ಎರ್ನಾಕುಲಂನ ಕನ್ವೆನ್​ಷನ್​ ಸೆಂಟರ್​ನಲ್ಲಿ ಸ್ಪೋಟ, ಓರ್ವ ಸಾವು, 20ಕ್ಕೂ ಅಧಿಕ ಜನರಿಗೆ ಗಾಯ

ಕೇರಳದ ಎರ್ನಾಕುಲಂ ಜಿಲ್ಲೆಯ ಸಮಾವೇಶ ಕೇಂದ್ರವೊಂದರಲ್ಲಿ ಭಾನುವಾರ ಸಂಭವಿಸಿದ ಭಾರೀ ಸ್ಫೋಟದಲ್ಲಿ ಓರ್ವ ಸಾವನ್ನಪ್ಪಿದ್ದು, 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಬೆಳಗ್ಗೆ 9 ಗಂಟೆ ಸುಮಾರಿಗೆ ಸ್ಫೋಟದ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು, ಘಟನೆಯ ದೃಶ್ಯಗಳು ಅಗ್ನಿಶಾಮಕ ರಕ್ಷಣಾ ತಂಡ ಮತ್ತು ಪೊಲೀಸ್ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸ್ಥಳದಿಂದ ಸ್ಥಳಾಂತರಿಸುವುದನ್ನು ತೋರಿಸಿದೆ.

ರಜೆಯಲ್ಲಿರುವ ವೈದ್ಯರು ಸೇರಿದಂತೆ ಎಲ್ಲ ಆರೋಗ್ಯ ಕಾರ್ಯಕರ್ತರಿಗೆ ಕೂಡಲೇ ಹಿಂತಿರುಗುವಂತೆ ಆರೋಗ್ಯ ಸಚಿವೆ ವೀಣಾ ಜಾರ್ಜ್ ಸೂಚನೆ ನೀಡಿದ್ದಾರೆ. ಕಲಮಸ್ಸೆರಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಗಾಯಗೊಂಡವರಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಆರೋಗ್ಯ ಇಲಾಖೆ ನಿರ್ದೇಶಕರು ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಅವರು ಸೂಚಿಸಿದ್ದಾರೆ.

ಸ್ಪೋಟಕ್ಕೆ ಸಂಬಂಧಿಸಿದಂತೆ ಸರ್ಕಾರ ವಿವರಗಳನ್ನು ಸಂಗ್ರಹಿಸುತ್ತಿದೆ, ಇದೊಂದು ದುರದೃಷ್ಟಕರ ಘಟನೆ, ಎಲ್ಲಾ ಉನ್ನತ ಅಧಿಕಾರಿಗಳು ಎರ್ನಾಕುಲಂಗೆ ತಲುಪಿದ್ದಾರೆ, ಡಿಜಿಪಿ ಸ್ಥಳದಲ್ಲಿದ್ದಾರೆ, ನಾವು ಇದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ, ತನಿಖೆಯ ನಂತರ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲಿದ್ದೇವೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಎರ್ನಾಕುಲಂನ ಕನ್ವೆನ್​ಷನ್ ಸೆಂಟರ್​ನಲ್ಲಿ 5 ಸ್ಫೋಟ ಸಂಭವಿಸಿದೆ. ಪ್ರಾಥಮಿಕ ತನಿಖೆಯಲ್ಲಿ ಭಯೋತ್ಪಾದಕ ಕೃತ್ಯವಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.

ಕಾರ್ಯಕ್ರಮದಲ್ಲಿ 2 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು, ಸ್ಥಳಕ್ಕೆ  ಎನ್​ಐಎ ತಂಡ ತೆರಳಿದ್ದು, ಸ್ಪೋಟದ ಬಗ್ಗೆ ತನಿಖೆ ನಡೆಸಲಿದೆ.

ಕೊಚ್ಚಿಯ ಈಶಾನ್ಯಕ್ಕೆ ಸುಮಾರು 9.6 ಕಿಮೀ ದೂರದಲ್ಲಿರುವ ಕಲಮಸ್ಸೆರಿಯ ಕೇಂದ್ರದಲ್ಲಿ ಕ್ರಿಶ್ಚಿಯನ್ ಧರ್ಮದ ಪ್ರಾರ್ಥನಾ ಸಭೆ ನಡೆಯುತ್ತಿದ್ದಾಗ ಈ ಘಟನೆ ನಡೆದಿದೆ.

ವರದಿಗಳ ಪ್ರಕಾರ, ಸ್ಫೋಟದಲ್ಲಿ 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಮತ್ತು ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಫೋಟಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಸ್ಫೋಟದ ಸ್ಥಳವನ್ನು ಸುತ್ತುವರೆದಿದ್ದಾರೆ. ಕನ್ವೆನ್​ಷನ್ ಸೆಂಟರ್​ನಲ್ಲಿ 3 ಸ್ಪೋಟಗಳು ಸಂಭವಿಸಿವೆ.