ಶಿವಮೊಗ್ಗದಲ್ಲಿ ಎಟಿಎಂ ದರೋಡೆಗೆ ಜೆಸಿಬಿ ಕದ್ದು ತಂದ ಖದೀಮರು, ಮುಂದೇನಾಯ್ತು?

ಶಿವಮೊಗ್ಗ, ಜುಲೈ 26: ಎಟಿಎಂ ಕಳ್ಳತನ ಅಂದರೆ ಮೊದಲು ನಮ್ಮ ಕಣ್ಣಮುಂದೆ ಬರೋದು ಖದೀಮರು ರಾತ್ರೋರಾತ್ರಿ ಮುಸುಕು ಹಾಕಿಕೊಂಡು ಬಂದು ಗ್ಯಾಸ್ ಕಟ್ಟರ್ ಬಳಸಿ ಎಟಿಎಂ ಯಂತ್ರ ಕೊಂಡೊಯ್ಯುವುದು ಅಥವಾ ಎಟಿಎಂ ಯಂತ್ರವನ್ನು ಬಿಚ್ಚಿ ಅದರಲ್ಲಿನ ಹಣ ತೆಗೆದುಕೊಂಡು ಹೋಗುತ್ತಾರೆ. ಆದರೆ ಈ ಕಳ್ಳರು ಹಾಗಲ್ಲ. ಇವರೇ ಬೇರೆ ಇವರ ಸ್ಟೈಲ್​ ಯೇ ಬೇರೆ. ಕಳ್ಳರು ಸದ್ದು ಮಾಡದೇ ಯಾರ ಕಣ್ಣಿಗೂ ಕಾಣದಂಗೆ ಕಳ್ಳತನ ಮಾಡುದ್ರೆ ಇವರು ಜೆಸಿಬಿ ಬಳಸಿ ಎಟಿಎಂ ದರೋಡೆಗೆ ಇಳಿದಿದ್ದಾರೆ. ಜಗತ್ತಿನಲ್ಲಿ ಎಂಥೆಂಥಾ ಕಳ್ಳರು ಇದ್ದಾರೆ ನೋಡಿ. ಎಂಟಿಎಂ ದರೋಡೆ ಮಾಡಲೆಂದೇ ಈ ಖದೀಮರು ಜೆಸಿಬಿಯನ್ನು ಕದ್ದು ತಂದಿದ್ದಾರೆ.

ಶಿವಮೊಗ್ಗದ ವಿನೋಬನಗರ ಬಡಾವಣೆಯಲ್ಲಿ ಜೆಸಿಬಿ ಬಳಸಿ ಎಟಿಎಂ ದರೋಡೆಗೆ ಯತ್ನ ನಡೆದಿದೆ. ಎಟಿಎಂ ದರೋಡೆಗೆ ಜೆಸಿಬಿಯನ್ನು ಕದ್ದು ತಂದಿದ್ದ ದುಷ್ಕರ್ಮಿಗಳು ಆಕ್ಸಿಸ್ ಬ್ಯಾಂಕಿನ ಎಟಿಎಂ ದರೋಡೆಗೆ ಯತ್ನಿಸಿದ್ದಾರೆ. ಆದರೆ ರಾತ್ರಿ ಗಸ್ತು ಪೊಲೀಸರು ಬರುತ್ತಿದ್ದಂತೆ ಸ್ಥಳದಲ್ಲೇ ಜೆಸಿಬಿ ಬಿಟ್ಟು ಪರಾರಿಯಾಗಿದ್ದಾರೆ. ಪೊಲೀಸರು ಜೆಸಿಬಿ ವಶಕ್ಕೆ ಪಡೆದಿದ್ದು ಘಟನೆ ಕುರಿತು ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.