ್ತಾಧಿಗಳು ಆಗಮಿಸಿದ್ದರು. ಹೌದು, ದೇಶ-ವಿದೇಶಗಳಿಂದಲೂ ಸಾಗರೋಪಾದಿಯಲ್ಲಿ ಹರಿದ ಭಕ್ತ ಗಣ, ದೇವಿಯ ಕೃಫೆಗೆ ಪಾತ್ರರಾದರು. ಇನ್ನು ಕೇವಲ 12 ದಿನಗಳಲ್ಲಿಯೇ 13 ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಿ, 5.80 ಕೋಟಿ ರೂ ಆದಾಯ ಹರಿದು ಬಂದಿತ್ತು. ನಿನ್ನೆ ಉತ್ಸವ ತೆರೆ ಕಂಡಿದ್ದು, ಇಂದು ಬೀಗಿ ಪೊಲೀಸ್ ಬಂದೋಬಸ್ತ್ನಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದು ಮುಕ್ತಾಯವಾಗಿದೆ.
ಹಾಸನಾಂಬೆ ದೇವಿ ಜಾತ್ರಾ ಮಹೋತ್ಸವದ ಇತಿಹಾಸದಲ್ಲೇ ಈ ಬಾರಿ ಗರಿಷ್ಠ ಆದಾಯ
ಹೌದು. ಹುಂಡಿ ಎಣಿಕೆ ಕಾರ್ಯ ಇದೀಗ ಮುಕ್ತಾಯವಾಗಿದ್ದು, ಹಾಸನಾಂಬೆ ದೇವಿ ಜಾತ್ರಾ ಮಹೋತ್ಸವದ ಇತಿಹಾಸದಲ್ಲೇ ಈ ಬಾರಿ ಗರಿಷ್ಠ ಆದಾಯದ ಮೂಲಕ ದಾಖಲೆ ನಿರ್ಮಾಣವಾಗಿದೆ. ಒಟ್ಟು 8 ಕೋಟಿ 72 ಲಕ್ಷದ 41 ಸಾವಿರದ 531 ರೂ. ದಾಖಲೆಯ ಹಣ ಸಂಗ್ರಹವಾಗಿದೆ. ಅದರಲ್ಲಿ ಕಾಣಿಕೆ ರೂಪದಲ್ಲಿ 62 ಗ್ರಾಂ ಚಿನ್ನ, 161 ಗ್ರಾಂ ಬೆಳ್ಳಿ ಸಂಗ್ರಹವಾದರೆ, ವಿಶೇಷ ದರ್ಶನದ ಸಾವಿರ, ಮುನ್ನೂರು ರೂ. ಟಿಕೆಟ್, ಲಾಡು ಮಾರಾಟದಿಂದಲೇ ಬರೊಬ್ಬರಿ 6 ಕೋಟಿ 17 ಲಕ್ಷದ 34 ರೂ ಸಂಗ್ರಹ, ಇನ್ನು ಹುಂಡಿಯಲ್ಲಿ 2 ಕೋಟಿ 50 ಲಕ್ಷದ 77 ಸಾವಿರದ 497 ರೂಪಾಯಿ ಸಂಗ್ರಹದ ಮೂಲಕ ಒಟ್ಟು 8,72,41,531 ಕೋಟಿ ರೂ. ದಾಖಲೆ ಆದಾಯ ಗಳಿಕೆಯಾಗಿದೆ.