ಕುಮಟಾ : ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಚುನಾವಣಾ ಬೂತ್ ಲೆವೆಲ್ ಆಫೀಸರ್ (ಮತಗಟ್ಟೆ ಅಧಿಕಾರಿ) ಆಗಿ ನೇಮಿಸಿದ್ದು, ಇದರಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗುವ ಜೊತೆಗೆ ಶಿಕ್ಷಕರಿಗೂ ಮಾನಸಿಕ ಒತ್ತಡದ ಜೊತೆಗೆ ಕೆಲಸದ ಹೊರೆ ನಿಭಾಯಿಸುವುದು ಕಷ್ಟವಾಗುತ್ತದೆ. ಹೀಗಾಗಿ ಈ ಜವಾಬ್ದಾರಿಯಿಂದ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಶಿಕ್ಷಕರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಜೊತೆಗೆ ತಾಲೂಕಾ ಸೌಧಕ್ಕೆ ದೌಡಾಯಿಸಿ ಕುಮಟಾ ತಹಶಿಲ್ದಾರರಾದ ಎಸ್.ಎಸ್. ನಾಯ್ಕಲಮಠ ಅವರಿಗೆ ಮನವಿ ಸಲ್ಲಿಸಿದರು.
ಶಿಕ್ಷಣ ಇಲಾಖಾ ವ್ಯಾಪ್ತಿಯಲ್ಲಿ ಬರುವ ಪ್ರಾಥಮಿಕ ಶಾಲೆಗಳಲ್ಲಿ ಆಯಾ ತರಗತಿಗಳಲ್ಲಿ ನಿಗದಿಗೊಳಿಸಲಾಗಿರುವ ಪಠ್ಯವನ್ನು ಪೂರ್ಣಗೊಳಿಸಲು ಶಾಲಾ ಕೆಲಸದ ದಿನಗಳನ್ನು ಕನಿಷ್ಟ ೨೪೪ ದಿನಗಳೆಂದು ನಿಗದಿಪಡಿಸಲಾಗಿದೆ.
ಆದರೆ ಪ್ರಾಥಮಿಕ ಶಾಲಾ ಶಿಕ್ಷಕರುಗಳನ್ನು ಜನಗಣತಿ ಚುನಾವಣಾ ಕಾರ್ಯ, ಮಕ್ಕಳ ಗಣತಿ ಕಾರ್ಯಗಳಿಗೆ ನಿಯೋಜಿಸುವುದರಿಂದ ವಿದ್ಯಾರ್ಥಿಗಳ ಬೋಧನಾ ಕಲಿಕಾ ಪ್ರಕ್ರಿಯೆಗೆ ಕೇವಲ ೧೮೦ ದಿನಗಳು ಮಾತ್ರ ಸಿಗುತ್ತಿವೆ. ಇದರಿಂದ ಭೋಧನಾ ಕಾರ್ಯವು ಕುಂಠಿತವಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅಭಿವೃದ್ದಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಪ್ರಾಥಮಿಕ ಶಾಲೆಯ ೫ನೇ ತರಗತಿ ಹಾಗೂ ೮ನೇ ತರಗತಿಗೆ ರಾಜ್ಯಮಟ್ಟದಲ್ಲಿ ಪರೀಕ್ಷೆಗಳು ನಡೆಯುವುದರಿಂದ ಶಿಕ್ಷಕರು ಭೋಧನಾ ಕಾರ್ಯಕ್ಕೆ ಹೆಚ್ಚು ಒತ್ತು ಕೊಟ್ಟು ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಹೆಚ್ಚಾಗಿ ಸ್ಪಂದಿಸಿ ಉತ್ತಮ ಫಲಿತಾಂಶ ತರುವ ದೃಷ್ಟಿಯಿಂದ ಘನ ಸರ್ಕಾರವು ಹಲವು ಆದೇಶಗಳ ಮೂಲಕ ಶಿಕ್ಷಕರನ್ನು ಭೋಧಕೇತರ ಕೆಲಸಗಳಿಗೆ ನಿಯೋಜಿಸುವುದನ್ನು ನಿಷೇದಿಸಿರುತ್ತದೆ. ಶಿಕ್ಷಕರುಗಳನ್ನು ಬಿ.ಎಲ್.ಓ. ಕಾರ್ಯಕ್ಕೆ ನಿಯೋಜಿಸುವುದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತುಂಬಲಾರದ ನಷ್ಟ ಉಂಟಾಗಿ ಸಂವಿಧಾನಾತ್ಮಕ ಹಕ್ಕಿಗೆ ಧಕ್ಕೆ ತರುವಂತಾಗಿರುತ್ತದೆ.
