ಅಧಿಕಾರಿಗಳು ಪೀಲ್ಡಿಗೆ ಹೋಗಿ ವಸ್ತುಸ್ಥಿತಿಯನ್ನು ಅರಿತು ವರದಿ ಮಾಡಿ -ಸತೀಶ ಸೈಲ್

ಅಂಕೋಲಾ : ಯಾವುದೇ ಇಲಾಖೆಗಳ ಅಧಿಕಾರಿಗಳು ಕಾರ್ಯಾಲಯ ಬಿಟ್ಟು ಸ್ವತಃ ಫೀಲ್ಡಿಗಿಳಿದು ಅಲ್ಲಿನ ಸಮಸ್ಯೆಗಳನ್ನು ಅರಿತು ವರದಿ ಮಾಡುವಂತೆ ಕಾರವಾರ ಅಂಕೋಲಾ ಕ್ಷೇತ್ರದ ಶಾಸಕ ಸತೀಶ ಸೈಲ್ ಹೇಳಿದರು. ಅವರು ತಾಲೂಕು ಪಂಚಾಯತ ಸಭಾಭವನದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಅಧಿಕಾರಿಗಳು ಕಾರ್ಯಾಲಯದಲ್ಲಿ ಕುಳಿತು ವರದಿ ತಯಾರಿಸದೆ ಸ್ವತಃ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಅಲ್ಲಿನ ಸಮಸ್ಯೆಗಳಿದ್ದರೆ ಅದನ್ನು ಅರಿತು ನಂತರ ವರದಿ ತಯಾರಿಸಿ ಎಂದು ವಿವಿಧ ಇಲಾಖೆಗಳ ಅನುಷ್ಠಾನ ಅಧಿಕಾರಿಗಳಿಗೆ ಸೂಚಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮೀ ಪಾಟೀಲ ಶಿಕ್ಷಣ ಇಲಾಖೆಯ ಪ್ರಗತಿ ವರದಿಗೆ ಪ್ರತಿಕ್ರಯಿಸಿ ತಾಲೂಕಿನಲ್ಲಿ ಕೆಲವು ಹಳೆಯ ಶಾಲಾ ಕಟ್ಟಡಗಳು ದುಸ್ಥಿತಿಯಲ್ಲಿವೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆಗಾಗ ಸ್ವತಃ ಪ್ರವಾಸ ಕೈಗೊಂಡು ಪರಿಶೀಲನೆ ನಡೆಸಿ ಶಿಥಿಲಗೊಂಡ ಶಾಲಾ ಕಟ್ಟಡಗಳ ದುರಸ್ಥಿಗೆ ಅಥವಾ ಹೊಸ ಕಟ್ಟಡಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿ ಶಾಲಾ‌ಕಟ್ಟಡ ಮತ್ತು ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗೆ ಹೆಚ್ಚಿನ ಪ್ರಾಶಸ್ತ್ಯದಲ್ಲಿ ಅನುದಾನ ಒದಗಿಸುತ್ತೇನೆ ಎಂದರು.
ಶಾಲೆಗಳ ಕಟ್ಟಡ ಮತ್ತು ದುರಸ್ತಿಯ ಬಗ್ಗೆ ಹೆಚ್ಚಿನ ಗಮನ ವಹಿಸಬೇಕು. ಕೂಡಲೇ ಎಸ್ಟಿಮೇಟ ಜೊತೆ ಪ್ರಸ್ತಾವನೆ ಸಲ್ಲಿಸಬೇಕು ಬಂದಿರುವ ಅನುದಾನದಲ್ಲಿ ಮಕ್ಕಳಿಗಾಗಿ ಆದ್ಯತೆ ನೀಡಲಾಗುವದು.
