ಈ ವಾರ ಒಟಿಟಿಗೆ ಲಗ್ಗೆ ಇಡಲಿವೆ ಭರ್ಜರಿ ಸಿನಿಮಾಗಳು: ಇಲ್ಲಿದೆ ಪಟ್ಟಿ

ಚಿತ್ರಮಂದಿರಗಳಲ್ಲಿ ಕನ್ನಡದ ಸಿನಿಮಾಗಳು ಅಬ್ಬರಿಸುತ್ತಿವೆ. ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’, ‘ಕೌಸಲ್ಯ ಸುಪ್ರಜಾ ರಾಮ’, ‘ಆಚಾರ್ ಆಂಡ್ ಕೋ’ ಸಿನಿಮಾಗಳು ದೊಡ್ಡ ಸೂಪರ್ ಸ್ಟಾರ್​ಗಳಿಲ್ಲದೆಯೂ ಕೇವಲ ಕಂಟೆಂಟ್​ನಿಂದ ಗಮನ ಸೆಳೆಯುತ್ತಿವೆ ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರಕ್ಕೆ ಸೆಳೆಯುತ್ತಿವೆ. ಕನ್ನಡ ಸಿನಿಮಾಗಳ ಮುಂದೆ ಪರಭಾಷೆ ಸಿನಿಮಾಗಳು ಮಂಕಾಗಿವೆ. ಆದರೆ ಇದರ ನಡುವೆ ಕೆಲವು ಒಳ್ಳೆಯ ಪರಭಾಷೆ ಸಿನಿಮಾಗಳು ಒಟಿಟಿಗೆ ಲಗ್ಗೆ ಇಟ್ಟಿವೆ. ಅದರಲ್ಲಿ ಮುಖ್ಯವಾದ ಕೆಲವು ಸಿನಿಮಾ ಹಾಗೂ ವೆಬ್ ಸರಣಿಗಳ ಪಟ್ಟಿ ಇಲ್ಲಿದೆ.

ಒಂದು ತಿಂಗಳ ಹಿಂದೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ‘ಮಾಮನ್ನನ್’ ಸಿನಿಮಾ ಇದೀಗ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆಗಿದೆ. ಉದಯ್​ನಿಧಿ ಸ್ಟಾಲಿನ್, ವಡಿವೇಲು ನಟನೆಯ ಈ ಸಿನಿಮಾ ಬಗ್ಗೆ ಬಹಳ ಒಳ್ಳೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಸಿನಿಮಾವನ್ನು ಮಾರಿ ಸೆಲ್ವರಾಜ್ ಈ ಸಿನಿಮಾವನ್ನು ನಿರ್ದೇಶಿಸಿದ್ದು, ಜಾತಿ ವಿಷಯ ಆಧರಿಸಿದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾವನ್ನು ನೆಟ್​ಫ್ಲಿಕ್ಸ್​ನಲ್ಲಿ ನೋಡಬಹುದಾಗಿದೆ.

ಇತ್ತೀಚೆಗಷ್ಟೆ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಫ್ಲಾಪ್ ಆಗಿದ್ದ ನಿಖಿಲ್ ಸಿದ್ಧಾರ್ಥ್ ನಟನೆಯ ‘ಸ್ಪೈ’ ಸಿನಿಮಾ ಇದೀಗ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಕಂಡಿದೆ. ಸುಭಾಷ್ ಚಂದ್ರ ಭೋಸ್ ಸಾವಿನ ರಹಸ್ಯ ಬೆನ್ನತ್ತುವ ಗೂಢಚಾರಿಯೊಬ್ಬನ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾ ಬಗ್ಗೆ ಉತ್ತಮ ಪ್ರತಿಕ್ರಿಯೆಗಳು ಬಿಡುಗಡೆ ಸಮಯದಲ್ಲಿ ವ್ಯಕ್ತವಾಗಲಿಲ್ಲ.

