ದೆಹಲಿ 2019ರ “ಮೋದಿ ಉಪನಾಮ” ಮಾನನಷ್ಟ ಮೊಕದ್ದಮೆಯಲ್ಲಿರಾಹುಲ್ ಗಾಂಧಿ ವಿಧಿಸಲಾಗಿದ್ದ ಶಿಕ್ಷೆಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದ ನಂತರ ಕಾಂಗ್ರೆಸ್ ಸಂಸತ್ ಸ್ಥಾನವನ್ನು ಮರುಸ್ಥಾಪಿಸಿದ್ದು, ಇದೀಗ ದೆಹಲಿಯ ಸರ್ಕಾರಿ ಬಂಗಲೆಯನ್ನು ಅವರಿಗೆ ವಾಪಸ್ ನೀಡಲಾಗಿದೆ. ಲೋಕಸಭೆಯ ಸದನ ಸಮಿತಿಯು 12, ತುಘಲಕ್ ಲೇನ್‌ನಲ್ಲಿರುವ ರಾಹುಲ್ ಗಾಂಧಿ ಅವರ ಹಳೆಯ ಬಂಗಲೆಯನ್ನು ವಾಪಸ್ ನೀಡಿದೆ ಎಂದು ಎಂದು ಮೂಲಗಳು ತಿಳಿಸಿವೆ.ಏಪ್ರಿಲ್‌ನಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಸೂರತ್ ನ್ಯಾಯಾಲಯದ ಶಿಕ್ಷೆಯ ನಂತರ ಮಾರ್ಚ್‌ನಲ್ಲಿ ರಾಹುಲ್ ಗಾಂಧಿಯನ್ನು ಸಂಸತ್ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು. ಇದಾದ ನಂತರ ಪ್ರೊಟೋಕಾಲ್‌ಗೆ ಅನುಗುಣವಾಗಿ ರಾಹುಲ್ ಗಾಂಧಿ ತಮ್ಮ ಅಧಿಕೃತ ನಿವಾಸವನ್ನು ತೊರೆದಿದ್ದಾರೆ. ಅನರ್ಹಗೊಂಡ ಸಂಸದರು ಸರ್ಕಾರಿ ವಸತಿಗೆ ಅರ್ಹರಲ್ಲ. ಅಧಿಕೃತ ನಿವಾಸವನ್ನು ಖಾಲಿ ಮಾಡಲು ಅವರಿಗೆ ಒಂದು ತಿಂಗಳ ಕಾಲಾವಕಾಶ ನೀಡಲಾಗಿತ್ತು. ಹಾಗಾಗಿ 2005ರಿಂದ ಅವರು ತಂಗಿದ್ದ ಅಧಿಕೃತ ಬಂಗಲೆಯನ್ನು ಖಾಲಿ ಮಾಡುವಂತೆ ಲೋಕಸಭೆಯ ವಸತಿ ಸಮಿತಿ ಕೇಳಿಕೊಂಡಿತ್ತು.ತನ್ನ ಅಧಿಕೃತ ನಿವಾಸದಿಂದ ಹೊರಬಂದ ರಾಹುಲ್ ಗಾಂಧಿ, ಸತ್ಯವನ್ನು ಮಾತನಾಡಿದ್ದಕ್ಕಾಗಿ ಶಿಕ್ಷಿಸಲಾಗುತ್ತಿದೆ ಎಂದು ಹೇಳಿದ್ದು ಭಾರತದ ಜನರು ತನಗೆ ನೀಡಿದ ಬಂಗಲೆಯನ್ನು ಕಿತ್ತುಕೊಂಡಿದ್ದರಿಂದ ನಾನು ಇನ್ನು ಮುಂದೆ ಮನೆಯಲ್ಲಿ ವಾಸಿಸಲು ಬಯಸುವುದಿಲ್ಲ ಎಂದಿದ್ದರು.
ಮಂಗಳವಾರ ಸಂಸದರಾಗಿ ಅಧಿಕೃತ ನಿವಾಸವನ್ನು ಮರಳಿ ಪಡೆಯುವ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ, “ಮೇರಾ ಘರ್ ಪೂರಾ ಹಿಂದೂಸ್ತಾನ್ ಹೈ (ಇಡೀ ಭಾರತವೇ ನನ್ನ ಮನೆ)” ಎಂದು ರಾಹುಲ್ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.
