T20 World Cup Asia ಏಷ್ಯಾ ಕ್ವಾಲಿಫೈಯರ್-B ವಿಭಾಗದಲ್ಲಿ ನಡೆದ 5ನೇ ಪಂದ್ಯದಲ್ಲಿ ಥೈಲ್ಯಾಂಡ್ ತಂಡವು ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಮ್ಯಾನ್ಮಾರ್ ತಂಡವು ಮೊದಲು ಬೌಲಿಂಗ್ ಮಾಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಥೈಲ್ಯಾಂಡ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. 36 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಥೈಲ್ಯಾಂಡ್ ತಂಡಕ್ಕೆ ಈ ಹಂತದಲ್ಲಿ ಜೆ ಕೋಟ್ಜಿ ಹಾಗೂ ರಾಬರ್ಟ್ ರೈನಾ ಆಸರೆಯಾದರು.
29 ಎಸೆತಗಳನ್ನು ಎದುರಿಸಿದ ಜೆ ಕೋಟ್ಜಿ 1 ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ 40 ರನ್ ಬಾರಿಸಿದರೆ, ರಾಬರ್ಟ್ ರೈನಾ 30 ಎಸೆತಗಳಲ್ಲಿ 7 ಫೋರ್ಗಳೊಂದಿಗೆ 42 ರನ್ ಕಲೆಹಾಕಿದರು. ಈ ಮೂಲಕ ಥೈಲ್ಯಾಂಡ್ ತಂಡವು ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 140 ರನ್ ಕಲೆಹಾಕಿತು.
141 ರನ್ಗಳ ಸುಲಭ ಗುರಿ ಬೆನ್ನತ್ತಿದ ಮ್ಯಾನ್ಮಾರ್ ತಂಡವು ಖಾತೆ ತೆರೆಯುವ ಮುನ್ನವೇ ಮೊದಲ ವಿಕೆಟ್ ಕಳೆದುಕೊಂಡಿತು. ಅಲ್ಲದೆ ನಾಲ್ಕನೇ ಓವರ್ನಲ್ಲಿ ಕೇವಲ 8 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಅತ್ತ ರನ್ಗಳಿಸಲು ಪರದಾಡಿದ ಮ್ಯಾನ್ಮಾರ್ ಬ್ಯಾಟರ್ಗಳು ಒಂದಷ್ಟು ಹೊತ್ತು ಕ್ರೀಸ್ ಕಚ್ಚಿ ನಿಲ್ಲುವ ಪ್ರಯತ್ನ ಮಾಡಿದರು.
ಅದರಂತೆ 10 ಓವರ್ಗಳನ್ನು ಎದುರಿಸಿದ ಮ್ಯಾನ್ಮಾರ್ ತಂಡವು 26 ರನ್ಗಳಿಸಿತು. ಆದರೆ ಅದಾಗಲೇ 6 ವಿಕೆಟ್ಗಳನ್ನು ಕಳೆದುಕೊಂಡಿದ್ದರು. ಅಂತಿಮವಾಗಿ 16 ಓವರ್ಗಳಲ್ಲಿ ಮ್ಯಾನ್ಮಾರ್ ತಂಡವನ್ನು 39 ರನ್ಗಳಿಗೆ ಆಲೌಟ್ ಮಾಡುವಲ್ಲಿ ಥೈಲ್ಯಾಂಡ್ ಬೌಲರ್ಗಳು ಯಶಸ್ವಿಯಾದರು.
ಅಚ್ಚರಿ ಎಂದರೆ ಇಲ್ಲಿ ಮ್ಯಾನ್ಮಾರ್ ಬ್ಯಾಟರ್ಗಳು ಕಲೆಹಾಕಿದ್ದು ಕೇವಲ 29 ರನ್ಗಳು ಮಾತ್ರ. ಇನ್ನುಳಿದ 10 ರನ್ಗಳನ್ನು ಥೈಲ್ಯಾಂಡ್ ಬೌಲರ್ಗಳು ಅತಿರಿಕ್ತವಾಗಿ ನೀಡಿದ್ದರು. ಇನ್ನು ಈ ಪಂದ್ಯದಲ್ಲಿ ಮ್ಯಾನ್ಮಾರ್ನ ಐವರು ಬ್ಯಾಟರ್ಗಳು ಸೊನ್ನೆ ಸುತ್ತಿದ್ದರು. ಈ ಮೂಲಕ ಅತ್ಯುತ್ತಮ ದಾಳಿ ಸಂಘಟಿಸಿದ ಥೈಲ್ಯಾಂಡ್ ತಂಡವು 101 ರನ್ಗಳ ಭರ್ಜರಿ ಜಯ ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.