ತಮಿಳಿನ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ‘ಪೋರ್ ತೊಳಿಲ್’ ಆಗಸ್ಟ್ 4 ರಂದು ಸೋನಿ ಲಿವ್​ನಲ್ಲಿ ಬಿಡುಗಡೆ ಆಗಲಿದೆ. ಸೈಕೋ ಕೊಲೆಗಾರನೊಬ್ಬನ ಬೆನ್ನು ಹತ್ತುವ ಇಬ್ಬರು ಪೊಲೀಸರ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಜೂನ್ 9 ರಂದು ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಸಿನಿಮಾದ ಬಗ್ಗೆ ಬಹಳ ಒಳ್ಳೆಯ ವಿಮರ್ಶೆಗಳು ಕೇಳಿ ಬಂದಿದ್ದವು. ಇದೀಗ ಸಿನಿಮಾ ಆಗಸ್ಟ್ 4ರಂದು ಸೋನಿ ಲಿವ್​ನಲ್ಲಿ ಬಿಡುಗಡೆ ಆಗುತ್ತಿದೆ.

ನಟ ನರೇಶ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಕಾಮಿಡಿ, ಕೌಟುಂಬಿಕ ಸಿನಿಮಾ ‘ಮಾಯಾಬಜಾರ್’ ಕೆಲವು ದಿನಗಳ ಹಿಂದಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಉತ್ತಮ ವಿಮರ್ಶೆ ಗಳಿಸಿತ್ತು. ನರೇಶ್ ನಟನೆಗೆ ಮೆಚ್ಚುಗೆ ವ್ಯಕ್ತವಾಗುವ ಜೊತೆಗೆ ಇತ್ತೀಚಿನ ದಿನಗಳಲ್ಲಿ ಬಿಡುಗಡೆ ಆದ ಉತ್ತಮ ಕಾಮಿಡಿ ಹಾಗೂ ಕೌಟುಂಬಿಕ ಸಿನಿಮಾ ಎಂಬ ಖ್ಯಾತಿಗೆ ಮಾಯಾಬಜಾರ್ ಪಾತ್ರವಾಗಿತ್ತು. ಇದೀಗ ಈ ಸಿನಿಮಾ ಜೀ5 ಬಿಡುಗಡೆ ಆಗಿದೆ. ಈ ವಾರದಿಂದ ವೀಕ್ಷಣೆಗೆ ಸಿನಿಮಾ ಲಭ್ಯವಿದೆ.

ನಟಿ ತಮನ್ನಾರ ಬಾಯ್​ಫ್ರೆಂಡ್ ವಿಜಯ್ ವರ್ಮಾ ಅಪರೂಪಕ್ಕೆ ನಾಯಕನ ಪಾತ್ರದಲ್ಲಿ ನಟಿಸಿರುವ ‘ಕಾಲಕೂಟ್’ ವೆಬ್ ಸರಣಿ ಇದೇ ವಾರ ಒಟಿಟಿಯಲ್ಲಿ ಬಿಡುಗಡೆ ಆಗಿದೆ. ಜಿಯೋ ಸಿನಿಮಾಸ್​ನಲ್ಲಿ ‘ಕಾಲಕೂಟ್’ ವೆಬ್ ಸರಣಿಯನ್ನು ಉಚಿತವಾಗಿ ನೋಡಬಹುದಾಗಿದೆ. ಉದ್ಯೋಗದಿಂದ ಬೇಸತ್ತ ಇನ್​ಸ್ಪೆಕ್ಟರ್ ಒಬ್ಬನ ಬಳಿ ಒಂದು ಆಸಿಡ್ ದಾಳಿಯ ಪ್ರಕರಣ ಬರುತ್ತದೆ ಅದು ಆತನನ್ನು ಮತ್ತೆ ಉದ್ಯೋಗವನ್ನು ಮಾಡುವಂತೆ ಮಾಡುತ್ತದೆ. ಥ್ರಿಲ್ಲರ್ ಕತೆಯನ್ನು ಈ ವೆಬ್ ಸರಣಿ ಒಳಗೊಂಡಿದೆ.