ಕಾರಣ ಮಾನ್ಯ ಉಚ್ಛ ನ್ಯಾಯಾಲಯ ಹಾಗೂ ಸರ್ವೋಚ್ಛ ನ್ಯಾಯಾಲಯದಲ್ಲಿಯೂ ಶಿಕ್ಷಕರನ್ನು ಅನ್ಯ ಕಾರ್ಯಕ್ಕೆ ನಿಯೋಜಿಸದಂತೆ ಆದೇಶ ಮಾಡಿದ್ದು, ಈ ಸುತ್ತೋಲೆ ಹಾಗೂ ಇಲಾಖಾ ಆದೇಶ ಇವುಗಳನ್ನು ಪರಿಗಣಿಸಿ ಕುಮಟಾ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಭೋಧಕೇತರ (ಬಿ.ಎಲ್.ಓ.) ಕಾರ್ಯಕ್ಕೆ ನಿಯೋಜಿಸಿರುವುದನ್ನು ರದ್ದು ಪಡಿಸಿ ಬೋಧನಾ ಕಾರ್ಯಕ್ಕೆ ಹೆಚ್ಚು ಒತ್ತು ಕೊಡಲು ಶಿಕ್ಷಕರಿಗೆ ಅವಕಾಶ ಒದಗಿಸಿಕೊಡುವಂತೆ ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಮನವಿ ಸಲ್ಲಿಸಿ ಮಾತನಾಡಿದ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆನಂದು ಗಾವ್ಕರ್, ನಾವು ಈ ಹಿಂದಿನಿಂದಲೂ ಸರಕಾರದಿಂದ ಸೂಚಿತವಾದ ಎಲ್ಲ ವಿಧದ ಕಾರ್ಯವನ್ನು ಮಾಡಿಕೊಂಡು ಬಂದಿದ್ದೇವೆ, ರಜಾ ಅವಧಿಯಲ್ಲಿಯೂ ಚುನಾವಣಾ ಕಾರ್ಯಗಳು ಹಾಗೂ ಜನಗಣತಿ ಅಂತಹ ವಿವಿಧ ರೀತಿಯ ಕಾರ್ಯಗಳಲ್ಲಿ ತೊಡಗಿಕೊಂಡಿದ್ದೇವೆ. ಆದರೆ ಇದೀಗ ಶಾಲಾ ಚಟುವಟಿಕೆಗಳಿಗಿಂತ ಹೆಚ್ಚಾಗಿ ಇತರೆ ಕಾರ್ಯಗಳಿಗೆ ನಿಯೋಜನೆ ಆಗುತ್ತಿದ್ದು, ಇದರಿಂದ ಎರಡು ದೋಣಿಗಳ ಮೇಲೆ ನಾವು ಕಾಲಿಟ್ಟ ಅನುಭವವಾಗುತ್ತಿದೆ. ಹೀಗಾಗಿ ಶಾಲೆಯಲ್ಲಿ ನಮ್ಮನ್ನೇ ನಂಬಿರುವ ಮಕ್ಕಳ ಭವಿಷ್ಯ ಡೋಲಾಯಮಾನವಾಗುತ್ತದೆ. ಈಗಾಗಲೇ ಶಿಕ್ಷಕರ ಕೊರತೆ ಸಾಕಷ್ಟಿದ್ದು, ಇರುವ ಶಿಕ್ಷಕರಿಗೂ ಶೈಕ್ಷಣಿಕೇತರ ಕಾರ್ಯ ನೀಡಿದರೆ ತಡೆದುಕೊಳ್ಳಲಾರದಷ್ಟು ಹೊರೆಯಾಗುತ್ತದೆ. ಶಿಕ್ಷಕರನ್ನು ಹೊರತುಪಡಿಸಿ ಇಲಾಖೆಯ ಕ್ಲರ್ಕಗಳು ಹಾಗೂ ಇನ್ನಿತರ ಸಿಬ್ಬಂದಿಗಳನ್ನು ಬಳಸಿಕೊಳ್ಳುವಂತೆ ಅವರು ಆಗ್ರಹಿಸಿದರು.
