ನಟ ಪವನ್ ಕಲ್ಯಾಣ್ ತೆಲುಗು ಚಿತ್ರರಂಗದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಅಗ್ರಗಣ್ಯರು. ಪವನ್ ರೀತಿಯಲ್ಲಿಯೇ ಅವರ ಅಭಿಮಾನಿಗಳು ಸಹ ತುಸು ಕ್ರೇಜಿ. ಪವನ್ ಕಲ್ಯಾಣ್ ರಾಜಕೀಯಕ್ಕೆ ಬಂದ ಬಳಿಕವಂತೂ ಪವನ್ರ ಅಭಿಮಾನಿಗಳು ಮನೊರಂಜನೆ ಹಾಗೂ ರಾಜಕೀಯ ಎರಡೂ ಕ್ಷೇತ್ರಗಳಲ್ಲಿ ಮೆಚ್ಚಿನ ನಟನನ್ನು ಬೆಂಬಲಿಸುತ್ತಿದ್ದಾರೆ. ಇದೀಗ ಪವನ್ ಕಲ್ಯಾಣ್ರ ‘ಬ್ರೋ‘ ಸಿನಿಮಾ ಬಿಡುಗಡೆ ಆಗಿದ್ದು, ಯಥಾವತ್ತು ಪವನ್ರ ಅಭಿಮಾನಿಗಳು ಚಿತ್ರಮಂದಿರದಲ್ಲಿ ಹುಚ್ಚು ಅಭಿಮಾನ ಪ್ರದರ್ಶಿಸಿ ಈಗ ಪೊಲೀಸರ ಅತಿಥಿಯಾಗಿದ್ದಾರೆ.
ಆಂಧ್ರ ಪ್ರದೇಶದ ಪಾರ್ವತಿಪುರಂನ ಸಂಧ್ಯಾ ಚಿತ್ರಮಂದಿರದಲ್ಲಿ ಪವನ್ ಕಲ್ಯಾಣ್ರ ಅಭಿಮಾನಿಗಳು ‘ಬ್ರೋ’ ಸಿನಿಮಾ ಪ್ರದರ್ಶನದ ವೇಳೆ ಸಿನಿಮಾದ ಸ್ಕ್ರೀನ್ಗೆ ಹಾಲಿನ ಅಭಿಷೇಕ ಮಾಡಿ ಸ್ಕ್ರೀನ್ ಅನ್ನು ಹಾಳುಗೆಡವಿದ್ದಾರೆ. ಚಿತ್ರಮಂದಿರದ ಸ್ಕ್ರೀನ್ ಅನ್ನು ಹಾಳು ಮಾಡಿದ ಕಾರಣ ಚಿತ್ರಮಂದಿರದ ಮಾಲೀಕ ಪೊಲೀಸರಿಗೆ ದೂರು ನೀಡಿದ್ದು, ಪವನ್ ಕಲ್ಯಾಣ್ರ ಕೆಲವು ಕಿಡಿಗೇಡಿ ಅಭಿಮಾನಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪವನ್ ಕಲ್ಯಾಣ್ ಅಭಿಮಾನಿಗಳಿಂದ ಚಿತ್ರಮಂದಿರಗಳಿಗೆ ಹಾನಿ ಆಗುತ್ತಿರುವುದು ಇದು ಮೊದಲೇನೂ ಅಲ್ಲ. ವರ್ಷದ ಹಿಂದೆ ಪವನ್ರ ಕಮ್ಬ್ಯಾಕ್ ಸಿನಿಮಾ ‘ವಕೀಲ್ ಸಾಬ್’ ಬಿಡುಗಡೆ ಆದಾಗಲೂ ಆಂಧ್ರ ಹಾಗೂ ತೆಲಂಗಾಣದಲ್ಲಿ ಪವನ್ ಅಭಿಮಾನಿಗಳು ಅಬ್ಬರ ಎಬ್ಬಿಸಿದ್ದರು. ಆಂಧ್ರದಲ್ಲಿ ಸಿನಿಮಾದ ಬಿಡುಗಡೆಗೆ ಸರ್ಕಾರ ಸಮಸ್ಯೆಗಳನ್ನು ಮಾಡಿದಾಗಲಂತೂ ಹಲವು ಚಿತ್ರಮಂದಿರಗಳನ್ನು ಪವನ್ ಅಭಿಮಾನಿಗಳು ಜಖಂ ಮಾಡಿದ್ದರು.
