ಕೇರಳದ ವಂದೇ ಭಾರತ್ ರೈಲಿನಲ್ಲಿ ಭಾನುವಾರ ವಿಚಿತ್ರ ಘಟನೆಯೊಂದು ನಡೆದಿದೆ. ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಟಿಕೆಟ್ ಇಲ್ಲದೇ Vande Bharat Express ಹತ್ತಿದ ಯುವಕನೊಬ್ಬ ರೈಲಿನ ವಾಶ್‌ರೂಮ್‌ಗೆ ಹೋಗಿ ಚಿಲಕ ಹಾಕಿಕೊಂಡು ಹೊರಗೆ ಬರಲು ನಿರಾಕರಿಸಿದ ಘಟನೆ ನಡೆದಿದೆ. ಅಧಿಕಾರಿಗಳ ಪ್ರಕಾರ, ವಂದೇ ಭಾರತ್ ಎಕ್ಸ್‌ಪ್ರೆಸ್ ಹತ್ತಿದ ಈ ಯುವಕ ವಾಶ್ ರೂಂನಲ್ಲಿ ಹೋಗಿ ಲಾಕ್ ಮಾಡಿಕೊಂಡು ಕುಳಿತಿದ್ದ.
ರೈಲು ಪಾಲಕ್ಕಾಡ್‌ನ ಶೋರನೂರ್ ರೈಲು ನಿಲ್ದಾಣವನ್ನು ತಲುಪಿದಾಗ, ವಾಶ್‌ರೂಮ್‌ನ ಬಾಗಿಲು ಮುರಿದು ವ್ಯಕ್ತಿಯನ್ನು ಹೊರತೆಗೆಯಲಾಯಿತು ಎನ್ನುವ ಮಾಹಿತಿ ಲಭ್ಯವಾಗಿದೆ.
ವಾಶ್ ರೂಂನಿಂದ ಹೊರಗೆ ಕರೆದೊಯ್ದ ನಂತರ ರೈಲ್ವೆ ರಕ್ಷಣಾ ಪಡೆ ಅಧಿಕಾರಿಗಳು ಯುವಕನನ್ನು ವಿಚಾರಣೆ ನಡೆಸಿದ್ದಾರೆ. ರೈಲ್ವೆ ಅಧಿಕಾರಿಗಳ ಪ್ರಕಾರ, ಮೊದಲಿಗೆ ಯುವಕ ಮಹಾರಾಷ್ಟ್ರದ ನಿವಾಸಿ ಎಂದು ಹೇಳಿದ್ದಾನೆ. ಯುವಕ ಹಿಂದಿಯಲ್ಲಿ ಮಾತನಾಡುತ್ತಿದ್ದ. ಬಳಿಕ ತಾನು ಕಾಸರಗೋಡು ನಿವಾಸಿ ಎಂದು ತಿಳಿಸಿದ್ದಾನೆ.
ಯುವಕನ ಗುರುತು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯುವಕ ಟಿಕೆಟ್ ತೆಗೆದುಕೊಳ್ಳದೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ. ವಿಚಾರಣೆ ವೇಳೆ ಯುವಕ ತನ್ನನ್ನು ಯಾರೋ ಹಿಂಬಾಲಿಸಿಕೊಂಡು ಬರುತ್ತಿದ್ದು, ಆತನಿಂದ ತಪ್ಪಿಸಿಕೊಳ್ಳಲು ಮೊದಲು ವಾಶ್‌ರೂಮ್‌ಗೆ ಹೋಗಿ ಕುಳಿತುಕೊಂಡಿರುವುದಾಗಿ ತಿಳಿಸಿದ್ದಾನೆ.
ಅಧಿಕಾರಿಗಳು ಪದೇ ಪದೇ ಸೂಚನೆ ನೀಡಿದರೂ ಕೋಳಿಗೋಡು ಮತ್ತು ಕಣ್ಣೂರಿನಲ್ಲಿ ರೈಲು ನಿಂತಾಗ ಹೊರಗೆ ಬರುವಂತೆ ಹೇಳಿದರೂ, ಆತ ಉದ್ದೇಶಪೂರ್ವಕವಾಗಿ ವಾಶ್ ರೂಂನಲ್ಲಿ ಕುಳಿತುಕೊಂಡಿದ್ದ. ಹೀಗಾಗಿ ಅನಿವಾರ್ಯವಾಗಿ ವಾಶ್ರೂಂ ಲಾಕ್ ಮುರಿದು ಅಧಿಕಾರಿಗಳು ಒಳಗೆ ತೆರಳಿ ಆತನನ್ನು ಹೊರಗೆ ಕರೆತಂದಿದ್ದಾರೆ.