ಹಳಿಯಾಳ : ಪಟ್ಟಣದ ಪುರಭವನದಲ್ಲಿ ಹಳಿಯಾಳ ತಾಲೂಕು ಸರಕಾರಿ ಹಾಗೂ ಅನುದಾನಿತ ಶಾಲಾ ನೌಕರರ ಪತ್ತಿನ ಸಹಕಾರಿ ಸಂಘದ 9ನೇ ವರ್ಷದ ವಾರ್ಷಿಕ ಸಭೆಯು ಇಂದು ಭಾನುವಾರ ಜರುಗಿತು.
ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಹಳಿಯಾಳ ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಸತೀಶ್ ನಾಯ್ಕ ಅವರು ಪರಸ್ಪರ ಸೌಹಾರ್ದತೆ, ನಂಬಿಕೆ, ವಿಶ್ವಾಸ ಸಹಕಾರಿ ತತ್ವದ ಪ್ರಮುಖ ಉದ್ದೇಶ. ನಮ್ಮ ನಮ್ಮ ಆರ್ಥಿಕ ಸಮಸ್ಯೆಗಳಿಗೆ ತ್ವರಿತ ಗತಿಯಲ್ಲಿ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ನಮಗೆ ನಾವೇ ಸ್ಪಂದಿಸಬೇಕೆನ್ನುವ ವಿಶೇಷ ಉದ್ದೇಶದಡಿಯಲ್ಲಿ ಪ್ರಾರಂಭವಾದ ಸರಕಾರಿ ಹಾಗೂ ಅನುದಾನಿತ ಶಾಲಾ ನೌಕರರ ಪತ್ತಿನ ಸಹಕರಿ ಸಂಘವು ಯಶಸ್ವಿಯಾಗಿ 9ನೇ ವರ್ಷವನ್ನು ಪೂರೈಸಿ ಪ್ರಗತಿಯೆಡೆಗೆ ಸಾಗುತ್ತಿರುವುದು ಉತ್ತಮವಾದ ಬೆಳವಣಿಗೆ. ಸಂಘದ ಉದ್ದೇಶವು ಸಾಫಲ್ಯಗೊಂಡು ಸಂಘವು ಇನ್ನೂ ಉತ್ತರೋತ್ತರ ಪ್ರಗತಿಯನ್ನು ಸಾಧಿಸುವಂತಾಗಲೆಂದು ಶುಭವನ್ನು ಹಾರೈಸಿದರು.ಮುಖ್ಯ ಅತಿಥಿಗಳಾಗಿ ಹಳಿಯಾಳ ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಜಾಕೀರ್ ಹುಸೇನ್ ಜಂಗೂಬಾಯಿ, ಹಳಿಯಾಳ ತಾಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಪ್ರಶಾಂತ್ ನಾಯ್ಕ, ಶಿಕ್ಷಣ ಸಂಯೋಜಕರಾದ ಜೇಮ್ಸ್ ಡಿಸೋಜಾ ಅವರು ಭಾಗವಹಿಸಿ ಸಂಘದ ಪ್ರಗತಿಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಶುಭವನ್ನು ಹಾರೈಸಿದರು.
ಸಂಘದ ಅಧ್ಯಕ್ಷರಾದ ಉದಯ್ ನಾಯಕ ಅವರು ಸಭೆಯ ಅಧ್ಯಕ್ಷತೆಯನ್ನು ವಹಿಸಿ ಸಂಘದ ಪ್ರಗತಿಗೆ ಸಹಕರಿಸಿದ ಸರ್ವರಿಗೂ ಕೃತಜ್ಞತೆಗಳನ್ನು ಸಲ್ಲಿಸಿ ಮುಂದೆಯೂ ಇದೇ ರೀತಿಯ ಸಹಕಾರವನ್ನು ನೀಡುವಂತೆ ವಿನಂತಿಸಿದರು.ಕಾರ್ಯಕ್ರಮದಲ್ಲಿ ಸಂಘದ ಶೇರುದಾರರಾದ ನಿವೃತ್ತ 17 ಶಿಕ್ಷಕರನ್ನು ಹಾಗೂ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಸಾಧನೆಗೈದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ರಮೇಶ್ ಪಾಟೀಲ್ ಮತ್ತು ಗೀತಾ ಹೊಸೂರ್ ಕಾರ್ಯಕ್ರಮವನ್ನು ನಿರೂಪಿಸಿದರು.