ಕೆಲವು ದಿನಗಳ ಹಿಂದೆ ಪವನ್ರ ಸೂಪರ್ ಹಿಟ್ ಸಿನಿಮಾ ‘ಖುಷಿ’ ಮರು ಬಿಡುಗಡೆ ಆದಾಗಲೂ ಸಹ ಹಲವು ಚಿತ್ರಮಂದಿರಗಳಲ್ಲಿ ಪವನ್ ಅಭಿಮಾನಿಗಳು ದಾಂಧಲೆ ಮಾಡಿದ್ದರು. ಚಿತ್ರಮಂದಿರದಲ್ಲಿ ಬೆಂಕಿ ಹಚ್ಚಿ, ಸೀಟುಗಳನ್ನು ಕಿತ್ತು, ಸ್ಕ್ರೀನ್ಗೆ ಹಾಲಿನ ಅಭಿಷೇಕಗಳನ್ನು ಮಾಡಿದ್ದರು. ಆ ಸಮಯದಲ್ಲಿ ಸಹ ಚಿರಾಲದ ಶಾಂತಿ ಚಿತ್ರಮಂದಿರದಲ್ಲಿ ಪವನ್ ಕಲ್ಯಾಣ್ರ ಎಂಟು ಮಂದಿ ಅಭಿಮಾನಿಗಳನ್ನು ಪೊಲೀಸರು ಬಂಧಿಸಿದ್ದರು.
ಪವನ್ ಕಲ್ಯಾಣ್ಗೆ ಆಂಧ್ರ ಹಾಗೂ ತೆಲಂಗಾಣದಲ್ಲಿ ಭಾರಿ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅವರ ಸಿನಿಮಾ ಬಿಡುಗಡೆ ಆದಾಗಲೆಲ್ಲ ಅಭಿಮಾನಿಗಳು ಹೀಗೆ ದಾಂಧಲೆ ಮಾಡುವುದು ಸಾಮಾನ್ಯ ಎನ್ನುವಂತಾಗಿದೆ. ಇದೀಗ ಪವನ್ ಕಲ್ಯಾಣ್ರ ‘ಬ್ರೋ’ ಸಿನಿಮಾ ಬಿಡುಗಡೆ ಆಗಿದೆ. ಬಿಡುಗಡೆ ಆದ ಮೊದಲ ದಿನವೇ ಸುಮಾರು 37 ಕೋಟಿ ರೂಪಾಯಿಗಳನ್ನು ‘ಬ್ರೋ’ ಸಿನಿಮಾ ಬಾಚಿಕೊಂಡಿದೆ. ಆದಷ್ಟು ಬೇಗ 100 ಕೋಟಿ ಹಣವನ್ನು ಈ ಸಿನಿಮಾ ಬಾಚುವ ನಿರೀಕ್ಷೆ ಇದೆ.
‘ಬ್ರೋ’ ಸಿನಿಮಾದಲ್ಲಿ ಪವನ್ ಕಲ್ಯಾಣ್ ಹಾಗೂ ಸಾಯಿ ಧರಮ್ ತೇಜ್ ಒಟ್ಟಿಗೆ ನಟಿಸಿದ್ದಾರೆ. ಸಿನಿಮಾವು ತಮಿಳು ಸಿನಿಮಾದ ರೀಮೇಕ್ ಆಗಿದೆ. ಮೂಲ ಸಿನಿಮಾವನ್ನು ನಿರ್ದೇಶಿಸಿದ್ದ ಸಮುದ್ರಕಿಣಿ ಈ ಸಿನಿಮಾವನ್ನೂ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆಯಾದರೂ ಸಹ ಬಾಕ್ಸ್ ಆಫೀಸ್ನಲ್ಲಿ ಸಿನಿಮಾ ಯಶಸ್ವಿಯಾಗುತ್ತಿದೆ.