ತಾ.ಪಂ ಕಾರ್ಯನಿರ್ವಹಣಾಧಿಕಾರಿಯ ಕಾರ್ಯವೈಖರಿಯ ಬಗ್ಗೆ ಅಸಮಾಧಾನಕ್ಕೆ ಸರಿಪಡಿಸುವ ಭರವಸೆ ನೀಡಿದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ದಾಂಡೇಲಿ : ತಾಲ್ಲೂಕಿನ ಕೇರವಾಡದ ಕೆರೆ ಒಡೆದು ಅಪಾರ ಪ್ರಮಾಣದ ಹಾನಿಯಾಗಿರುವ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡದೇ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿರುವುದರ ಬಗ್ಗೆ ಮತ್ತು ತಾಲ್ಲೂಕಾಡಳಿತ ಮತ್ತು ನಗರಾಡಳಿತ ಆಯೋಜಿಸಿದ್ದ ಸ್ವಾತಂತ್ರೋತ್ಸವ ಕಾರ್ಯಕ್ರಮ ಹಾಗೂ ಶಾಸಕರ ಅಧ್ಯಕ್ಷತೆಯಲ್ಲಿ ವೀರಯೋಧರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮಕ್ಕೆ ಗೈರು ಹಾಜರಾಗಿರುವುದು. ತಾಲ್ಲೂಕು ಪಂಚಾಯ್ತು ಕಾರ್ಯಾಲಯದಲ್ಲಿ ಹೆಚ್ಚಿನ ದಿನಗಳಲ್ಲಿ ಇಲ್ಲದೇ ಇರುವ ದಾಂಡೇಲಿ ತಾಲ್ಲೂಕು ಪಂಚಾಯ್ತು ಕಾರ್ಯನಿರ್ವಹಣಾಧಿಕಾರಿಯವರ ಬಗ್ಗೆ ದಾಂಡೇಲಿ ನಗರ ಸಭೆಯ ಆವರಣದಲ್ಲಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರಲ್ಲಿ ಮಾಧ್ಯಮದವರು ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು. ದಾಂಡೇಲಿ ತಾಲ್ಲೂಕು ಸಣ್ಣ ತಾಲ್ಲೂಕಾಗಿದ್ದು, ಕೇವಲ ನಾಲ್ಕೆ ನಾಲ್ಕು ಗ್ರಾ.ಪಂಚಾಯ್ತುಗಳನ್ನು ಒಳಗೊಂಡ ತಾಲ್ಲೂಕಾಗಿದ್ದರೂ, ತಾಲ್ಲೂಕು ಪಂಚಾಯ್ತು ಕಾರ್ಯನಿರ್ವಹಣಾಧಿಕಾರಿಯವರು ಕಾರ್ಯಾಲಯದಲ್ಲಿ ಅಪರೂಪ ಎಂಬಂತೆ ಕಾಣಸಿಗುತ್ತಾರೆ. ಮಾಧ್ಯಮದವರು ಸಹ ಕಾರ್ಯನಿರ್ವಹಣಾಧಿಕಾರಿಯವರಲ್ಲಿ ಗೌರವಯುತವಾಗಿ ಮಾತನಾಡಿಸಿದಾಗಲೂ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಜಿಲ್ಲಾಧಿಕಾರಿಯವರ ಗಮನಕ್ಕೆ ತರಲಾಯ್ತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರು ಈ ಬಗ್ಗೆ ಅಗತ್ಯ ಕ್ರಮವನ್ನು ಕೈಗೊಳ್ಳುವುದಾಗಿ ತಿಳಿಸಿದರು.