ನಟಿ ರಶ್ಮಿಕಾ ಮಂದಣ್ಣ ಅವರ ಖ್ಯಾತಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇಡೀ ಸೌತ್ ಇಂಡಿಯಾದಲ್ಲಿ ಅವರದ್ದೇ ಹವಾ. ಅದರಲ್ಲೂ ತೆಲುಗು ಮತ್ತು ತಮಿಳಿನಲ್ಲಿ ಅವರಿಗೆ ಸಖತ್ ಬೇಡಿಕೆ ಸೃಷ್ಟಿ ಆಗಿದೆ. ಎಲ್ಲ ಟಾಪ್ ನಟರ ಸಿನಿಮಾಗಳಿಗೆ ಅವರು ನಾಯಕಿಯಾಗಿ ಆಯ್ಕೆ ಆಗುತ್ತಿದ್ದಾರೆ. ಅದಕ್ಕೆ ಲೇಟೆಸ್ಟ್ ಸೇರ್ಪಡೆ ‘ಡಿ51’ ಸಿನಿಮಾ.ಧನುಶ್ ನಟನೆಯ 51ನೇ ಸಿನಿಮಾವನ್ನು ‘ಡಿ 51’ ಎಂದು ಕರೆಯಲಾಗುತ್ತಿದೆ. ಈ ಚಿತ್ರದಲ್ಲಿನ ನಾಯಕಿ ಪಾತ್ರಕ್ಕೆ ರಶ್ಮಿಕಾ ಆಯ್ಕೆ ಆಗಿದ್ದಾರೆ. ಈ ಖುಷಿಯ ಸಮಾಚಾರವನ್ನು ಅವರು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಈ ಸುದ್ದಿ ಖುಷಿ ನೀಡಿದೆ. ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ‘ಡಿ 51’ ಸಿನಿಮಾದಲ್ಲಿ ಧನುಶ್ ಅವರು ಡಿಫರೆಂಟ್ ಗೆಟಪ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ರಶ್ಮಿಕಾ ಮಂದಣ್ಣ ಅವರು ಕನ್ನಡ ಚಿತ್ರರಂಗದಿಂದ ಬಣ್ಣದ ಲೋಕಕ್ಕೆ ಕಾಲಿಟ್ಟರು. ನಂತರ ಅವರಿಗೆ ತೆಲುಗಿನಿಂದ ಆಫರ್ ಬಂತು. ಬಳಿಕ ಕಾಲಿವುಡ್ ಕೂಡ ಕೈ ಬೀಸಿ ಕರೆಯಿತು. ಈ ಮೊದಲು ಕಾರ್ತಿ ನಟನೆಯ ‘ಸುಲ್ತಾನ್’, ದಳಪತಿ ವಿಜಯ್ ನಟನೆಯ ‘ವಾರಿಸು’ ಸಿನಿಮಾಗಳಿಗೆ ರಶ್ಮಿಕಾ ಮಂದಣ್ಣ ಅವರು ಹೀರೋಯಿನ್ ಆಗಿದ್ದರು. ಈಗ ‘ಡಿ 51’ ಮೂಲಕ ಅವರ ಖಾತೆಗೆ ಮತ್ತೊಂದು ತಮಿಳು ಸಿನಿಮಾ ಸೇರ್ಪಡೆ ಆದಂತಾಗಿದೆ.