ಬೆಂಗಳೂರು: ನಗರದಲ್ಲಿ ಬಂಧಿತ ಶಂಕಿತ ಐವರು ಉಗ್ರರ ಬಂಧನ ಪ್ರಕರಣ ಮೊತ್ತೊಂದು ತಿರುವು ಪಡೆದುಕೊಂಡಿದೆ. ಶಂಕಿತ ಉಗ್ರರು ನಗರದಲ್ಲಿ ಸ್ಪೋಟ ನಡೆಸಲು ಸಂಚು ರೂಪಿಸಿದ್ದಲ್ಲದೆ, ಡ್ರಗ್ಸ್ ಕೂಡ ಸಪ್ಲೈ ಮಾಡುತ್ತಿದ್ದರು ಎಂಬ ಅಂಶ ಸಿಸಿಬಿ ತನಿಖೆ ವೇಳೆ ಬಯಲಾಗಿದೆ. ಬಂಧಿತರ ಐವರು ಶಂಕಿತ ಉಗ್ರರ ಪೈಕಿ ಮುದಾಸಿರ್ ಹಾಗೂ ಉಮರ್ ಇಬ್ಬರು ಶಂಕಿತ ಉಗ್ರರರು ಡ್ರಗ್ಸ್ ಸಪ್ಲೈ ಮಾಡುತ್ತಿದ್ದರು.
ಸಿಸಿಬಿ ಪೊಲೀಸರು ಶಂಕತಿ ಉಗ್ರ ಮುದಾಸಿರ್ ಪ್ರಿಯತಮೆಯನ್ನು ವಿಚಾರಣೆಗೆ ಒಳಪಡಿಸಿದಾಗ ಈ ಅಂಶ ಬಯಲಾಗಿದೆ. ಹೌದು ಮುದಾಸಿರ್ ಪ್ರಿಯತಮೆ ಕೈಯಲ್ಲಿ ಡ್ರಗ್ಸ್ ಇಟ್ಟು ನಾನು ಹೇಳಿದವರಿಗೆ ಇದನ್ನು ಕೊಡು ಎಂದು ಹೇಳಿ ಹೋಗುತ್ತಿದ್ದನಂತೆ. ಇದರಂತೆ ಪ್ರಿಯತಮ ಮುದಾಸಿರ್ ಹೇಳಿದವರಿಗೆ ಗೆಳತಿ ಡ್ರಗ್ಸ್ ಕೊಡುತ್ತಿದ್ದಳು. ಇನ್ನು ಮುದಾಸಿರ್ ತಾನು ಬಂಧನವಾದ ದಿನವೂ ಗೆಳತಿಗೆ ಡ್ರಗ್ಸ್ ಕೊಟ್ಟು ಸಪ್ಲೈ ಮಾಡು ಎಂದಿದ್ದನಂತೆ.
ಇನ್ನು ಐವರು ಶಂಕಿತ ಉಗ್ರರ ಕಸ್ಟಡಿ ಅವಧಿ ಇಂದು (ಜು.26) ಮುಕ್ತಾಯವಾಗುವ ಹಿನ್ನೆಲೆ ಸಿಸಿಬಿ ಪೊಲೀಸರು ಆರೋಪಿಗಳನ್ನು ಕೋರ್ಟ್ಗೆ ಹಾಜರು ಪಡಿಸಲಿದ್ದಾರೆ. ನ್ಯಾಯಾಲಯದ ಮುಂದೆ ಪ್ರಕರಣದ ಗಂಭೀರತೆಯನ್ನು ವಿವರಿಸಿ ಮತ್ತೆ 7 ದಿನ ಕಸ್ಟಡಿಗೆ ಕೇಳಲು ಸಿದ್ದತೆ ನಡೆಸಿದ್ದಾರೆ.