2021ಕ್ಕೆ ಹೋಲಿಸಿದರೆ 2022ರಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು 30% ಹೆಚ್ಚಳ – NWC

ನವದೆಹಲಿ: 2021 ಕ್ಕೆ ಹೋಲಿಸಿದರೆ 2022 ರಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು 30% ಹೆಚ್ಚಳವಾಗಿದೆ ಎಂದು ರಾಷ್ಟ್ರೀಯ ಮಹಿಳಾ ಹಕ್ಕುಗಳ ಆಯೋಗ ವರದಿ ನೀಡಿದೆ. ಮಣಿಪುರ ಹಾಗೂ ಪಶ್ಚಿಮ ಬಂಗಾಳದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಬಳಿಕ ದೇಶದ್ಯಾಂತ ಮಹಿಳೆಯರ ಸುರಕ್ಷತೆ ಬಗ್ಗೆ ಚರ್ಚೆ ಶುರುವಾಗಿರುವ ಹೊತ್ತಲ್ಲೇ ಬಿಡುಗಡೆಯಾಗಿರುವ ಈ ಅಂಕಿ ಅಂಶಗಳು ದೊಡ್ಡ ಆಘಾತ ಮೂಡಿಸಿದೆ.

2021 ರಲ್ಲಿ ರಾಷ್ಟ್ರೀಯ ಮಹಿಳಾ ಹಕ್ಕುಗಳ ಆಯೋಗದಲ್ಲಿ 23,700 ಪ್ರಕರಣಗಳು ದಾಖಲಾಗಿದ್ದವು, 2022 ರಲ್ಲಿ ಇದು 30,957ಕ್ಕೆ ಏರಿಕೆಯಾಗಿದೆ. 2014ರಲ್ಲಿ 33,906 ಪ್ರಕರಣಗಳು ದಾಖಲಾಗಿರುವುದು ಈವರೆಗೂ ಅತಿ ಹೆಚ್ಚಿನ ಸಂಖ್ಯೆಯಾಗಿದೆ ಎಂದು ಆಯೋಗ ಬಿಡುಗಡೆ ಮಾಡಿರುವ ಮಾಹಿತಿ ಹೇಳಿದೆ.

2022 ರಲ್ಲಿ ಮಹಿಳಾ ಆಯೋಗದಲ್ಲಿ ದಾಖಲಾಗಿರುವ ಒಟ್ಟು ಪ್ರಕರಣಗಳ ಪೈಕಿ 54.5% ರಷ್ಟು (16,872) ಪ್ರಕರಣಗಳು ಉತ್ತರ ಪ್ರದೇಶದಿಂದ ದಾಖಲಾಗಿದೆ. ದೆಹಲಿಯಿಂದ 3,004 (10%), ಮಹಾರಾಷ್ಟ್ರದಿಂದ 1,381 (5%), ಬಿಹಾರದಿಂದ 1,368 (4.4%), ಹರಿಯಾಣದಲ್ಲಿ 1,362 (4.4%), ರಾಜಸ್ಥಾನ 1,030 (3.3%), ತಮಿಳುನಾಡು 668 (2.2%), ಪಶ್ಚಿಮ ಬಂಗಾಳ 621 (2%), ಕರ್ನಾಟಕದಿಂದ 554 (1.8%) ಮತ್ತು ಉಳಿದ ರಾಜ್ಯಗಳು 2,955 (9.5%) ಪ್ರಕರಣಗಳು ದಾಖಲಾಗಿವೆ.

ಈ ದೂರುಗಳಲ್ಲಿ ಹೆಚ್ಚಿನವು ಭಾವನಾತ್ಮಕ ನಿಂದನೆ ಮತ್ತು ಕೌಟುಂಬಿಕ ಹಿಂಸಾಚಾರದ ಹಿನ್ನೆಲೆಯದಾಗಿದೆ. ಘನತೆಯಿಂದ ಬದುಕುವ ಹಕ್ಕು (ಭಾವನಾತ್ಮಕ ನಿಂದನೆ) ವಿಭಾಗದಲ್ಲಿ ಒಟ್ಟು 9,710 ದೂರುಗಳು, 6,970 ದೂರುಗಳು ಮಹಿಳೆಯರ ರಕ್ಷಣೆ, ಕೌಟುಂಬಿಕ ದೌರ್ಜನ್ಯದ ವಿರುದ್ಧ ಮತ್ತು 4,600 ದೂರುಗಳು ವಿವಾಹಿತ ಮಹಿಳೆಯರ ಕಿರುಕುಳ/ವರದಕ್ಷಿಣೆ ಕಿರುಕುಳದ ಅಡಿಯಲ್ಲಿ ದಾಖಲಾಗಿವೆ. ಉತ್ತರ ಪ್ರದೇಶದ ಹೆಚ್ಚಿನ ದೂರುಗಳು ಕೌಟುಂಬಿಕ ಹಿಂಸಾಚಾರ ಮತ್ತು ಭಾವನಾತ್ಮಕ ನಿಂದನೆಯ ಹಿನ್ನಲೆಯದಾಗಿವೆ ಎಂದು ಆಯೋಗದ ಅಂಕಿ ಅಂಶಗಳು ಹೇಳಿದೆ.