ಬಸ್ಸಿನ ಮೂಲಕ ಬರುವ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗಬಾರದು. ಮಕ್ಕಳಿಗೆ ಬಿಸಿನೀರು ತಣ್ಣೀರು ಕುಡಿಯುವ ನೀರಿನವ್ಯವಸ್ಥೆಗೆ ಕ್ರಮ.
ಆರೋಗ್ಯ ಇಲಾಖೆಯಿಂದ ತಾಲೂಕಾ ವೈದ್ಯಾಧಿಕಾರಿ ಡಾ.ಸಂತೋಷಕುಮಾರ ಇಲಾಖೆಯ ಪರ ವರದಿ ನೀಡಿ ಡಯಾಲಿಸಿಸ್ ನಿರ್ವಹಣೆ ವಹಿಸಿದ್ದ ಸಂಜೀವಿನಿ ಏಜನ್ಸಿಯವರು ಈಗ ನಿರ್ವಹಿಸುತ್ತಿಲ್ಲ. ಹೀಗಾಗಿ ಆಸ್ಪತ್ರೆಯಿಂದಲೇ ನಿರ್ವಹಿಸಲಾಗುತ್ತಿದೆ. ಒಂದು ಯಂತ್ರ ಕೆಟ್ಟದೆ. ಸ್ತ್ರೀ ರೋಗ ತಜ್ಞರು, ಎಕ್ಸರೇ ಮತ್ತು ಲ್ಯಾಬ್ ಟೆಕ್ನಿಶಿಯನ್ ಕೊರತೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.
ರೋಗಿಗಳನ್ನು ಬೇರೆಡೆಗೆ ರೆಫರ್ ಮಾಡುವದು ಅನಿವಾರ್ಯವಾಗಿದೆ ಎಂದರು. ಇದಕ್ಕೆ ಶಾಸಕರು ಇಲಾಖೆಯ ಆಯುಷ್ಮಾನ್ ಭಾರತ ಕರ್ನಾಟಕ ಖಾತೆಯಲ್ಲಿರುವ ಹಣದಲ್ಲಿ ಇನ್ನೊಂದು ಡಯಾಲಿಸಿಸ್ ಯಂತ್ರ ಮತ್ತು ಮೂರು ತಿಂಗಳಿಗೆ ಸಾಕಾಗುವಷ್ಟು ಪರಿಕರಗಳನ್ನು ಖರೀದಿಸಿ, ಲ್ಯಾಬನ್ನು ಸುಸಜ್ಜಿತಗೊಳಿಸುವಂತೆಯೂ ಆಯುಷ್ಮಾನ್ ಯೋಜನೆಯಲ್ಲಿ ಸೌಲಭ್ಯಗಳು ಸಿಗುವ ಆಸ್ಪತ್ರೆಗಳು ಮತ್ತು ಅನುಸರಿಸಬೇಕಾದ ಕ್ರಮಗಳ ಕುರಿತು ಪ್ರತೀ ಗ್ರಾ.ಪಂಚಾಯತಗಳ ಮೂಲಕ ಜನರಿಗೆ ಮಾಹಿತಿ ಮುಟ್ಟುವಂತೆ ಯೋಜನೆ ರೂಪಿಸಿ ಎಂದರು.

ಮೀನುಗಾರರಿಗೆ ಮನೆ ಕಟ್ಟಿಕೊಳ್ಳಲು ಕಟ್ಟಡ ಪರವಾನಿಗೆ ನೀಡಿ.
