ಹಳಿಯಾಳ : ಭಾರತೀಯ ಜನತಾ ಪಾರ್ಟಿ ಹಳಿಯಾಳ
ವಿಧಾನಸಭಾ ಕ್ಷೇತ್ರದ ವತಿಯಿಂದ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾಜಿ ಶಾಸಕರಾದ ಸುನೀಲ್ ಹೆಗಡೆ ಅವರ ನೇತೃತ್ವದಲ್ಲಿ ಇಂದು ಹಳಿಯಾಳ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸುನೀಲ್ ಹೆಗಡೆಯವರು ಹಳಿಯಾಳ, ದಾಂಡೇಲಿ ಹಾಗೂ ಜೋಯಿಡಾ ತಾಲೂಕುಗಳನ್ನು ಕೂಡಲೇ ಸರ್ಕಾರ ಬರ ಪೀಡಿತ ತಾಲೂಕುಗಳನ್ನಾಗಿ ಘೋಷಿಸಬೇಕು. ಈ ತಾಲೂಕುಗಳಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರು ವಿವಿಧ ರಾಷ್ಟ್ರೀಕತ ಬ್ಯಾಂಕ್ ಹಾಗೂ ಸಹಕಾರಿ ಸಂಘಗಳಲ್ಲಿ ಪಡೆದುಕೊಂಡ ಬೆಳೆ ಸಾಲವನ್ನು ಬಡ್ಡಿ ಸಹಿತ ಮನ್ನಾ ಮಾಡಬೇಕು ಹಾಗೂ ಆಗಿನ ನಮ್ಮ ಬಿಜೆಪಿ ಸರ್ಕಾರ ತಂದಂತಹ ಕಿಸಾನ್ ಸಮ್ಮಾನ್ ಯೋಜನೆ, ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ವಿದ್ಯಾ ನಿಧಿ ಯೋಜನೆ, ರೈತರ ಪಂಪ್ ಸೆಟ್ ಗಳಿಗೆ ನಿರಂತರವಾಗಿ ವಿದ್ಯುತ್ ಪೂರೈಸುವ ಯೋಜನೆಯನ್ನು ಕೂಡಲೇ ಮರು ಜಾರಿಗೆ ಮಾಡಬೇಕೆಂದು ಒತ್ತಾಯಿಸಿದರು.
ಅದೇ ರೀತಿ ಆಗಿನ ಸರ್ಕಾರ ಘೋಷಿಸಿದ 150 ರೂಪಾಯಿ ಬೆಂಬಲ ಬೆಲೆ ಪ್ರತಿ ಟನ್ ಕಬ್ಬಿಗೆ ನೀಡಿ ನೇರವಾಗಿ ರೈತರ ಖಾತೆಗಳಿಗೆ ಜಮಾ ಮಾಡುವುದು ಹಾಗೂ ಹಳಿಯಾಳದ ಸಕ್ಕರೆ ಕಾರ್ಖಾನೆಯವರು ಸ್ವತಃ ರೈತರ ಹೊಲಗಳಿಗೆ ತೆರಳಿ ಕಬ್ಬು ಕಟಾವು ಮಾಡಿಕೊಂಡು ಹೋಗಬೇಕು, ಆದರೆ ಯಾವುದೇ ವೆಚ್ಚವನ್ನು ರೈತರ ಮೇಲೆ ಹೇರಬಾರದು. ಇದರ ಸಂಪೂರ್ಣ ವೆಚ್ಚವನ್ನು ಕಾರ್ಖಾನೆಯವರೇ ಭರಿಸಬೇಕು ಮತ್ತು ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಕ್ಕರೆ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೀಡಲು ತಿರ್ಮಾನಿಸಿದ್ದ ಹಿಂದಿನ ವರ್ಷಗಳ H&T ಹಣವನ್ನು ರೈತರ ಖಾತೆಗಳಿಗೆ ಕೂಡಲೇ ಜಮಾ ಮಾಡಬೇಕು. ತಾಲೂಕಿನಲ್ಲಿ ಬೆಳೆದ ಕಬ್ಬನ್ನು ಮೊದಲು ಕಟಾವು ಮಾಡಿ ನುರಿಸಿದ ನಂತರವೇ ಬೇರೆ ತಾಲೂಕಿಗೆ ಆದ್ಯತೆ ನೀಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪಕ್ಷದ ತಾಲೂಕು ಅಧ್ಯಕ್ಷರಾದ ಗಣಪತಿ ಕರಂಜೇಕರ, ಜಿಲ್ಲಾ ಬಿಜೆಪಿ ಪ್ರಮುಖರಾದ ಮಂಗೇಶ ದೇಶಪಾಂಡೆ, ಜೋಯಿಡಾ ಬಿಜೆಪಿ ಅಧ್ಯಕ್ಷ ಸಂತೋಷ ರೇಡ್ಕರ, ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.