ಬೆಂಗಳೂರು, ಜುಲೈ 24: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್ ಕಂಡಕ್ಟರ್ ಮತ್ತು ಉತ್ತರ ಭಾರತೀಯ ವಲಸಿಗ ಎಂದು ಹೇಳಲಾಗುತ್ತಿರುವವನ ನಡುವೆ ನಡೆದ ಹೊಡೆದಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಟಿಕೆಟ್ ಶುಲ್ಕ ನೀಡದೇ ಪ್ರಯಾಣಿಕ ಕಂಡಕ್ಟರ್ ಜೊತೆ ಅಸಭ್ಯವಾಗಿ ಮಾತನಾಡಿದ್ದಾನೆ. ಈ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದೆ.
ವೀಡಿಯೊದಲ್ಲಿ ಇರುವಂತೆ, ಟಿಕೆಟ್ ಶುಲ್ಕ ನೀಡದ ಪ್ರಯಾಣಿಕ ಮತ್ತು ಕಂಡಕ್ಟರ್ ನಡುವೆ ಹೊಡೆದಾಟ ನಡೆಯುತ್ತದೆ. ಈ ವೇಳೆ ಇಬ್ಬರು ಮಹಿಳೆಯರು ತಡೆಯಲು ಯತ್ನಿಸಿದ್ದಾರೆ. ಆದರೂ ಇಬ್ಬರ ನಡುವೆ ಹೊಡೆದಾಟ ಮುಂದುವರಿಯುತ್ತದೆ. ಜಗಳ ತಾರಕಕ್ಕೇರುತ್ತಿದ್ದಂತೆ ಮಧ್ಯಪ್ರವೇಶಿಸಿದ ಚಾಲಕ, ಪ್ರಯಾಣಿಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಶುಲ್ಕ ಪಾವತಿಸುವಂತೆ ಹೇಳಿದ್ದಾರೆ.
ಬಸ್ ಚಾಲಕ ಮತ್ತು ಕಂಡಕ್ಟರ್ ‘ಇವನನ್ನು ಠಾಣೆಗೆ ಕರೆದುಕೊಂಡು ಹೋಗೋಣ’ ಎಂದು ಹೇಳುತ್ತಿರುವುದು ವೀಡಿಯೋದಲ್ಲಿ ಕೇಳಿಸಬಹುದು. ಇದರ ವಿಡಿಯೋ ಟ್ವಿಟರ್ನಲ್ಲಿ ವೈರಲ್ ಆಗುತ್ತಿದ್ದು, ಇದನ್ನು ಗಮನಿಸಿದ ನಗರ ಪೊಲೀಸರು, ರೀಟ್ವೀಟ್ ಮಾಡಿ, ನಿಖರವಾದ ಪ್ರದೇಶದ ಸ್ಥಳವನ್ನು ಒದಗಿಸುವಂತೆ ಮನವಿ ಮಾಡಿದ್ದಾರೆ. ಅದಾಗ್ಯೂ, ಈ ಘಟನೆ ಯಾವಾಗ ನಡೆದಿದ್ದು ಎಂಬುದರ ಬಗ್ಗೆ ನಿಖರವಾಗಿ ತಿಳಿದುಬಂದಿಲ್ಲ.