ಮೀನುಗಾರರಿಗೆ ಮನೆ ಮಂಜೂರಾಗಿದ್ದರೂ ಸಂಬಂಧಪಟ್ಟ ಗ್ರಾಮ ಪಂಚಾಯತಿಗಳಿಂದ ಕಟ್ಟಡ ಪರವಾನಿಗೆ ವಿಳಂಬವಾಗುತ್ತಿದೆ ಎಂದು ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ರೆನಿಟಾ ಡಿಸೋಜಾ ಹೇಳಿಕೆಗೆ ಉತ್ತರಿಸಿದ ಶಾಸಕರು ಮೀನುಗಾರರಿಗೆ ಮನೆ ಕಟ್ಟಲು ಸಿ.ಆರ. ಝೆಡ್ ಅನ್ವಯವಾಗುವದಿಲ್ಲ ಅದನ್ನು ನೆಪ ಮಾಡದೆ ಪಂಚಾಯಿತಿಯಿಂದ ನಿರಪೇಕ್ಷಣಾ ಪತ್ರ ಹಾಗೂ ಕಟ್ಟಡ ಪರವಾನಿಗೆಯನ್ನು ಸಂಬಂಧಪಟ್ಟ ಪಿಡಿಓಗಳು ನೀಡಬೇಕು. ಹಾಗೂ ಇನ್ನೂ 50 ಮನೆಗಳಿಗೆ ಬೇಡಿಕೆಯ ಪ್ರಸ್ತಾವನೆ ಸಲ್ಲಿಸಿ ಎಂದರು.
ಕಳೆದ ಐದು ವರ್ಷಗಳಲ್ಲಿ 15 ಮೀನುಗಾರರು ಮರಣ ಹೊಂದಿದ್ದು ಕೇವಲ 7 ಮೃತರ ಕುಟುಂಬಗಳಿಗೆ ಮಾತ್ರ ಹಣ ಸಂದಾಯವಾಗಿದೆ.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀಧರ ನಾಯ್ಕ ಅಂಕೋಲಾ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಸರ್ವೇ ನಡೆಸಲಾಗಿದೆ ಕೇಂದ್ರದ ತಂಡವೂ ಆಗಮಿಸಿ ಸರ್ವೇ ನಡೆಸಲಿದೆ ಎಂದರು.

ತಾಲೂಕಿನಲ್ಲಿ 188 ಮನೆಗಳಿಗೆ ಕರೆಂಟ್ ಇಲ್ಲ ಎಂದು ಹೆಸ್ಕಾಂ ಅಧಿಕಾರಿ ಪ್ರವೀಣ ನಾಯ್ಕಮಾಹಿತಿ ನೀಡಿದರು. ಬೆಳಕು ಯೋಜನೆ ಜಾರಿಯಾದ ನಂತರದಲ್ಲಿ ಕಟ್ಟಿದ ಮನೆಗಳಿಗೆ ಹೊಸದಾಗಿ ವಿದ್ಯುತ್ ಸಂಪರ್ಕ ನೀಡಬೇಕಿದೆ, ಅರಣ್ಯ ಇಲಾಖೆಯ ಮರ ಕಟಿಂಗ್, ಲೈನ್ ಎಳೆಯಲು ಮುಂತಾದ ತಾಂತ್ರಿಕ ಸಮಸ್ಯೆಗಳಿಂದ ಬಾಕಿ ಉಳಿದಿದೆ ಎಂದರು. ಇದೇ ವೇಳೆ ಅಗಸೂರಿನಲ್ಲಿ ಪದೇ ಪದೇ ಹೈವೋಲ್ಟೇಜನಿಂದ ವಿದ್ಯುತ್ ಅವಘಡಗಳು ಸಂಭವಿಸುತ್ತಿವೆ ಅಧಿಕಾರಿಗಳು ಸೂಕ್ತ ಕ್ರಮ ವಹಿಸಿವಂತೆ ಅಗಸೂರು ಗ್ರಾ.