ಪಶ್ಚಿಮ ಬಂಗಾಳ: ಗರ್ಭಿಣಿ ಆನೆಗೆ ಡಿಕ್ಕಿ ಹೊಡೆದ ಗೂಡ್ಸ್ ರೈಲು, ಗರ್ಭದಿಂದ ಹೊರಬಂದ ಭ್ರೂಣ

ಅಲಿಪುರ್ದೂರ್, : ರೈಲ್ವೆ ಅಪಘಾತಗಳಿಂದ ಆನೆಗಳನ್ನು ರಕ್ಷಣೆ ಮಾಡಲು ಮತ್ತು ಇಂತಹ ಘಟನೆಗಳನ್ನು ತಡೆಯಲು ಭಾರತೀಯ ರೈಲ್ವೇ ಇಲಾಖೆ ಕಠಿಣ ಕ್ರಮಗಳನ್ನು ತಂದಿದೆ. ಆದರೆ ಇಂದು (ಆ,10) ಮುಂಜಾನೆ ಪಶ್ಚಿಮ ಬಂಗಾಳದ  ಅಲಿಪುರ್ದೂರ್ ಜಿಲ್ಲೆಯ ಚಪ್ರಮರಿ ಮೀಸಲು ಅರಣ್ಯದಲ್ಲಿ ಗರ್ಭಿಣಿ ಆನೆಯೊಂದಕ್ಕೆ ಗೂಡ್ಸ್ ರೈಲು ಡಿಕ್ಕಿ ಹೊಡೆದ ಪರಿಣಾಮ ಆನೆ ಸ್ಥಳದಲ್ಲೇ ಸಾವನ್ನಪ್ಪಿದೆ.

ಬೆಳಿಗ್ಗೆ 3:00 ಗಂಟೆಗೆ ಈ ಘಟನೆ ನಡೆದಿದ್ದು, ರಾತ್ರಿ ವೇಳೆ ಡಾಲಮೈಟ್​​ನ್ನು ಹೊತ್ತೊಯ್ಯುತ್ತಿದ್ದ ಗೂಡ್ಸ್ ರೈಲು ಗರ್ಭಿಣಿ ಆನೆಗೆ ಡಿಕ್ಕಿ ಹೊಡೆದಿದೆ. ಆದರೆ ಭಾರತೀಯ ರೈಲ್ವೇ ಇಲಾಖೆಯ ನಿಯಮದ ಪ್ರಕಾರ ರಾತ್ರಿ ಹೊತ್ತು ಗೂಡ್ಸ್ ರೈಲುಗಳು ಓಡಾಡುವಂತಿಲ್ಲ. ಸರಕು ರೈಲುಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ, ಜತೆಗೆ ವೇಗದ ನಿರ್ಬಂಧಗಳೂ ಇವೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಾಜೇಂದ್ರ ಜಾಖರ್ ಸುದ್ದಿಗಾರರಿಗೆ ತಿಳಿಸಿದರು.

ರೈಲ್ವೆ ದಾಖಲೆ ಮೂಲಕ ರೈಲಿನ ವೇಗದ ಬಗ್ಗೆ ನೋಡಬಹುದು, ಆದರೆ ಇದರಿಂದ ಗರ್ಭಿಣಿ ಆನೆ ಸಾವನ್ನಪ್ಪಿರುವುದು ವಿಷಾದನೀಯ ಎಂದು ಹೇಳಿದ್ದಾರೆ. ರೈಲು ಡಿಕ್ಕಿ ಹೊಡೆದ ರಭಸಕ್ಕೆ, ಅನೆಯ ಹೊಟ್ಟೆಯಲ್ಲಿದ್ದ ಭ್ರೂಣವು ಸಂಪೂರ್ಣವಾಗಿ ಹೊರಬಂದಿದ್ದು, ಸಾವನ್ನಪ್ಪಿರುವ ಆನೆಯನ್ನು ಗೂಡ್ಸ್ ರೈಲು ಸ್ವಲ್ಪ ದೂರದವರೆಗೆ ಎಳೆದುಕೊಂಡು ಹೋಗಿದೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ರಾಜೇಂದ್ರ ಜಾಖರ್ ತಿಳಿಸಿದ್ದಾರೆ.

ಳೀಯರ ಪ್ರಕಾರ, ಗರ್ಭಿಣಿ ಆನೆಯೊಂದು ಚಪ್ರಮರಿ ಮೀಸಲು ಅರಣ್ಯದೊಳಗೆ ಹೋಗಲು ರೈಲು ಹಳಿ ದಾಟುತ್ತಿದ್ದಾಗ ಈ ಘಟನೆ ಸಂಭವಿಸಿದೆ, ಪ್ರತಿದಿನ ಈ ರೈಲು ಮಾರ್ಗದಲ್ಲೇ ಆನೆಗಳು ಹಾದುಹೋಗುತ್ತದೆ. ವರದಿಗಳ ಪ್ರಕಾರ ಇಂದು ಮುಂಜಾನೆ ಅಲಿಪುರ್‌ದೌರ್‌ನಿಂದ ಸಿಲಿಗುರಿಗೆ ಹೊರಟಿದ್ದ ಡಾಲಮೈಟ್ ತುಂಬಿದ ಗೂಡ್ಸ್ ರೈಲು ಗರ್ಭಿಣಿ ಆನೆಗೆ ಡಿಕ್ಕಿ ಹೊಡೆದು ಆನೆ ಸ್ಥಳದಲ್ಲಿ ಮೃತಪಟ್ಟಿದೆ ಎಂದು ಹೇಳಿದೆ.

ಘಟನೆ ನಡೆದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿದ್ದು. ಮರಣೋತ್ತರ ಪರೀಕ್ಷೆಯ ನಂತರ ತಾಯಿ ಮತ್ತು ಆನೆಯ ಭ್ರೂಣವನ್ನು ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ. ದೇಶದ ಆನೆಗಳ ಜನಸಂಖ್ಯೆಯ ಸುಮಾರು 2% ನಷ್ಟು ನೆಲೆಯಾಗಿರುವ ಪಶ್ಚಿಮ ಬಂಗಾಳದಲ್ಲಿ ಇಂತಹ ಘಟನೆಗಳು ಹೆಚ್ಚಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.