ಮಂಡ್ಯ: ಬದುಕಿದ್ದವನ ಹೆಸರಲ್ಲಿ ನಕಲಿ ಡೆತ್ ಸರ್ಟಿಫಿಕೇಟ್ ಸೃಷ್ಟಿಸಿ ಬರೋಬ್ಬರಿ 35 ಎಕರೆ ಭೂಮಿಯನ್ನು ಕಬಳಿಕೆ ಮಾಡಲು ಮುಂದಾಗಿದ್ದ ಗ್ಯಾಂಗ್‍ನ್ನು ಮಳವಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮೈಸೂರು ಮೂಲದ ನಿವೃತ್ತ ಗ್ರಾಮಲೆಕ್ಕಿಗ ವೆಂಕಟೇಶ್, ದೇವರಾಜು, ಶ್ರೀನಿವಾಸ್, ಮುನಿರಾಜು, ಹಾಗೂ ಕೇಶವ ಮೂರ್ತಿ ಎಂದು ಗುರುತಿಸಲಾಗಿದೆ. ಆರೋಪಿಗಳು ಮಳವಳ್ಳಿ ತಾಲೂಕಿನ ಬೆಳಕವಾಡಿ ಸಮೀಪ ಇರುವ ಬೆಂಗಳೂರು ಮೂಲದ ಗಿರೀಶ್‍ರಾಜ್ ಎಂಬುವವರ 35 ಎಕರೆ ಜಮೀನು ಕಬಳಿಸಲು ಹೊಂಚು ಹಾಕಿದ್ದರು. ಇದಕ್ಕೆ ಪೂರಕ ದಾಖಲೆಗಳನ್ನು ಒದಗಿಸಲು ಬದುಕಿರುವ ಗಿರೀಶ್‍ರಾಜ್ ಹೆಸರಿನಲ್ಲಿ ನಕಲಿ ಡೆತ್ ಸರ್ಟಿಫಿಕೇಟ್ ಮಾಡಿಸಿದ್ದಾರೆ. ಬಳಿಕ ಪೌತಿ ಖಾತೆಗೆ ಅರ್ಜಿಯನ್ನು ಸಹ ಸಲ್ಲಿಸಿದ್ದಾರೆ. ಈ ವೇಳೆ ಗ್ರಾಮಲೆಕ್ಕಿಗ ಪ್ರವೀಣ್ ಸ್ಥಳ ಪರಿಶೀಲನೆಗೆ ಬಂದ ವೇಳೆ ಈ ವಂಚನೆ ಬೆಳಕಿಗೆ ಬಂದಿದೆ.
ಈ ವಿಚಾರವನ್ನು ಪ್ರವೀಣ್ ತಹಶಿಲ್ದಾರ್ ಅವರ ಗಮನಕ್ಕೆ ತಂದಿದ್ದಾರೆ. ಬಳಿಕ ತಹಶಿಲ್ದಾರ್ ಸೂಚನೆಯಂತೆ ಈ ವಂಚನೆಯ ಬಗ್ಗೆ ಮಳವಳ್ಳಿ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ದೂರು ಆಧರಿಸಿ ಮಳವಳ್ಳಿ ಪಟ್ಟಣ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ಮಾಡಿದ್ದಾರೆ. ಈ ವೇಳೆ ಆರೋಪಿಗಳು ನಕಲಿ ದಾಖಲೆ ಸೃಷ್ಟಿಸಿರುವುದನ್ನು ಒಪ್ಪಿಕೊಂಡಿದ್ದಾರೆ.
ಮನೆಯಲ್ಲಿಯೇ ನಕಲಿ ಸರ್ಕಾರಿ ಸೀಲ್ ಬಳಸಿ ಡೆತ್ ಸರ್ಟಿಫಿಕೇಟ್ ಮಾಡಿದ್ದಾರೆ. ಬಳಿಕ ನಕಲಿ ಡೆತ್ ಸರ್ಟಿಫಿಕೇಟ್, ವಂಶವೃಕ್ಷ ಸಲ್ಲಿಸಿ ಗಿರೀಶ್‍ರಾಜ್ ಮಗಳ ಹೆಸರಿಗೆ ಪೌತಿ ಖಾತೆ ಮಾಡುವಂತೆ ಮಳವಳ್ಳಿ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದಾರೆ. ಗ್ರಾಮಲೆಕ್ಕಿಗ ಸೇರಿದಂತೆ ಅಧಿಕಾರಿಗಳನ್ನು ಹಣಕೊಟ್ಟು ಡೀಲ್ ಮಾಡುವ ಪ್ಲಾನ್‍ನಲ್ಲಿ ಈ ವಂಚಕರು ಇದ್ದರು. ಸ್ಥಳ ಪರಿಶೀಲನೆಗೆ ವಿಎ ಪ್ರವೀಣ್ ತೆರಳಿದ ಸಂದರ್ಭದಲ್ಲಿ ಗಿರೀಶ್ ರಾಜ್ ಬದುಕಿರುವ ಸತ್ಯ ತಿಳಿದಾಗ ಇಡೀ ಪ್ರಕರಣ ಬೆಳಕಿಗೆ ಬಂದಿದೆ.
ಈ ಗ್ಯಾಂಗ್‍ಗೆ ಕ್ರಿಮಿನಲ್ ಹಿನ್ನೆಲೆ ಉಳ್ಳ ಭಾಗ್ಯಮ್ಮ ಎಂಬಾಕೆ ಲೀಡರ್ ಎಂದು ಹೇಳಲಾಗುತ್ತಿದೆ. ಈಕೆಯ ಮಾರ್ಗದರ್ಶನದಲ್ಲಿ ಈ ವಂಚನೆಗೆ ಮುಂದಾಗಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಈ ಹಿಂದೆ ಹಲವು ಅಪರಾಧಿ ಕೃತ್ಯಗಳಲ್ಲಿ ಈ ತಂಡ ಭಾಗಿಯಾಗಿದೆ. ಈಗ ಮಹಿಳೆಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.