2,500 ಕ್ಕೂ ಹೆಚ್ಚಿನ ದೂರುಗಳನ್ನು ‘ಮಹಿಳೆ ಅಥವಾ ಕಿರುಕುಳದ ದೌರ್ಜನ್ಯ’ ವಿಭಾಗದ ಅಡಿಯಲ್ಲಿ ದಾಖಲಿಸಿದೆ. 1,701 ದೂರುಗಳು ‘ಅತ್ಯಾಚಾರ/ಅತ್ಯಾಚಾರದ ಪ್ರಯತ್ನ’ ಅಡಿಯಲ್ಲಿ, 1,623 ದೂರುಗಳು ‘ಮಹಿಳೆಯರ ಪ್ರಕರಣದಲ್ಲಿ ಪೊಲೀಸ್ ನಿರಾಸಕ್ತಿ’ ಅಡಿಯಲ್ಲಿ ಮತ್ತು 924 ದೂರುಗಳು ‘ಸೈಬರ್ ಅಪರಾಧಗಳ’ ಅಡಿಯಲ್ಲಿ ದಾಖಲಾಗಿವೆ.

ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರ ನೀಡಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ, 2022 ರಲ್ಲಿ ‘ವಿವಾಹಿತ ಮಹಿಳೆಯರಿಗೆ ಕಿರುಕುಳ/ವರದಕ್ಷಿಣೆ ಕಿರುಕುಳ’ ಅಡಿಯಲ್ಲಿ 357 ದೂರುಗಳ ಡೇಟಾವನ್ನು ಪ್ರಸ್ತುತಪಡಿಸಿದರು. 2021 ರಲ್ಲಿ 341 ಮತ್ತು 2020 ರಲ್ಲಿ 330 ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದ್ದರು. 2022 ರಲ್ಲಿ 1,710, 2021 ರಲ್ಲಿ 1,681 ಮತ್ತು 2020 ರಲ್ಲಿ 1,236 ದೂರುಗಳು ‘ಅತ್ಯಾಚಾರ/ಅತ್ಯಾಚಾರ ಯತ್ನ’ ಅಡಿಯಲ್ಲಿ ದಾಖಲಾಗಿವೆ. ಕಳೆದ 3 ವರ್ಷ ಹಾಗೂ ಪ್ರಸುತ್ತ ವರ್ಷದಲ್ಲಿ ಆಯೋಗದಲ್ಲಿ ‘ವರದಕ್ಷಿಣೆ’ ಮತ್ತು ‘ಅತ್ಯಾಚಾರ ಅಥವಾ ಅತ್ಯಾಚಾರ ಯತ್ನ’ ವಿಭಾಗಗಳ ಅಡಿಯಲ್ಲಿ ದಾಖಲಾದ ದೂರುಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಕೇಂದ್ರ ಸಚಿವರು ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ.

ಸಚಿವರ ಅಂಕಿ ಅಂಶಗಳ ಪ್ರಕಾರ ಜನವರಿ 2023ರ ವೇಳೆಗೆ 28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 411 ಇ-ಪೋಕ್ಸೊ ನ್ಯಾಯಾಲಯಗಳು ಸೇರಿದಂತೆ 764 ತ್ವರಿತ ವಿಶೇಷ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ಈ ನ್ಯಾಯಾಲಯಗಳು 1,44,000 ಕ್ಕೂ ಹೆಚ್ಚು ದೂರುಗಳನ್ನು ವಿಲೇವಾರಿ ಮಾಡಿದೆ, 1,98,000 ಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಉಳಿದಿವೆ.