ಯುವತಿಯ ಕತ್ತುಸೀಳಿ ಕೊಲ್ಲುವ ಮುನ್ನ ಅಂಗಡಿಗೆ ಬಂದು MOBILE ಕಸಿದುಕೊಂಡಿದ್ದ ಹಂತಕ

ಮಂಗಳೂರು: ಪುತ್ತೂರಿನ ಫ್ಯಾನ್ಸಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ 18 ವರ್ಷದ ಯುವತಿಯನ್ನು ಅತ್ಯಂತ ಬರ್ಬರವಾಗಿ ಮೂರರಿಂದ ನಾಲ್ಕು ಬಾರಿ ಕುತ್ತಿಗೆಗೆ ಚೂರಿಯಿಂದ ಇರಿದು ಕೊಲೆ ಮಾಡಿದ ಆ ದುಷ್ಟ ಪ್ರಿಯಕರ (Cruel Lover) ಇಡೀ ದಿನ ಅವಳನ್ನು ಇನ್ನಿಲ್ಲದಂತೆ ಕಾಡಿದ್ದ ಎಂಬ ಅಂಶ ಈಗ ಬೆಳಕಿಗೆ ಬರುತ್ತಿದೆ.

ಪುತ್ತೂರಿನ ಮಹಿಳಾ ಪೊಲೀಸ್‌ ಠಾಣೆಯ ಸಮೀಪವೇ ಗೌರಿ ಎಂಬ ಈ ಹುಡುಗಿಯನ್ನು ಪದ್ಮರಾಜ್‌ ಎಂಬಾತ ಗುರುವಾರ ಮಧ್ಯಾಹ್ನದ ಇರಿದು ಕೊಲೆ ಮಾಡಿದ್ದ. ಇವರಿಬ್ಬರು ಪ್ರೇಮಿಗಳು ಎಂದು ಮೇಲ್ನೋಟಕ್ಕೆ ಹೇಳಲಾಗುತ್ತಿದೆಯಾದರೂ ಆತ ಗೌರಿಯನ್ನು ಪ್ರೇಮಿಸುತ್ತಿದುದಲ್ಲ, ಬದಲಾಗಿ ವೈರಿಗಳಿಗಿಂತಲೂ ಕಡೆಯಾಗಿ ಆಕೆಗೆ ಹಿಂಸೆ ನೀಡುತ್ತಿದ್ದ ಎನ್ನುವುದು ಈಗ ಬಯಲಾಗುತ್ತಿದೆ. ಫ್ಯಾನ್ಸಿ ಅಂಗಡಿಯಲ್ಲಿ ದಾಖಲಾದ ಅದೊಂದು ವಿಡಿಯೊ ಆಕೆ ಅನುಭವಿಸುತ್ತಿದ್ದ ಎಲ್ಲ ಯಾತನೆಗಳನ್ನು ಬಿಚ್ಚಿಡುತ್ತಿದೆ.

ಗೌರಿ ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದವಳು. ಪುತ್ತೂರಿನ ಫ್ಯಾನ್ಸಿ ಅಂಗಡಿಯೊಂದರಲ್ಲಿ ಗೌರಿ ಸೇಲ್ಸ್‌ ಗರ್ಲ್‌ ಆಗಿ ಕೆಲಸ ಮಾಡುತ್ತಿದ್ದಳು. ಗೌರಿ ಮತ್ತು ಪದ್ಮರಾಜ್ ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ, ಪದ್ಮರಾಜ್ ಯಾವತ್ತೂ ಆಕೆಯನ್ನು ಪ್ರೀತಿಯಿಂದ ನೋಡಿಕೊಂಡಿರಲಿಲ್ಲ. ಆತನಿಗೂ ಗೌರಿಗೂ ಹಲವು ಬಾರಿ ಯಾವುದೊ ವಿಚಾರಕ್ಕೆ ಗಲಾಟೆ ನಡೆದಿತ್ತು. ಒಮ್ಮೆ ಪ್ರಕರಣವು ವಿಟ್ಲ ಪೊಲೀಸ್‌ ಠಾಣೆ ಮೆಟ್ಟಲೇರಿತ್ತು. ಇಷ್ಟೆಲ್ಲ ಆದರೂ ಆತ ಬಳಿಕ ಮತ್ತೆ ಆಕೆಯನ್ನು ಪುಸಲಾಯಿಸಿ, ಅತ್ತು ಕರೆದು ಸಮಾಧಾನ ಮಾಡಿ ಉಳಿಸಿಕೊಳ್ಳುತ್ತಿದ್ದ ಎಂದು ಭಾವಿಸಲಾಗಿದೆ. ಆದರೆ ಕೆಲವೇ ದಿನಗಳಲ್ಲಿ ಆತನ ಕ್ರೌರ್ಯ ಮತ್ತೆ ಹೆಡೆ ಎತ್ತುತ್ತಿತ್ತು.

