400 ಕೋಟಿ ರೂಪಾಯಿ ಕ್ಲಬ್ ಸೇರಿದ ‘ಜೈಲರ್’ ಸಿನಿಮಾ; ಕರ್ನಾಟಕದಲ್ಲಿ ಎಷ್ಟು ಗಳಿಕೆ?

ನಟ  ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾ  ಆಗಸ್ಟ್ 10ರಂದು ವಿಶ್ವಾದ್ಯಂತ ರಿಲೀಸ್ ಆಯಿತು. ಮಲ್ಟಿ ಸ್ಟಾರರ್ ಸಿನಿಮಾ ಎನ್ನುವ ಕಾರಣಕ್ಕೆ ಸಿನಿಮಾ ಮೇಲೆ ಹೆಚ್ಚು ನಿರೀಕ್ಷೆ ಇತ್ತು. ಹೀಗಾಗಿ, ಈ ಚಿತ್ರಕ್ಕೆ ಮೊದಲ ದಿನವೇ ಭರ್ಜರಿ ಸ್ವಾಗತ ಸಿಕ್ಕಿತು. ಬಾಕ್ಸ್ ಆಫೀಸ್​ನಲ್ಲಿ ಸಿನಿಮಾ ಮ್ಯಾಜಿಕ್ ಮಾಡಿದೆ. ಆರು ದಿನಕ್ಕೆ ಈ ಚಿತ್ರದ ಒಟ್ಟಾರೆ ಗಳಿಕ 400 ಕೋಟಿ ರೂಪಾಯಿ ಆಗಿದೆ. ವಿಶ್ವ ಮಟ್ಟದಲ್ಲಿ ಸಿನಿಮಾ ಸದ್ದು ಮಾಡುತ್ತಿದೆ. ರಜನಿಕಾಂತ್  ವೃತ್ತಿ ಜೀವನದಲ್ಲಿ ಈ ಚಿತ್ರ ಪ್ರಮುಖ ಎನಿಸಿಕೊಂಡಿದೆ. ಕರ್ನಾಟಕದಲ್ಲೂ ಸಿನಿಮಾಗೆ ಒಳ್ಳೆಯ ಗಳಿಕೆ ಆಗಿದೆ.

ರಜನಿಕಾಂತ್ ಅವರು ಸೂಪರ್ ಸ್ಟಾರ್ ಎಂದೇ ಫೇಮಸ್ ಆದವರು. ಅವರನ್ನು ಆರಾಧಿಸುವ ಅನೇಕರಿದ್ದಾರೆ. ಅವರ ನಟನೆಯ ‘ಜೈಲರ್’ ಟ್ರೇಲರ್ ನೋಡಿ ಜನರು ಮೆಚ್ಚಿಕೊಂಡಿದ್ದರು. ಸಿನಿಮಾ ಕೂಡ ನಿರೀಕ್ಷೆಯ ಮಟ್ಟವನ್ನೂ ಮೀರಿದ್ದರಿಂದ ಸಹಜವಾಗಿಯೇ ಉತ್ತಮ ಗಳಿಕೆ ಆಗುತ್ತಿದೆ. ಬೇರೆ ಬೇರೆ ಭಾಷೆಯ ಸ್ಟಾರ್​ಗಳು ನಟಿಸಿದ್ದು ಚಿತ್ರಕ್ಕೆ ಸಹಕಾರಿ ಆಗಿದೆ. ತಮನ್ನಾ ಹೆಜ್ಜೆ ಹಾಕಿದ ‘ಕಾವಾಲಾ..’ ಹಾಡು ಕೂಡ ಮೋಡಿ ಮಾಡಿದೆ. ಈ ಎಲ್ಲಾ  ಕಾರಣದಿಂದ ಸಿನಿಮಾದ ಗಳಿಕೆ ಆರು ದಿನಕ್ಕೆ 400 ಕೋಟಿ ರೂಪಾಯಿ ಆಗಿದೆ.

ಯಾವ ರಾಜ್ಯದಲ್ಲಿ ಎಷ್ಟೆಷ್ಟು ಗಳಿಕೆ?

ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದ ‘ಜೈಲರ್’ ಸಿನಿಮಾ ತಮಿಳುನಾಡಿನಲ್ಲಿ ಅಬ್ಬರಿಸಿದೆ. ಈ ಸಿನಿಮಾ ತಮಿಳುನಾಡಿನಲ್ಲಿ ಆರು ದಿನಕ್ಕೆ 134 ಕೋಟಿ ರೂಪಾಯಿ ಬಾಚಿಕೊಂಡಿದೆ. ಆಂಧ್ರ ಪ್ರದೇಶ-ನಿಜಾಮ್ ಭಾಗದಲ್ಲಿ ಸಿನಿಮಾಗೆ 49 ಕೋಟಿ ರೂಪಾಯಿ ಗಳಿಕೆ ಆಗಿದೆ. ಈ ಚಿತ್ರ ತೆಲುಗಿಗೂ ಡಬ್ ಆಗಿ ರಿಲೀಸ್ ಆಗಿದ್ದರಿಂದ ತೆಲುಗು ಭಾಗದ ಕಲೆಕ್ಷನ್ ಹೆಚ್ಚಲು ಸಹಕಾರಿ ಆಗಿದೆ. ತೆಲುಗಿನಲ್ಲಿ ರಿಲೀಸ್ ಆದ ‘ಭೋಲಾ ಶಂಕರ್’ ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದು ‘ಜೈಲರ್’ ಚಿತ್ರದ ಕಲೆಕ್ಷನ್ ಹೆಚ್ಚಲು ಪ್ರಮುಖ ಕಾರಣ.

ಕೇರಳದಲ್ಲಿ ಈ ಚಿತ್ರ 33 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಚಿತ್ರದಲ್ಲಿ ಮಲಯಾಳಂ ನಟರಾದ ಮೋಹನ್​ಲಾಲ್ ಹಾಗೂ ವಿನಾಯಕನ್ ಅಭಿನಯಿಸಿದ್ದಾರೆ. ವಿನಾಯಕನ್ ಅವರು ವಿಲನ್ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ. ಇನ್ನು ಕರ್ನಾಟಕದಲ್ಲಿ ಚಿತ್ರ ಅಬ್ಬರಿಸಿದೆ. ಈ ಸಿನಿಮಾ ನಮ್ಮ ರಾಜ್ಯದಲ್ಲಿ 44 ಕೋಟಿ ರೂಪಾಯಿ ಬಾಚಿಕೊಂಡಿದೆ. ಶಿವರಾಜ್​ಕುಮಾರ್ ಅವರ ಮಾಸ್ ಎಂಟ್ರಿಗೆ ಜನರು ಫಿದಾ ಆಗಿದ್ದಾರೆ. ಇದು ಕರ್ನಾಟಕದ ಕಲೆಕ್ಷನ್ ಹೆಚ್ಚಲು ಪ್ರಮುಖ ಕಾರಣ. ಉಳಿದ ರಾಜ್ಯಗಳಿಂದ ಚಿತ್ರಕ್ಕೆ 7 ಕೋಟಿ ರೂಪಾಯಿ ಸಿಕ್ಕಿದೆ.