2004ರಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ಅಮೇಠಿ ಕ್ಷೇತ್ರದಲ್ಲಿ ಗೆದ್ದ ನಂತರ ರಾಹುಲ್‌ಗೆ ಮೊದಲ ಬಾರಿಗೆ ಬಂಗಲೆ ಮಂಜೂರಾಗಿತ್ತು. 12 ತುಘಲಕ್ ಲೇನ್‌ನಲ್ಲಿರುವ ಬಂಗಲೆಯನ್ನು ಏಪ್ರಿಲ್ 22 ರೊಳಗೆ ಖಾಲಿ ಮಾಡುವಂತೆ ಲೋಕಸಭೆಯ ವಸತಿ ಸಮಿತಿಯು ರಾಹುಲ್ ಗಾಂಧಿಗೆ ನೋಟಿಸ್ ನೀಡಿತ್ತು. ಏಪ್ರಿಲ್‌ನಲ್ಲಿ ಲೋಕಸಭೆಯ ಸೆಕ್ರೆಟರಿಯೇಟ್‌ನಲ್ಲಿನ ಉಪ ಕಾರ್ಯದರ್ಶಿ ಮೋಹಿತ್ ರಾಜನ್‌ಗೆ ರಾಹುಲ್ ಪತ್ರ ಬರೆದು, “ಮಾರ್ಚ್ 27, 2023 ರಂದು 12, ತುಘಲಕ್ ಲೇನ್‌ನಲ್ಲಿರುವ ನನ್ನ ವಾಸ್ತವ್ಯವನ್ನು ರದ್ದುಗೊಳಿಸಿದ ಕುರಿತು ನಿಮ್ಮ ಪತ್ರಕ್ಕೆ ಧನ್ಯವಾದಗಳು” ಎಂದು ಹೇಳಿದ್ದರು.
ಪತ್ರದಲ್ಲಿ ರಾಹುಲ್ ಗಾಂಧಿ ನಾನು ಇಲ್ಲಿ ಕಳೆದ ಸಮಯದ ಸಂತೋಷದ ನೆನಪುಗಳಿವೆ, ನಾನು ಜನರ ಆದೇಶಕ್ಕೆ ಋಣಿಯಾಗಿರುವುದಾಗಿ ಹೇಳಿದ್ದಾರೆ. ನನ್ನ ಹಕ್ಕುಗಳಿಗೆ ಯಾವುದೇ ಪೂರ್ವಾಗ್ರಹವಿಲ್ಲದೆ, ನಾನು ಖಂಡಿತವಾಗಿಯೂ ನಿಮ್ಮ ಪತ್ರದಲ್ಲಿರುವ ವಿವರಗಳಿಗೆ ಬದ್ಧನಾಗಿರುತ್ತೇನೆ ಎಂದು ಹೇಳಿದ್ದರು.
ಶುಕ್ರವಾರ ಸುಪ್ರೀಂಕೋರ್ಟ್, ರಾಹುಲ್ ಗಾಂಧಿ ಅವರ ದೋಷಾರೋಪಣೆಗೆ ತಡೆಯಾಜ್ಞೆ ನೀಡಿದೆ. ಕಾಂಗ್ರೆಸ್ ನಾಯಕನ ಹೇಳಿಕೆಗಳು ಉತ್ತಮ ಅಭಿರುಚಿಯಿಲ್ಲದಿದ್ದರೂ, ಸಂಸತ್ತಿನಿಂದ ಅವರನ್ನು ಅನರ್ಹಗೊಳಿಸುವುದು ಅವರ ಮತದಾರರ ಮೇಲೆ ಪರಿಣಾಮ ಬೀರುತ್ತದೆ ಎಂದಿದೆ. ನ್ಯಾಯಾಲಯದ ಆದೇಶದ ನಂತರ, ವಯನಾಡ್ ಸಂಸದರು ಲೋಕಸಭೆಗೆ ಮರಳಿದ್ದಾರೆ. ಲೋಕಸಭೆಯಲ್ಲಿ ಮಣಿಪುರ ವಿಷಯ ಚರ್ಚೆಯಾಗಬೇಕು ಎಂದು ಆಗ್ರಹಿಸಿ ವಿಪಕ್ಷ ಒಕ್ಕೂಟಗಳು ಒತ್ತಾಯಿಸುತ್ತಿದ್ದು, ಪದೇ ಪದೇ ಕಲಾಪ ಮುಂದೂಡಲಾಗಿದೆ.
ಪ್ರಧಾನಿ ಮೋದಿಯವರ ಉಪನಾಮದ ಬಗ್ಗೆ ಮಾಡಿದ ಹೇಳಿಕೆಗಾಗಿ ಮಾನನಷ್ಟ ಮೊಕದ್ದಮೆಯಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದ ನಂತರ ಗಾಂಧಿಯನ್ನು ಮಾರ್ಚ್‌ನಲ್ಲಿ ಅನರ್ಹಗೊಳಿಸಲಾಯಿತು. 2019 ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಕರ್ನಾಟಕದ ಕೋಲಾರದಲ್ಲಿ ನಡೆದ ರ್ಯಾಲಿಯಲ್ಲಿ ರಾಹುಲ್ ಗಾಂಧಿ, ಎಲ್ಲ ಕಳ್ಳರ ಸರ್ ನೇಮ್ ಮೋದಿ ಎಂದೇ ಯಾಕಿದೆ ಎಂದು ಕೇಳಿದ್ದರು. ಹೀಗೆ ಹೇಳುವ ಮೂಲಕ ಮೋದಿ ಹೆಸರಿನವರನ್ನು ರಾಹುಲ್ ಅವಮಾನಿಸಿದ್ದಾರೆ ಎಂದು ಪೂರ್ಣೇಶ್ ಮೋದಿ ದೂರು ನೀಡಿದ್ದರು.