ಗೂಗಲ್ ನ್ಯೂಸ್ ಡೈರೆಕ್ಟರ್, ಕನ್ನಡಿಗ ಮಾಧವ್ ಚಿನ್ನಪ್ಪ ಲೇ ಆಫ್; ತಾಯಿ ಜೊತೆ ಇರಲು ಅವರು ಭಾರತಕ್ಕೆ ವಾಪಸ್

ಲಂಡನ್, ಜುಲೈ 26: ಗೂಗಲ್ ನ್ಯೂಸ್ ವಿಭಾಗದ ನಿರ್ದೇಶಕರಾದ ಮಾಧವ್ ಚಿನ್ನಪ್ಪ ಅವರನ್ನು ಕೆಲಸದಿಂದ ತೆಗೆಯಲಾಗಿರುವ ಸಂಗತಿ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯ ಸರಕಾಗಿದೆ. ಭಾರತ ಮೂಲಕ, ಕರ್ನಾಟಕದ ಕೊಡವ ಸಮುದಾಯದವರೆನ್ನಲಾದ ಮಾಧವ ಚಿನ್ನಪ್ಪ ಅವರು ಲಿಂಕ್ಡ್​ಇನ್​ನಲ್ಲಿ ತಮ್ಮನ್ನು ಲೇ ಆಫ್ ಮಾಡಲಾಗಿರುವ ವಿಚಾರವನ್ನು ತಿಳಿಸಿದ್ದಾರೆ. ಜುಲೈ 22ರಂದು ಪೋಸ್ಟ್ ಮಾಡಿರುವ ಅವರು, ಗೂಗಲ್​ನಲ್ಲಿ ತಮ್ಮ ಕಾರ್ಯಸಾಧನೆಗಳಿಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ.

2010ರಲ್ಲಿ ಗೂಗಲ್ ಸೇರಿದ ಅವರು 13 ವರ್ಷಗಳ ಅವಧಿಯಲ್ಲಿ ಗಮನಾರ್ಹ ಕೆಲಸಗಳನ್ನು ಮಾಡಿ ಸೈ ಎನಿಸಿದ್ದಾರೆ. ಡಿಜಿಟಲ್ ನ್ಯೂಸ್ ಇನಿಷಿಯೇಟಿವ್, ಜರ್ನಲಿಸಂ ಎಮರ್ಜೆನ್ಸಿ ರಿಲೀಫ್ ಫಂಡ್ ಇತ್ಯಾದಿ ಬಹಳ ಜನಪ್ರಿಯ ಮತ್ತು ಮಹತ್ವದ ಯೋಜನೆಗಳು ಅವರ ಮುಂದಾಳತ್ವದಲ್ಲಿ ನಡೆದಿವೆ. ಸದ್ಯ ಅವರು ಇನ್ನೂ ಕೆಲಸ ಬಿಟ್ಟಿಲ್ಲ, ಗಾರ್ಡನಿಂಗ್ ಲೀವ್​ನಲ್ಲಿದ್ದಾರೆ. ಗಾರ್ಡನಿಂಗ್ ಲೀವ್ ನಿರ್ದಿಷ್ಟ ಅವಧಿಯವರೆಗೆ ಉದ್ಯೋಗಿ ಯಾವುದೇ ಬಾಧ್ಯತೆ ಇಲ್ಲದೇ ಸ್ವತಂತ್ರವಾಗಿ ಕೆಲಸ ಮಾಡಬಹುದು. ಪೂರ್ಣ ಸಂಬಳ ಅವರಿಗೆ ಸಿಗುತ್ತದೆ. ಆರಾಮವಾಗಿ ಕೂತು ಮುಂದಿನ ವೃತ್ತಿಜೀವನದ ದಿಕ್ಕು ನಿರ್ಣಯಿಸಲು ಕೊಡುವ ಕಾಲಾವಕಾಶವೇ ಗಾರ್ಡನಿಂಗ್ ಲೀವ್.