ಕುಮಟಾ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ರವೀಂದ್ರ ಭಟ್ಟ ಸೂರಿ ಮಾತನಾಡಿ ಶಿಕ್ಷಕರನ್ನು ಬೋಧಕೇತರ ಕಾರ್ಯಗಳಿಗೆ ಬಳಸಿಕೊಳ್ಳಬಾರದು ಎಂದು ಸುಪ್ರೀಂ ಕೋರ್ಟ ಹಾಗೂ ಹೈ ಕೋರ್ಟಗಳ ಆದೇಶ, ಕರ್ನಾಟಕ ಸರ್ಕಾರ ಹಾಗೂ ಶಿಕ್ಷಣ ಇಲಾಖೆಯ ನಿರ್ದೇಶನ ಇದ್ದರೂ ಕೂಡಾ ಶಿಕ್ಷಕರನ್ನು ಬೋಧಕೇತರ ಕಾರ್ಯಗಳಿಗೆ ಬಳಸಿಕೊಳ್ಳುತ್ತಿರುವುದರಿಂದ ಶಾಲಾ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗಿ, ಗುಣಮಟ್ಟದ ಶಿಕ್ಷಣ ನೀಡುವುದು ಕಷ್ಟವಾಗುತ್ತಿದೆ. ಶಿಕ್ಷಕರು ಬೋಧಕೇತರ ಕಾರ್ಯಗಳ ಜೊತೆಗೆ ಶೈಕ್ಷಣಿಕ ಕಾರ್ಯಗಳನ್ನು ನಿರ್ವಹಿಸುವುದು ಕಷ್ಟಸಾಧ್ಯವಾಗಿದೆ. ಆದ್ದರಿಂದ ಶಿಕ್ಷಕರನ್ನು ಬೋಧಕೇತರ ಕಾರ್ಯಗಳಿಂದ ಬಿಡುಗಡೆಗೊಳಿಸಿ ಸಂಪೂರ್ಣವಾಗಿ ಶಾಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡಲು ವಿನಂತಿಸುತ್ತೇವೆ ಎಂದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ನಾಯ್ಕಲಮಠ ಅವರು ಶಿಕ್ಷಕರ ಸಮಸ್ಯೆಗಳ ಬಗ್ಗೆ ಮನವಿ ನೀಡಿ ಗಮನ ಸೆಳೆದಿದ್ದಾರೆ. ಮನವಿ ಈ ಹಿಂದಿನಿಂದಲೂ ನಮ್ಮ ಇಲಾಖೆಗೆ ಎಲ್ಲ ವಿಧದಲ್ಲಿ ಸಹಕಾರ ನೀಡುತ್ತಿರುವ ಶಿಕ್ಷಕರ ಕಾರ್ಯ ಮೆಚ್ಚುವಂಥದ್ದು. ಈ ಮನವಿಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಅನಿಲ್ ಭಂಡಾರಿ, ಉಪಾಧ್ಯಕ್ಷೆ ಶೈಲಾ ಮಡಿವಾಳ, ಸದಸ್ಯರಾದ ವಿಷ್ಣು ನಾಯ್ಕ, ನೌಕರರ ಸಂಘದ ಗುರುದಾಸ ಮಹಾಲೆ ಹಾಗೂ ಬಿ.ಎಲ್.ಓ ಕಾರ್ಯಕ್ಕೆ ನಿಯೋಜನೆಗೊಂಡ ನೂರಾರು ಶಿಕ್ಷಕ, ಶಿಕ್ಷಕಿಯರು ಹಾಜರಿದ್ದರು.