ಅಕ್ರಮ ಸ್ಪಿರಿಟ್‌ ಸಾಗಾಟ ಸಮಗ್ರ ತನಿಖೆಯಾಗಲಿ – ಕಾರವಾರದಲ್ಲಿ ಬಿಜೆಪಿ ಮುಖಂಡರ ಆಗ್ರಹ

ಕಾರವಾರ : ಗೋವಾಕ್ಕೆ ಅಕ್ರಮ ಸ್ಪಿರಿಟ್ ಸಾಗಾಟ 2017ರಿಂದ ನಡೆಯುತ್ತಿದೆ ಎಂದು ಶಾಸಕ ಸತೀಶ ಸೈಲ್ ಹೇಳುವ ಮೂಲಕ ಇನ್ನೊಂದು ದೊಡ್ಡ ಹಗರಣ ಬೆಳಕಿಗೆ ಬರುವಂತಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕಾಗಿದೆ ಎಂದು ಕಾರವಾರದಲ್ಲಿ ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ.

ಗೋವಾಕ್ಕೆ ಅಕ್ರಮ ಸ್ಪಿರಿಟ್ ಸಾಗಾಟ 2017ರಿಂದ ನಡೆಯುತ್ತಿದೆ ಎಂದು ಶಾಸಕ ಸತೀಶ ಸೈಲ್ ಹೇಳುವ ಮೂಲಕ ಇನ್ನೊಂದು ದೊಡ್ಡ ಹಗರಣ ಬೆಳಕಿಗೆ ಬರುವಂತಾಗಿದೆ. ಈ ಹಿನ್ನಲೆ ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ.


2017ರಿಂದ ಸ್ಪಿರಿಟ್ ಸಾಗಾಟ ನಡೆಯುತ್ತಿರುವುದು ಶಾಸಕ ಸತೀಶ ಸೈಲ್ ಅವರಿಗೆ ಗೊತ್ತಿದ್ದರೆ ಏಕೆ ಸುಮ್ಮನಿದ್ದರು. ಆಗಲೆ ಟ್ಯಾಂಕರ್ ತಡೆದು ಹೋರಾಟ ಮಾಡಬೇಕಿತ್ತು. ಸ್ಪಿರಿಟ್ ಸಾಗಾಟವನ್ನು ಅಬಕಾರಿ ಅಧಿಕಾರಿಗಳು ಪತ್ತೆ ಹಚ್ಚಿ ಟ್ಯಾಂಕರ್ ವಶಕ್ಕೆ ಪಡೆದ ಮೇಲೆ ತಾವು ಸಂಭಾವಿತರೆಂದು ತೋರಿಸಿಕೊಳ್ಳಲು ಬೇರೆಯವರ ಮೇಲೆ ಗೂಬೆ ಕೂರಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಇಷ್ಟಕ್ಕೂ ಸತೀಶ ಸೈಲ್ ಚೆಕ್ ಪೋಸ್ಟ್ ಗೆ ಹೋಗಿದ್ದು ಸ್ಪಿರಿಟ್ ಟ್ಯಾಂಕರ್ ವಶಪಡಿಸಿಕೊಂಡ ಅಧಿಕಾರಿಗಳ ಬೆನ್ನುತಟ್ಟಲು ಅಲ್ಲ. ಪ್ರಾಮಾಣಿಕ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಟ್ಯಾಂಕರ್ ಬಿಡಿಸಲು, ಚಾಲಕರನ್ನು ಕರೆತರಲು ಹೋಗಿದ್ದು ಎನ್ನುವುದು ವಿಡಿಯೋ ನೋಡಿದ ಪ್ರತಿಯೊಬ್ಬರಿಗೂ ಅರ್ಥವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಇದೆ. ಅಕ್ರಮ ಸ್ಪಿರಿಟ್ ಸಾಗಣೆಯ ಬಗ್ಗೆ ಸಮಗ್ರ ತನಿಖೆ ನಡೆಸಿದರೆ ಸತ್ಯಾಸತ್ಯತೆ ಹೊರಬೀಳಲಿದೆ ಎಂದು ಬಿಜೆಪಿ ಮುಖಂಡರು ತಿಳಿಸಿದ್ರು.
ಗೋವಾಕ್ಕೆ ಹೋಗುತ್ತಿರುವ ಸ್ಪಿರಿಟ್ ಅಕ್ರಮ ಮದ್ಯತಯಾರಿಕೆಗೆ ಬಳಸಲಾಗುತ್ತಿತ್ತು ಎಂದು ಲ್ಯಾಬ್ ವರದಿಯಿಂದ ಖಚಿತವಾಗುತ್ತಿದ್ದಂತೆ ಸೈಲ್ ಅವರ ಬಣ್ಣ ಬಯಲಾಗಿದೆ. ನಿಷ್ಠಾವಂತ ಅಧಿಕಾರಿಗಳ ಪ್ರಾಮಾಣಿಕ ಕರ್ತವ್ಯಕ್ಕೂ ಅಡ್ಡಿಪಡಿಸಿ, ಹೆದರಿಸಿ ಬೆದರಿಸುವ ಜನಪ್ರತಿನಿಧಿಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ಒಂದು ಕಂಟಕವಿದ್ದಂತೆ. ಜನಪ್ರತಿನಿಧಿಗಳ ಇಂತಹ ವರ್ತನೆಯನ್ನು ಜನತೆ ಸಹಿಸುವುದಿಲ್ಲ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ರು.

