ಭವ್ಯ ಭಾರತದಲ್ಲಿ ಜನ್ಮವೆತ್ತ ನಾವು ಭಾಗ್ಯವಂತರು : ಆರ್.ಪಿ.ನಾಯ್ಕ

ದಾಂಡೇಲಿ : ಜಗತ್ತಿನಲ್ಲೆ ವಿಶಾಲವಾದ ಗುಣವಂತಿಕೆ, ಸಂಸ್ಕೃತಿ, ಸಂಸ್ಕಾರ, ಆಚಾರ, ವಿಚಾರಗಳ ಮೂಲಕ ಗಮನ ಸೆಳೆದ ದೇಶ ಭಾರತ. ಇಂತಹ ಭವ್ಯ ದೇಶದಲ್ಲಿ ಜನ್ಮವೆತ್ತ ನಾವೆಲ್ಲರು ಭಾಗ್ಯವಂತರು ಎಂದು ಕರ್ನಾಟಕ ಕೊಂಕಣಿ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಆರ್.ಪಿ.ನಾಯ್ಕ ಅವರು ನುಡಿದರು.

ಅವರು ಕನ್ನಡ ಸಾಹಿತ್ಯ ಪರಿಷತ್ ದಾಂಡೇಲಿ ತಾಲೂಕು ಘಟಕದ ಆಶ್ರಯದಡಿ ಇಂದು ನಗರದ ಸಾಹಿತ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ನನ್ನ ದೇಶ ನನ್ನ ಹೆಮ್ಮ’ ಗೀತ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮಕ್ಕಳಲ್ಲಿ ದೇಶಾಭಿಮಾನ ಬಿತ್ತುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆಯೋಜಿರುವ ‘ನನ್ನ ದೇಶ ನನ್ನ ಹೆಮ್ಮೆ’ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಪತ್ರಕರ್ತ ಸಂದೇಶ್.ಎಸ್. ಜೈನ್ ಅವರು ಮರ ಗಿಡಗಳನ್ನು ಹಾಗೂ ನಿಸರ್ಗ ಸಂಪತ್ತನ್ನು ಆರಾಧಿಸಿ, ಪೂಜಿಸುವ ದೇಶ ನಮ್ಮದು. ಅಂತಹ ಘನ ಪರಂಪರೆಯಿರುವ ಈ ದೇಶದ ಪ್ರಕೃತಿ ಸಂಪತ್ತು ವಿಶ್ವದ ಯಾವುದೇ ರಾಷ್ಟ್ರದಲ್ಲಿ ಕಾಣಸಿಗದು. ಎಲ್ಲವನ್ನು ನೀಡಿದ ಈ ದೇಶದ ಋಣವನ್ನು ಬಲಿಷ್ಟ ರಾಷ್ಟ್ರ ನಿರ್ಮಾಣದ ಕಾಯಕದಲ್ಲಿ ತೊಡಗಿಕೊಂಡು ತೀರಿಸುವ ಕಾರ್ಯ ನಾವು ನೀವೆಲ್ಲರು ಮಾಡಬೇಕೆಂದು ಕರೆ ನೀಡಿದರು.

ಕಸಾಪ ಜಿಲ್ಲಾ ಕೋಶ್ಯಾಧ್ಯಕ್ಷ ಮುರ್ತುಜಾ ಹುಸೇನ್ ಆನೆಹೊಸೂರ ಮತ್ತು ಕಸಾಪ ತಾಲೂಕು ಘಟಕದ ಅಧ್ಯಕ್ಷ ನಾರಾಯಣ ನಾಯ್ಕ ಅವರು ಸಂದರ್ಭೋಚಿತವಾಗಿ ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎನ್ ವಾಸರೆಯವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ, ಸಾಮಾರಸ್ಯದ ಬದುಕಿನ ನಡೆಯ ಮೂಲಕ ವಿಶ್ವಕ್ಕೆ ಸೌಹಾರ್ದತೆಯ ಸಂದೇಶವನ್ನು ಸಾರಿದ ದೇಶವಿದ್ದರೇ ಅದು ಭಾರತ ಎಂದರು.

ಕಸಾಪ ತಾಲ್ಲೂಕು ಘಟಕದ ಪದಾಧಿಕಾರಿಗಳಾದ ಪ್ರವೀಣ್ ನಾಯ್ಕ ಸ್ವಾಗತಿಸಿದರು. ಶ್ರೀಮಂತ ಮದರಿ ವಂದಿಸಿದರು. ನಾಗೇಶ ನಾಯ್ಕ ನಿರೂಪಿಸಿದರು.