ಗೃಹಸಚಿವರು ಕೂಡಲೇ ರಾಜಿನಾಮೆ ನೀಡಬೇಕು: ಎಬಿವಿಪಿ ಬಿಗಿ ಪಟ್ಟು

ಬೆಂಗಳೂರು: ಮಂಗಳೂರು ಸರಣಿ ಹತ್ಯೆ ಹಿನ್ನೆಲೆ ಎಸ್‌ಡಿಪಿಐ ಹಾಗೂ ಪಿಎಫ್‌ಐ ಸಂಘಟನೆಗಳನ್ನು ನಿಷೇಧಿಸಬೇಕು. ಜೊತೆಗೆ ಈ ಘಟನೆಯನ್ನು ಅಸಮರ್ಥವಾಗಿ ನಿರ್ವಹಿಸಿದ ಗೃಹ ಸಚಿವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ಗೃಹ ಸಚಿವ ಆರಗ ಜ್ಞಾನೇಂದ್ರ ಮನೆ ಎದುರು ಪ್ರತಿಭಟನೆ ನಡೆಸಿದ್ದಾರೆ.

ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಎಬಿವಿಪಿ ಕಾರ್ಯಕರ್ತರು ಜಯಮಹಲ್‌ನ ಗೃಹ ಸಚಿವರ ಮನೆಯ ಪ್ರವೇಶ ದ್ವಾರದಲ್ಲಿ ಪ್ರತಿಭಟನೆ ಪ್ರಾರಂಭಿಸಿದರು. ನಂತರ ಗೇಟ್ ತಳ್ಳಿ ಒಳನುಗ್ಗಿ ಮನೆಯ ಬಾಗಿಲ ಬಳಿ ಕುಳಿತು ಗೃಹ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

ಈ ವೇಳೆ ಕಾರ್ಯಕರ್ತರನ್ನು ಮನೆಯಿಂದ ಹೊರಗೆ ಕಳುಹಿಸಲು ಪೊಲೀಸರು ಮುಂದಾದಾಗ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ಉಂಟಾಯಿತು. ಪರಿಸ್ಥಿತಿ ಕೈಮೀರುತ್ತಿದ್ದಂತೆ ಲಘು ಲಾಠಿ ಪ್ರಹಾರ ನಡೆಸಿದ ಪೊಲೀಸರು ಕಾರ್ಯಕರ್ತರನ್ನು ಸ್ಥಳದಿಂದ ಚದುರಿಸಿದ್ದಾರೆ. ಈ ಸಂದರ್ಭದಲ್ಲಿ 10ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ಸದ್ಯ ಗೃಹ ಸಚಿವರ ಮನೆ ಬಳಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.