ಅಮ್ಮನ ಜೊತೆ ಕಾಲ ಕಳೆದು ನಂತರ ಮುಂದಿನ ಕೆಲಸ ನಿರ್ಧರಿಸುತ್ತೇನೆ ಎನ್ನುವ ಮಾಧವ್ ಚಿನ್ನಪ್ಪ

ತಮ್ಮ ಲಿಂಕ್ಡ್​ಇನ್ ಪೋಸ್ಟ್​ನಲ್ಲಿ ಮಾಧವ ಚಿನ್ನಪ್ಪ ಅವರು ಕೌಟುಂಬಿಕ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ತಮ್ಮ ತಾಯಿ ಜೊತೆ ಕೆಲ ಕಾಲ ಇರಲು ಭಾರತಕ್ಕೆ ಬರಲಿರುವುದಾಗಿ ಹೇಳಿದ್ದಾರೆ. ತಮ್ಮ ಕುಟುಂಬದ ಕೆಲ ಸಮಸ್ಯೆಗಳಿಗೆ ತಾನು ಗಮನ ಕೊಡುವ ಜರೂರತ್ತು ಇದೆ. ಸೆಪ್ಟೆಂಬರ್​ನಲ್ಲಿ ಭಾರತದಲ್ಲಿರುವ ತನ್ನ ತಾಯಿಯನ್ನು ನೋಡಿಕೊಂಡು, ಆ ಬಳಿಕವಷ್ಟೇ ಅಕ್ಟೋಬರ್​ನಲ್ಲಿ ಕೆಲಸ ಮಾಡುವ ಬಗ್ಗೆ ಯೋಚಿಸುತ್ತೇನೆ ಎಂದು ಗೂಗಲ್​ನ ನ್ಯೂಸ್ ಇಕೋಸಿಸ್ಟಂ ಡೆವಲಪ್ಮೆಂಟ್​ನ ಡೈರೆಕ್ಟರ್ ಆಗಿರುವ ಮಾಧವ್ ಚಿನ್ನಪ್ಪ ಹೇಳಿದ್ದಾರೆ.

ಗೂಗಲ್​ನಲ್ಲಿ ತಾವಿದ್ದ 13 ವರ್ಷದ ಅವಧಿಯಲ್ಲಿ ಆದ ಸಾಧನೆಗಳನ್ನು ಮೆಲುಕು ಹಾಕುತ್ತಾ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಅದೇ ಉಸುರಿನಲ್ಲಿ ಅವರು, ಈ ಸಾಧನೆಗಳು ತನ್ನೊಬ್ಬನಿಂದ ಆಗಿದ್ದಲ್ಲ, ತಮ್ಮೊಂದಿಗಿದ್ದ ತಂಡದ ಎಲ್ಲಾ ಸದಸ್ಯರ ಸಹಕಾರದಿಂದ ಸಾಧ್ಯವಾಗಿದ್ದು ಎಂದು ಹೇಳಿಕೊಂಡಿದ್ದಾರೆ.

ಮಾಧವ ಚಿನ್ನಪ್ಪ ಅವರು ಮಾರ್ಕೆಟಿಂಗ್, ಬ್ಯುಸಿನೆಸ್, ಸ್ಟ್ರಾಟಿಜಿಕ್ ರಿಲೇಶನ್ಸ್ ಕ್ಷೇತ್ರಗಳಲ್ಲಿ 29 ವರ್ಷದ ಅನುಭವ ಹೊಂದಿದ್ದಾರೆ. 2010ರಲ್ಲಿ ಗೂಗಲ್ ಸೇರುವ ಮುನ್ನ ಅವರು ಬಿಬಿಸಿ ಜರ್ನಲಿಸಂನಲ್ಲಿ ಬಿಸಿನೆಸ್ ಡೆವಲಪ್ಮೆಂಟ್ ಮುಖ್ಯಸ್ಥರಾಗಿದ್ದರು.