ರೈಲಿನಲ್ಲಿ ಮಗುವಿಗೆ ಜನ್ಮ ನೀಡಿದ ಬಾಂಗ್ಲಾ ಮಹಿಳೆ, ನಿಲ್ದಾಣದಲ್ಲಿ ಗಂಟೆಗಟ್ಟಲೆ ನಿಂತ ರೈಲು

ಬಾಂಗ್ಲಾದೇಶದ ಮಹಿಳೆಯೊಬ್ಬರು ರೈಲಿನಲ್ಲೇ ಮಗುವಿಗೆ ಜನ್ಮ ನೀಡಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ನಿಲ್ದಾಣದ ಬಳಿ ನಿಲ್ಲಿಸಲಾಗಿದ್ದು, ಮಹಿಳೆಯು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳ ನಿರ್ದೇಶನದ ಮೇರೆಗೆ ಮುಂಬೈ-ಹೌರಾ  ರೈಲನ್ನು  ಆಗ್ನೇಯ ರೈಲ್ವೆಯ ಬಗ್ನಾನ್ ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ರೈಲ್ವೆ ಅಧಿಕಾರಿಗಳು ನಿಲ್ದಾಣದ ಬಳಿ ಆ್ಯಂಬುಲೆನ್ಸ್​ ವ್ಯವಸ್ಥೆ ಮಾಡಿದ್ದರು, ರೈಲು ಬಗ್ನಾನ್ ತಲುಪಿದ ತಕ್ಷಣ, ಮಹಿಳೆ ಮತ್ತು ನವಜಾತ ಶಿಶುವನ್ನು ಸ್ಥಳೀಯ ನರ್ಸಿಂಗ್ ಹೋಮ್‌ಗೆ ಕರೆದೊಯ್ಯಲಾಯಿತು ಎಂದು ಆರ್‌ಪಿಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಾಂಗ್ಲಾದೇಶದ ಸತ್ಖಿರಾ ಜಿಲ್ಲೆಯವರಾದ ಮಂಜಿಲಾ ಖಾತುನ್ ಮತ್ತು ಅವರ ಪತಿ ರೆಜೌಲ್ ಗಾಜಿ ವೈದ್ಯಕೀಯ ಉದ್ದೇಶಗಳಿಗಾಗಿ ಮುಂಬೈಗೆ ಹೋಗಿದ್ದರು ಮತ್ತು ಅಲ್ಲಿಂದ ಬರುತ್ತಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ ಪಶ್ಚಿಮ ಮೇದಿನಿಪುರ ಜಿಲ್ಲೆಯ ಖರಗ್‌ಪುರ ನಿಲ್ದಾಣದಿಂದ ರೈಲು ಹೊರಟ ಬಳಿಕ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ.

ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿರುವುದು ರೈಲಿನಲ್ಲಿದ್ದ ಪ್ರಯಾಣಿಕರಿಂದ ತಿಳಿದ ಟಿಟಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ಮಹಿಳೆ ಮತ್ತು ಆಕೆಯ ಮಗುವಿನ ಆರೋಗ್ಯ ಸ್ಥಿರವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ, ಮಗುವನ್ನು ಉತ್ತಮ ಚಿಕಿತ್ಸೆಗಾಗಿ ಕೋಲ್ಕತ್ತಾದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ನರ್ಸಿಂಗ್ ಹೋಮ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರೈಲನ್ನು ನಿಲ್ದಾಣದಲ್ಲಿ ನಿಲ್ಲಿಸುವ ನಿರ್ಧಾರವನ್ನು ಮಾನವೀಯ ಆಧಾರದ ಮೇಲೆ ತೆಗೆದುಕೊಳ್ಳಲಾಗಿದೆ ಎಂದು ಬಗ್ನಾನ್ ನಿಲ್ದಾಣದ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.