ಹೊಸಕೋಟೆ ಜಿಲ್ಲೆಯ ಹೊಸಕೋಟೆ ತಾಲೂಕು ಆಸ್ಪತ್ರೆಗೆ ಉಪ ಲೋಕಾಯುಕ್ತ ನ್ಯಾ.ಫಣೀಂದ್ರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಎಎಮ್‌ಒ ಕಚೇರಿಯಲ್ಲಿ 250 ರೂಪಾಯಿ ಪತ್ತೆಯಾಗಿದ್ದು, ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ.
ಆಸ್ಪತ್ರೆಯ ಎಎಮ್‌ಒ ಕಚೇರಿಯಲ್ಲಿ 250 ರೂಪಾಯಿ ನಗದು ಪತ್ತೆಯಾದ ಬಗ್ಗೆ ಫಣೀಂದ್ರ ಅವರು ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಹಣದ ಬಗ್ಗೆ ಗೊತ್ತಿಲ್ಲ ಎಂದು ಉತ್ತರಿಸಿದಾಗ ಗರಂ ಆದ ಫಣೀಂದ್ರ, ಸಿಬ್ಬಂದಿಗೆ ಗೊತ್ತಿಲ್ಲದೆ ಹಣ ಒಳಗಡೆ ಬಂತಾ ಎಂದು ಖಾರವಾಗಿ ಪ್ರಶ್ನಸಿದರು. ಅಲ್ಲದೆ, ನಗದು ಪತ್ತೆ ಬಗ್ಗೆ ಸೂಕ್ತ ತನಿಖೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ವೇಳೆ ಆಸ್ಪತ್ರೆಯಲ್ಲಿನ ರೋಗಿಗಳ ಆರೋಗ್ಯವನ್ನು ವಿಚಾರಿಸಿದರು. ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲವೂ ಉಚಿತವಾಗಿದ್ದು, ಔಷಧಿ ಇತ್ಯಾದಿಗಳನ್ನು ಇಲ್ಲಿಯೇ ಕೊಡುತ್ತಾರೆಯೇ? ಅಥವಾ ಹೊರಗಿನಿಂದ ತರಿಸುತ್ತಿದ್ದಾರೆಯೇ? ವೈದ್ಯರು, ಸಿಬ್ಬಂದಿ ಯಾವ ರೀತಿ ನೋಡಿಕೊಳ್ಳುತ್ತಿದ್ದಾರೆ? ಊಟ ತಿಂಡಿ ಕೊಡುತ್ತಿದ್ದಾರೆಯೇ? ವೈದ್ಯರು ಸರಿಯಾದ ಸಮಯಕ್ಕೆ ಬರುತ್ತಿದ್ದಾರೆಯೇ? ಸಿಬ್ಬಂದಿ ಹಣ ಕೇಳುತ್ತಾರಾ ಇತ್ಯಾದಿ ಬಗ್ಗೆ ರೋಗಿಗಳನ್ನು ಪ್ರಶ್ನಿಸಿದರು.
ರಾಜ್ಯದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಲೋಕಾಯುಕ್ತ ಪೊಲೀಸರು ಪಣತೊಟ್ಟಿದ್ದು, ಲಂಚ ಸ್ವೀಕರಿಸುವ ಅಧಿಕಾರಿಗಳನ್ನು ಬಂಧಿಸುತ್ತಿದ್ದಾರೆ. ಅಲ್ಲದೆ, ಸರ್ಕಾರಿ ಆಸ್ಪತ್ರೆ, ಸರ್ಕಾರಿ ಕಚೇರಿ ಇತ್ಯಾದಿ ಕಡೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯ 28 ವಿಧಾನಸಭಾ ಕ್ಷೇತ್ರಗಳಲ್ಲಿನ ಎಲ್ಲಾ ಕಂದಾಯ ಅಧಿಕಾರಿಗಳ ಕಚೇರಿಗಳಿಗೆ ಆಗಸ್ಟ್ 3 ರಂದು ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಇದಕ್ಕೂ ಮುನ್ನ ಕೋಲಾರ ನಗರದ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ ಹಾಗೂ ಪಾಲಿಕ್ಲಿನಿಕ್‌ಗಳಿಗೆ ಲೋಕಾಯುಕ್ತ ಎಸ್.ಪಿ. ಉಮೇಶ್ ಭೇಟಿ ನೀಡಿದ್ದರು. ಅಸ್ಪತ್ರೆಗಳಲ್ಲಿ ವೈದ್ಯರ ಮತ್ತು ಔಷಧಿಗಳ ಕೊರತೆಗೆ ಸಂಬಂಧಿಸಿ ದೂರುಗಳು ಬಂದ ಹಿನ್ನೆಲೆ ಭೇಟಿ ನೀಡಿದ್ದರು.