ವಸ್ತ್ರ ಮಳಿಗೆಯ ಆ ವಿಡಿಯೊದಲ್ಲಿ ಏನಿದೆ?
ಗುರುವಾರ ಮಧ್ಯಾಹ್ನ ಕೊಲೆ ನಡೆಯುವ ಮೊದಲು ಅವರಿಬ್ಬರೂ ಎರಡು ಬಾರಿ ಗಲಾಟೆ ಮಾಡಿಕೊಂಡಿದ್ದರು ಎನ್ನಲಾಗಿದೆ. ಗೌರಿ ಫ್ಯಾನ್ಸಿ ಅಂಗಡಿಗೆ ಕೆಲಸಕ್ಕೆ ಬಂದ ಮೇಲೂ ಆಗಾಗ ಕರೆ ಮಾಡಿ ಪದ್ಮರಾಜ್‌ ಕಿರಿಕಿರಿ ಮಾಡುತ್ತಿದ್ದ. ವಸ್ತ್ರ ಮಳಿಗೆಗೆ ಬರುವ ಮೊದಲು ಒಮ್ಮೆ ಬಸ್‌ ನಿಲ್ದಾಣದಲ್ಲೂ ಜಗಳವಾಗಿತ್ತು ಎನ್ನಲಾಗಿದೆ.

ಆಕೆ ಕೆಲಸಕ್ಕೆ ಬಂದ ಮೇಲೆ ಆತ ಅವಳಿದ್ದಲ್ಲಿಗೆ ಒಮ್ಮೆಗೇ ಧಾವಿಸಿದ್ದ. ಅವನಿಗೆ ಅವಳ ಮೊಬೈಲ್‌ ಮೇಲೆ ಕಣ್ಣಿತ್ತು. ಗೌರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವಾಗ ಒಮ್ಮೆಗೇ ನುಗ್ಗಿ ಬರುವ ಆತ ಮೊದಲು ಮೊಬೈಲ್‌ ಕೊಡು ಎಂದು ಕೇಳುತ್ತಾನೆ. ಆಕೆ ಕೊಡುವುದಿಲ್ಲ ಎಂದು ಹೇಳುತ್ತಾಳೆ. ಆದರೆ, ಅವನೋ ದೈತ್ಯ, ಇವಳು ಗುಬ್ಬಚ್ಚಿ. ಅವನು ಅಷ್ಟೂ ಜನರ ಮುಂದೆ ಆಕೆಯ ಮೇಲೆ ಹಲ್ಲೆ ಮಾಡಿ ಆಕೆಯನ್ನು ಬಗ್ಗಿಸಿ ಆಕೆಯ ಕೈಯಲ್ಲಿದ್ದ ಮೊಬೈಲನ್ನು ಕಸಿದುಕೊಂಡು ಹೋಗುತ್ತಾನೆ. ಆತ ಹೋದ ಮೇಲೆ ಆಕೆ ಕಣ್ಣೀರು ಹಾಕುತ್ತಾ ನಿಲ್ಲುವ ದೃಶ್ಯ ವಿಡಿಯೊದಲ್ಲಿ ದಾಖಲಾಗಿದೆ.

ಮೊಬೈಲ್‌ ಕೊಡುತ್ತೇನೆ ಬಾ ಅಂದಿದ್ದ
ಅಂಗಡಿಗೆ ಬಂದು ಜಗಳ ಮಾಡಿ ಮೊಬೈಲ್‌ ಕಸಿದುಕೊಂಡು ಆತ ಹೋಗುತ್ತಿದ್ದಂತೆಯೇ ಇತ್ತ ಗೌರಿ ಬೇರೆಯವರ ಮೊಬೈಲ್‌ನಿಂದ ಆತನಿಗೆ ಕರೆ ಮಾಡಿದ್ದಾಳೆ. ದಯವಿಟ್ಟು ನನ್ನ ಮೊಬೈಲ್‌ ಕೊಡು ಎಂದು ಅಂಗಲಾಚಿದ್ದಾಳೆ. ಆಗ ಆತ ಮಹಾಲಿಂಗೇಶ್ವರ ದೇವಸ್ಥಾನದ ಕೆರೆಗೆ ಬಳಿ ಬಾ ಕೊಡುತ್ತೇನೆ ಎಂದು ಹೇಳಿದ್ದಾನೆ.

