ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳ ಖುಷಿ ನಡುವೆ ದಿನೇ ದಿನೇ ಒಂದಲ್ಲಾ ಒಂದು ಬೆಲೆ ಏರಿಕೆ ಜನರನ್ನು ಕಂಗಾಲಾಗಿಸಿದೆ. ಇದರ ಜೊತೆಗೆ ಟೊಮ್ಯಾಟೊ ದರ ಗಗನಕ್ಕೇರಿದ್ದು ಜನ ಮತ್ತೊಮ್ಮೆ ಶಾಕ್ ಆಗಿದ್ದಾರೆ. ಟೊಮ್ಯಾಟೊ ದರ ನೂರು ರೂಪಾಯಿ ಸನಿಹಕ್ಕೆ ಬಂದಿದ್ದು, 15 Kg ಟೊಮ್ಯಾಟೊ ಬಾಕ್ಸ್ ಸಾವಿರ ರೂ ಇದೆ. ಇನ್ನೆರಡು ದಿನದಲ್ಲಿ ಟೊಮ್ಯಾಟೊ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಕಳೆದ ವಾರ 20-30 ರೂಪಾಯಿ ಇದ್ದ ಟೊಮ್ಯಾಟೊ ದರ, ಈಗ ಏಕಾಏಕಿ 80 ರೂಪಾಯಿ ಆಗಿದೆ. ಮಲ್ಲೇಶ್ವರಂ, ಜಯನಗರ, ರಾಜಾಜಿನಗರ ಇತರೆ ಕಡೆಗಳಲ್ಲಿ 90-100 ರೂಪಾಯಿ ದರದಲ್ಲಿ ಟೊಮ್ಯಾಟೊ ಮಾರಾಟ ಮಾಡಲಾಗುತ್ತಿದೆ. ಇದೇ ಮೊದಲ ಬಾರಿಗೆ ರಾಜ್ಯದ ಟೊಮ್ಯಾಟೊ ಬಾಂಗ್ಲಾಕ್ಕೆ ರಫ್ತು ಮಾಡಲಾಗುತ್ತಿದೆ. ಕೋಲಾರದಿಂದ ಹೊರರಾಜ್ಯಗಳಿಗೆ ರಫ್ತು ಹೆಚ್ಚಾಗುತ್ತಿದ್ದು, ಬೇರೆ ರಾಜ್ಯಗಳಲ್ಲಿ ಟೊಮ್ಯಾಟೊಗೆ ಭಾರೀ ಡಿಮ್ಯಾಂಡ್ ಇದೆ. ಇದರಿಂದಾಗಿ ರಾಜಧಾನಿ ಬೆಂಗಳೂರಿಗೆ ಬೆಲೆ ಬಿಸಿ ತಟ್ಟಿದೆ. ಟೊಮ್ಯಾಟೊ ಖರೀದಿ ಮಾಡಲು ಜನರು ಹಿಂದೇಟು ಹಾಕುವಂತಾಗಿದೆ. ಈ ನಡುವೆ ದಿನಸಿ ಪದಾರ್ಥಗಳ ಬೆಲೆಯು ಕೂಡ ಏರಿಕೆಯಾಗಿದೆ. ಸೂಮಾರು 11 ದಿನಸಿ ಪದಾರ್ಥಗಳ ಬೆಲೆ ಏರಿಕೆ ಮಾಡಲಾಗಿದೆ.
ಬೆಲೆ ಏರಿಕೆಯಾಗಿರುವ ದಿನಸಿಗಳ ವಿವರ
- ಅಕ್ಕಿ: ಹಿಂದಿನ ದರ 40 ರೂ. ಈಗ 50 ರೂ
- ತೂರ್ ದಾಲ್: ಹಿಂದಿನ ದರ 96 ರೂ. ಈಗ 115 ರೂ
- ಉದ್ದಿನಬೇಳೆ: ಹಿಂದಿನ ದರ 95 ರೂ. ಈಗ 128 ರೂ
- ಮಸೂರ್‌ದಾಲ್: ಹಿಂದಿನ ದರ 74 ರೂ. ಈಗ 85 ರೂ
- ಹೆಸರು ಬೇಳೆ: ಹಿಂದಿನ ದರ 95 ರೂ. ಈಗ 105 ರೂ
- ಜೀರಾ: ಹಿಂದಿನ ದರ 350 ರೂ. ಇಂದಿನ ದರ 750 ರೂ
- ಅರಿಶಿಣ ಪುಡಿ: ಹಿಂದಿನ ದರ 126 ರೂ. ಇಂದಿನ ದರ 307 ರೂ.
- ಚಿಲ್ಲಿ ಪೌಡರ್: ಹಿಂದಿನ ದರ 186 ರೂ. ಈಗ 425 ರೂ
- ದನಿಯಾ ಪೌಡರ್: ಹಿಂದಿನ ದರ 150 ರೂ. ಈಗ 218 ರೂ
- ಪೆಪ್ಪರ್: ಹಿಂದಿನ ದರ 380 ರೂ, ಈಗ 520 ರೂ
- ಬ್ಯಾಡಗಿ ಮೆಣಸು: ಹಿಂದಿನ ದರ 330 ರೂ, ಈಗ 850 ರೂ ಇದೆ.