ಪಂ. ಅಧ್ಯಕ್ಷೆ ನಿರ್ಮಲಾ ನಾಯಕ ಆಗ್ರಹಿಸಿದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ತೆರವುಗೊಳಿಸಿದ್ದ ಬಸ್ ನಿಲುಗಡೆಯಲ್ಲಿನಪ್ರಯಾಣಿಕರ ತಂಗುದಾಣ ನಿರ್ಮಿಸುವ ಕುರಿತು ತೀವ್ರ ಚರ್ಚೆ ನಡೆಯಿತು. ಐಆರಬಿ ಕಂಪನಿಯ ಪ್ರತಿನಿಧಿಗಳು ಕೇವಲ ನಾಲ್ಕು ತಂಗುದಾಣ ನಿರ್ಮಿಸುವ ಪ್ರಸ್ತಾವನೆ ಇದೆ ಎಂದಾಗ ಶಾಸಕರು ಎಲ್ಲೆಲ್ಲಿ ತೆರವುಗೊಳಿಸಲಾಗಿತ್ತೋ ಅಲ್ಲಿ ಪುನಃ ನಿರ್ಮಿಸಿ ಕೊಡುವಂತೆ ಸೂಚಿಸಿದರು. ಬಸ್ ನಿಲ್ದಾಣದೊಳಗೆ ಬೇಕಾಬಿಟ್ಟಿ ಗೂಡಂಗಡಿಗಳಿಗೆ ಅವಕಾಶ ನೀಡಿದ ಕ್ರಮದ ಕುರಿತು ಸಾರಿಗೆ ಇಲಾಖೆಯ ಘಟಕ ವ್ಯವಸ್ಥಾಪಕಿ ಚೈತನ್ಯ ಅಗರಗಟ್ಟಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಶಾಸಕರು ಕೂಡಲೇ ಗೂಡಂಗಡಿಗಳನ್ನು ಸ್ಥಳಾಂತರಿಸಿ ಮತ್ತು ಅಪಘಾತಕ್ಕೆ ಕಾರಣವಾಗುತ್ತಿರುವ ಮರವನ್ನೂ ತೆರವುಗೊಳಿಸಿ ಯಾವುದೇ ಕಾರಣಕ್ಕೂ ವಿಳಂಬ ಮಾಡಬೇಡಿ ಎಂದು ಎಚ್ಚರಿಸಿದರು. ಹಾಗೂ ಶಾಲಾಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಬಸ್ಸಿನ ನಿಲುಗಡೆ ಮತ್ತು ನಿಗದಿತ ಸಮಯಕ್ಕೆ ಬಿಡುವಂತೆ ಕ್ರಮ ವಹಿಸಲು ಸೂಚಿಸಿದರು. ಸಭೆಯಲ್ಲಿ ಅಹವಾಲು ನೀಡಲು ಆಗಮಿಸಿದ್ದ ಅಲಗೇರಿ, ಭಾವಿಕೇರಿ ಮತ್ತು ಬಡಗೇರಿ ಗ್ರಾಮಸ್ಥರಿಗೆ ವಿಮಾನ ನಿಲ್ದಾಣ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಅವಾರ್ಡ್ ನೋಟೀಸ್ ಜಾರಿಯಾಗಿದ್ದರಿಂದ ಯಾರೂ ಆತಂಕ ಪಡುವ ಅಗತ್ಯ ಇಲ್ಲ ನಿರಾಶ್ರಿತರ ಸಮಸ್ಯೆಗಳನ್ನು ನಿಯೋಗ ರಚಿಸಿ ಸರಕಾರದ ಮಟ್ಟದಲ್ಲಿ ಚರ್ಚಿಸಿ ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
ವೇದಿಕೆಯಲ್ಲಿ ತಾ.ಪಂ. ಆಢಳಿತಾಧಿಕಾರಿ ನಾಗೇಶ ರಾಯ್ಕರ, ತಹಶೀಲ್ದಾರ ಅಶೋಕ ಭಟ್, ತಾ.ಪಂ‌ ಕಾರ್ಯ ನಿರ್ವಹಣಾಧಿಕಾರಿ ಸುನೀಲ ಎಂ ಉಪಸ್ಥಿತರಿದ್ದರು. ಸಭೆಯಲ್ಲಿ ತಾಲೂಕಿನ ವಿವಿಧ ಅನುಷ್ಠಾನ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.