ದುನಿಯಾ ವಿಜಯ್​ ನಟನೆಯ ‘ಭೀಮ’ ಸಿನಿಮಾ ರಿಲೀಸ್​ ಯಾವಾಗ? ತಂಡದಿಂದ ಸಿಕ್ಕಿದೆ ಸುಳಿವು

ನಟ ದುನಿಯಾ ವಿಜಯ್​  ಅವರು ನಿರ್ದೇಶಕನಾಗಿಯೂ ಯಶಸ್ಸು ಕಂಡಿದ್ದಾರೆ. ‘ಸಲಗ’ ಸಿನಿಮಾಗೆ ಮೊದಲ ಬಾರಿಗೆ ಆ್ಯಕ್ಷನ್​-ಕಟ್​ ಹೇಳಿದ ಅವರಿಗೆ ಭರ್ಜರಿ ಗೆಲುವು ಸಿಕ್ಕಿತು. ಆ ಬಳಿಕ ಅವರು ಟಾಲಿವುಡ್​ನ ‘ವೀರಸಿಂಹ ರೆಡ್ಡಿ’ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡರು. ಆ ನಂತರ ಮತ್ತೆ ನಿರ್ದೇಶನಕ್ಕೆ ಮರಳಿದರು. ಅವರ ನಿರ್ದೇಶನದಲ್ಲಿ ‘ಭೀಮ’ ಸಿನಿಮಾ ಮೂಡಿಬರುತ್ತಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಖತ್​ ನಿರೀಕ್ಷೆ ಇದೆ. ದೊಡ್ಡ ಪರದೆಯಲ್ಲಿ ಈ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಫ್ಯಾನ್ಸ್​ ಕಾದಿದ್ದಾರೆ. ಆದಷ್ಟು ಬೇಗ ಭೀಮ’ ರಿಲೀಸ್​ ಮಾಡಬೇಕು ಎಂಬುದು ವಿಜಯ್​ ಅವರ ಗುರಿ. ಅದಕ್ಕೆ ತಕ್ಕಂತೆಯೇ ಬಿರುಸಿನಿಂದ ಕೆಲಸಗಳು ಸಾಗುತ್ತಿವೆ.

ಟೈಟಲ್​ ಮೂಲಕ ಗಮನ ಸೆಳೆಯುತ್ತಿರುವ ‘ಭೀಮ’ ಚಿತ್ರದ ಕೆಲಸಗಳು ಈಗ ‌ಕೊನೆಯ ಹಂತವನ್ನು ತಲುಪಿವೆ. ಶೀಘ್ರದಲ್ಲೇ ಜನರಿಗೆ ಸಿನಿಮಾದ ಬಿಡುಗಡೆ ದಿನಾಂಕವನ್ನು ತಿಳಿಸಲು ಚಿತ್ರತಂಡ ನಿರ್ಧರಿಸಿದೆ. ಸದ್ಯದ ಪ್ಲ್ಯಾನ್​ ಪ್ರಕಾರ ನವೆಂಬರ್​ ತಿಂಗಳಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡಬೇಕು ಎಂಬುದು ತಂಡದ ಆಲೋಚನೆ. ಆ ತಿಂಗಳಲ್ಲಿ ದೀಪಾವಳಿ ಹಬ್ಬ ಇರುವುದರಿಂದ ಅದು ಬಿಡುಗಡೆಗೆ ಸೂಕ್ತ ಸಮಯ ಎನ್ನಲಾಗುತ್ತಿದೆ. ಇನ್ನೊಂದು ವಾರದಲ್ಲಿ ‘ಭೀಮ’ ಸಿನಿಮಾದ ರಿಲೀಸ್​ ಡೇಟ್​ ಅನೌನ್ಸ್​ ಆಗಲಿದೆ.

ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲು ‘ಭೀಮ’ ಬಳಗ ಸಿದ್ಧತೆ ಮಾಡಿಕೊಳ್ಳುತ್ತಿದೆ. ಬಿಡುಗಡೆ ದಿನಾಂಕವನ್ನು ತಿಳಿಸಿದ ಬಳಿಕ ಬಿರುಸಿನ ಪ್ರಚಾರ ಆರಂಭ ಆಗಲಿದೆ. ಕನ್ನಡ ಚಿತ್ರರಂಗಕ್ಕೆ ಈಗ ಉತ್ತಮ ಸಮಯ ಬಂದಿದೆ. ಈ ವರ್ಷ ಬಿಡುಗಡೆ ಆದ ‘ಡೇರ್​ಡೆವಿಲ್​ ಮುಸ್ತಫಾ’, ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’, ‘ಕೌಸಲ್ಯ ಸುಪ್ರಜಾ ರಾಮ’ ಮುಂತಾದ ಸಿನಿಮಾಗಳು ಜನಮೆಚ್ಚುಗೆ ಗಳಿಸಿವೆ. ‘ಭೀಮ’ ಕೂಡ ಭರ್ಜರಿ ಗೆಲುವು ಪಡೆಯುವ ನಿರೀಕ್ಷೆಯಲ್ಲಿದೆ. ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಈ ಚಿತ್ರ ಕೂಡ ಸ್ಥಾನ ಪಡೆದುಕೊಂಡಿದೆ.

‘ಭೀಮ’ ಸಿನಿಮಾದಲ್ಲಿನ ಪಾತ್ರವರ್ಗ ಕೂಡ ಗಮನ ಸೆಳೆಯುವಂತಿದೆ. ದುನಿಯಾ ವಿಜಯ್ ಜೊತೆ ಅಚ್ಯುತ್ ಕುಮಾರ್, ರಂಗಾಯಣ ರಘು, ಕಾಕ್ರೋಚ್ ಸುಧಿ, ಅಶ್ವಿನಿ, ಕಲ್ಯಾಣಿ ಹಾಗೂ ಪ್ರಿಯಾ ಶಠಮರ್ಷಣ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಗೌಡ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಶಿವಸೇನಾ ಅವರ ಛಾಯಾಗ್ರಹಣ, ಚರಣ್ ರಾಜ್ ಅವರ ಸಂಗೀತ ನಿರ್ದೇಶನ, ಮಾಸ್ತಿ ಅವರ ಸಂಭಾಷಣೆ, ದೀಪು ಎಸ್. ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿದೆ. ಈ ಆ್ಯಕ್ಷನ್​ ಸಿನಿಮಾಗೆ ಚೇತನ್ ಡಿಸೋಜಾ, ಗೌತಮ್, ವಿನೋದ್ ಅವರು ಸಾಹಸ ನಿರ್ದೇಶನ ಮಾಡಿದ್ದಾರೆ. ಧನು ಅವರು ಡ್ಯಾನ್ಸ್​ ಕೊರಿಯೋಗ್ರಫಿ ಮಾಡಿದ್ದಾರೆ.