ಗೌರಿ ಮಧ್ಯಾಹ್ನ ಆತನ ಮಾತನ್ನು ನಂಬಿ ಅಲ್ಲಿಗೆ ಹೋಗಿದ್ದಾಳೆ. ಅಲ್ಲಿ ಮತ್ತೆ ಅವರಿಬ್ಬರ ಮಧ್ಯೆ ಜಗಳ ನಡೆದಿದೆ. ಆತನ ಆಕೆಯನ್ನು ಹೀನಾಮಾನವಾಗಿ ಬೈದಂತೆ ಕಾಣುತ್ತಿದೆ. ಆಕೆ ಕಣ್ಣೀರು ಹಾಕಿಕೊಂಡು ಆತನೊಂದಿಗಿನ ಎಲ್ಲ ಸಂಬಂಧ ಕಡಿದುಕೊಳ್ಳಲು ನಿರ್ಧರಿಸಿದಂತೆ ಕಾಣುತ್ತಿದೆ. ಇನ್ನು ನಿನ್ನನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಆಕೆ ಸ್ವಲ್ಪ ದೂರದಲ್ಲಿರುವ ಮಹಿಳಾ ಠಾಣೆಗೆ ವೇಗವಾಗಿ ಸಾಗಿದ್ದಾಳೆ.

ಆತ ಪದ್ಮರಾಜನ ಕ್ರೌರ್ಯ ಇನ್ನಷ್ಟು ಹೆಚ್ಚಿದೆ. ಅವಳು ಬಿರಬಿರನೆ ಪೊಲೀಸ್‌ ಸ್ಟೇಷನ್‌ ಕಡೆಗೆ ನಡೆಯುತ್ತಿದ್ದರೆ ಇತ್ತ ಆತ ಬೈಕ್‌ನಲ್ಲಿ ಆಕೆಯನ್ನು ಹಿಂಬಾಲಿಸಿದ್ದಾನೆ. ಕೊನೆಗೆ ಆಕೆಯನ್ನು ಬೆನ್ನಟ್ಟಿ ಎಲ್ಲರೂ ನೋಡನೋಡುತ್ತಿದ್ದಂತೆಯೇ ಮೂರ್ನಾಲ್ಕು ಬಾರಿ ಚೂರಿಯಿಂದ ಇರಿದು ಕೊಲೆ ಮಾಡಿದ್ದಾನೆ.

ಪದ್ಮರಾಜನ ಕ್ರೌರ್ಯ ಎಷ್ಟಿತ್ತೆಂದರೆ ಆತ ಆವತ್ತು ಆಕೆಯನ್ನು ಕೊಲೆ ಮಾಡಲು ನಿರ್ಧರಿಸಿಯೇ ಬಂದಿದ್ದ ಅನಿಸುತ್ತದೆ. ಆದೇ ಕಾರಣಕ್ಕೆ ಆತ ಆಕೆಯನ್ನು ಮೂರು ಮೂರು ಬಾರಿ ಕಾಡಿದ್ದಾನೆ. ಜತೆಗೆ ಕೈಯಲ್ಲಿ ಚೂರಿಯನ್ನು ಹಿಡಿದುಕೊಂಡೇ ಬಂದಿದ್ದಾನೆ.

ಅಂತೂ ಪದ್ಮರಾಜನ ಕ್ರೌರ್ಯಕ್ಕೆ ಆ ಯುವತಿ ನಡುರಸ್ತೆಯಲ್ಲಿ ಬಿದ್ದು ಪ್ರಾಣ ಕಳೆದುಕೊಂಡಿದ್ದಾಳೆ. ಯಾರದೋ ಮನೆ ಮಗಳು ಇವರ ಪ್ರೀತಿಯ ಸಂಕೋಲೆಯಲ್ಲಿ ಬಿದ್ದು ಕ್ರೌರ್ಯದ ಕೈಗೆ ಸಿಕ್ಕು ಸತ್ತೇ ಹೋಗಿದ್ದಾಳೆ.