ಸುಗುಣ ಚಿಕನ್ ಸ್ಥಾಪನೆ ಹಾಗೂ ಅದರ ಮಾಲೀಕರ ಇಂಟರೆಸ್ಟಿಂಗ್ ಕಥೆ

ಸುಗುಣ ಫುಡ್ಸ್ ಬಗ್ಗೆ ಕೇಳಿರಬಹುದು. ಹಲವು ಕೋಳಿ ಅಂಗಡಿಗಳಲ್ಲಿ ಸುಗುಣ ಬ್ರ್ಯಾಂಡ್ ಹೆಸರು ನೋಡಿರುತ್ತೀರಿ. ಸುಗುಣ ಎಂಬುದು ಭಾರತದ ಅತಿದೊಡ್ಡ ಚಿಕನ್ ಬ್ರ್ಯಾಂಡ್. ಪೌಲ್ಟ್ರಿ ಬ್ಯುಸಿನೆಸ್ ಅಥವಾ ಕುಕ್ಕುಟೋದ್ಯಮದಲ್ಲಿ ನಂಬರ್ ಒನ್ ಕಂಪನಿ. 1984ರಲ್ಲಿ ಆರಂಭವಾದ ಈ ಕಂಪನಿಯ ವ್ಯವಹಾರ ಇವತ್ತು 12,000 ಕೋಟಿ ರೂ ಉದ್ದಿಮೆಯಾಗಿ ಬೆಳೆದಿದೆ. ಬಿ ಸೌಂದರರಾಜನ್ ಮತ್ತು ಜಿಬಿ ಸುಂದರರಾಜನ್ ಅವರು ಸುಗುಣ ಫೂಡ್ಸ್ ಕಂಪನಿಯ ಮಾಲೀಕರು. ಬ್ರಾಯ್ಲರ್ ಬ್ರೀಡ್​ನ ಕೋಳಿ ಮತ್ತು ಮೊಟ್ಟೆಗಳ ಬ್ಯುಸಿನೆಸ್​ನಲ್ಲಿ ಸುಗುಣ ನಂಬರ್ ಒನ್.

ಸುಗುಣ ಫೂಡ್ಸ್ ಸಂಸ್ಥೆಯ ಛೇರ್ಮನ್ ಬಿ ಸೌಂದರರಾಜನ್ ಅವರು ಪೌಲ್ಟ್ರಿ ಬ್ಯುಸಿನೆಸ್ ಆರಂಭಿಸುವ ಸಾಹಸದ ಹಿಂದೆ ಕುತೂಹಲಕಾರಿ ಕಥೆ ಇದೆ. ಸೌಂದರರಾಜನ್ ಅವರು ಶಾಲಾ ಶಿಕ್ಷಣದ ಬಳಿಕ ಜಮೀನಿನಲ್ಲಿ ಕೆಲಸ ಮಾಡುತ್ತಾರೆ. ನಿರೀಕ್ಷಿತ ಲಾಭ ಬರದೇ ಹೋದಾಗ ಹೈದರಾಬಾದ್​ಗೆ ಹೋಗಿ ಅಗ್ರಿಕಲ್ಚರಲ್ ಪಂಪ್ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರುತ್ತಾರೆ. ಬಳಿಕ ಅವರ ಸಹೋದರ ಸುಂದರರಾಜನ್ ಅವರು ನಡೆಸುತ್ತಿದ್ದ ಬ್ಯುಸಿನೆಸ್ ಜೊತೆಗೂಡುತ್ತಾರೆ.

ರೈತರಿಗೆ ಚಿಕನ್ ಆಹಾರ ಮಾರುವುದು ರಾಜನ್ ಸಹೋದರರ ಬ್ಯುಸಿನೆಸ್ ಆಗಿತ್ತು. ಆಗ ರೈತರಿಗೆ ಕೋಳಿ ಸಾಕಾಣಿಕೆಯಲ್ಲಿ ಹಲವಾರು ಸಮಸ್ಯೆಗಳಿದ್ದವು. ಅದನ್ನು ಕಣ್ಣಾರೆ ಕಂಡ ಸೌಂದರರಾಜನ್ ಮತ್ತು ಸುಂದರರಾಜನ್ ಅವರಿಬ್ಬರು ಗುತ್ತಿಗೆ ಕೃಷಿ ಅಥವಾ ಕಾಂಟ್ರಾಕ್ಟ್ ಫಾರ್ಮಿಂಗ್ ಆರಂಭಿಸಿದರು. ಅದು ಆ ದಿನಗಳಲ್ಲಿ ಭಾರತಕ್ಕೆ ಹೊಸ ವಿಚಾರ.

1990ರಲ್ಲಿ 3 ಮಂದಿ ರೈತರು ಮಾತ್ರ ರಾಜನ್ ಸಹೋದರರ ಗುತ್ತಿಗೆ ಫಾರ್ಮಿಂಗ್​ಗೆ ಸೇರಿದ್ದರು. ಆಗ ಮೊದಲ ವರ್ಷದ ವಹಿವಾಟು ಕೇವಲ 5,000 ರೂ ಆಗಿತ್ತು. ಕೊಯಮತ್ತೂರು ಸಮೀಪದ ಉದಮಲೈಪೇಟೈಯಲ್ಲಿ ಮೊದಲ ಕೋಳಿಫಾರ್ಮ್ ಸ್ಥಾಪನೆಯಾಗಿತ್ತು. ಕೋಳಿಗಳನ್ನು ಬೆಳೆಯಲು ಬೇಕಾದ ಎಲ್ಲಾ ನೆರವನ್ನೂ ರಾಜನ್ ಬ್ರದರ್ಸ್ ನೀಡುತ್ತಿದ್ದರು. ಕೋಳಿಗಳು ಬೆಳೆದ ಬಳಿಕ ಅವನ್ನು ಖರೀದಿಸುತ್ತಿದ್ದರು. 7 ವರ್ಷಗಳ ಬಳಿಕ ಸುಗುಣ ಫೂಡ್ಸ್ ಸಂಸ್ಥೆಗೆ 40 ಕೋಳಿಸಾಕಾಣಿಕೆದಾರರು ಸೇರ್ಪಡೆಯಾದರು. ಕ್ರಮೇಣವಾಗಿ ಸುಗುಣ ಎಂಬುದು ತಮಿಳುನಾಡಿನಲ್ಲಿ ಚಿರಪರಿಚಿತವಾಯಿತು.

ನಂತರ ಸುಗುಣ ಫುಡ್ಸ್ ಸಂಸ್ಥೆ ರೈತರಿಗೆ ಆರೋಗ್ಯಯುತ ಕೋಳಿ ಸಾಕಾಣಿಕೆಗೆ ಮಾಡುವ ಹೈಟೆಕ್ ವಿಧಾನಗಳ ಸೌಲಭ್ಯ ಒದಗಿಸ ತೊಡಗಿತು. ಸುಗುಣ ಫೂಡ್ಸ್ ಇವತ್ತು ತಮಿಳುನಾಡು ಮಾತ್ರವಲ್ಲ 18 ರಾಜ್ಯಗಳಲ್ಲಿ 15,000 ಗ್ರಾಮಗಳಲ್ಲಿ 40,000 ಕೋಳಿಸಾಕಾಣಿಕೆದಾರರ ಗುತ್ತಿಗೆ ಪಡೆದಿದೆ.