ಅದೇ ರೀತಿ ಮೆಡಿಕಲ್‌ ಕಾಲೇಜಿನ ಕುರಿತು ಮಾತನಾಡಿದ ಮುಖಂಡರು, ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ ವೈದ್ಯ ಅವರು ಮೆಡಿಕಲ್ ಕಾಲೇಜಿಗೆ ಶಸ್ತ್ರಚಿಕಿತ್ಸೆ ನಡೆಸಲು ಮುಂದಾಗಿರುವುದನ್ನು ಬಿಜೆಪಿ ಸ್ವಾಗತಿಸುತ್ತದೆ. ನಮ್ಮ ನಾಯಕಿಯಾದ ರೂಪಾಲಿ ಎಸ್. ನಾಯ್ಕ ಅವರ ಪ್ರಯತ್ನದಿಂದ ಮೆಡಿಕಲ್ ಕಾಲೇಜಿಗೆ ಸೂಪರ್ ಸ್ಪೆಷಾಲಿಟಿ ಸೌಲಭ್ಯ ಕೊಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಜೊತೆಗೆ ನ್ಯುರೋ ಸರ್ಜನ್, ಕಾರ್ಡಿಯಾಲಾಜಿಸ್ಟ್, ಯುರೋಲಾಜಿಸ್ಟ್ ಸೇರಿದಂತೆ 7 ತಜ್ಞ ವೈದ್ಯ ಹುದ್ದೆ ಮಂಜೂರಿ ಮಾಡಿ ನೇಮಕಾತಿ ಪ್ರಕ್ರಿಯೆಯೂ ಆರಂಭವಾಗಿತ್ತು. ಇದಲ್ಲದೆ, ಟ್ರಾಮಾ ಸೆಂಟರ್, ಎಂಆರ್‌ಐ ಮಶೀನ್ ಮಂಜೂರಾಗಿತ್ತು. 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಕ್ಕೂ 160 ಕೋಟಿ ರೂಪಾಯಿ ಬಿಡುಗಡೆಯಾಗಿತ್ತು. ರೂಪಾಲಿ ನಾಯ್ಕ ಮೆಡಿಕಲ್ ಕಾಲೇಜಿನ ವ್ಯವಸ್ಥೆ ಸುಧಾರಿಸಲು ಮುಂದಾದಾಗಲೆಲ್ಲ ಕಾಣದ ಕೈಗಳು ಅಲ್ಲಿನ ಉನ್ನತ ಅಧಿಕಾರಿಗಳ ರಕ್ಷಣೆಗೆ ಟೊಂಕ ಕಟ್ಟಿನಿಂತ ಪರಿಣಾಮವಾಗಿ ಈ ರೀತಿ ಆಗಿದೆ. ಈಗ ಅವರೇ ನೆಟ್ಟ ಬಳ್ಳಿ ಹಬ್ಬುತ್ತಿದೆ. ಎಂದು ಹೇಳಿದ್ರು.

ಬಡವರು, ಜನಸಾಮಾನ್ಯರಿಗೆ ಉಚಿತ ಹಾಗೂ ಕಡಿಮೆ ದರದಲ್ಲಿ ಉನ್ನತ ಮಟ್ಟದ ವೈದ್ಯಕೀಯ ಸೌಲಭ್ಯ ದೊರಕಿಸುವಲ್ಲಿ ನಡೆಸುವ ಎಲ್ಲ ಪ್ರಾಮಾಣಿಕ ಪ್ರಯತ್ನಗಳಿಗೂ ನಮ್ಮ ಬೆಂಬಲವಿದೆ. ಯಾರದೇ ತಪ್ಪಿದ್ದರೂ ಕ್ರಮ ಕೈಗೊಳ್ಳಲಿ. ಜನರಿಗೆ ಸೂಕ್ತ ಸೌಲಭ್ಯ ದೊರೆಯುವಲ್ಲಿ ಒಂದು ತಜ್ಞರ ಸಮಿತಿ ನೇಮಕವಾಗಲಿ. ಹಿರಿಯ ನಾಗರಿಕರು, ಗರ್ಭಿಣಿಯರು, ಮಕ್ಕಳು ಹಾಗೂ ಎಲ್ಲ ರೀತಿಯ ರೋಗಿಗಳಿಗೆ ಸೂಕ್ತ ಸೌಲಭ್ಯ, ಚಿಕಿತ್ಸೆ ಸಿಗುವಂತೆ ಆಗಲಿ. ಮೆಡಿಕಲ್ ಕಾಲೇಜಿನ ಕ್ಯಾಂಟೀನ್ ನಿಂದ ಗುಣಮಟ್ಟದ ಆಹಾರ ದೊರೆಯುವಂತೆ ಜಿಲ್ಲಾಧಿಕಾರಿಗಳು ನಿಗಾ ವಹಿಸಬೇಕೆಂದು ಆಗ್ರಹಿಸುತ್ತಿದ್ದೇವೆ ಎಂದು ಕಾರವಾರ ಗ್ರಾಮೀಣ ಘಟಕದ ಅಧ್ಯಕ್ಷ ಸುಭಾಷ್ ಗುನಗಿ, ನಗರ ಘಟಕದ ಅಧ್ಯಕ್ಷ ನಾಗೇಶ ಕುರ್ಡೇಕರ್ ಹಾಗೂ ಅಂಕೋಲಾ ಮಂಡಲದ ಅಧ್ಯಕ್ಷ ಸಂಜಯ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.